ಸಮಗ್ರ ಕೃಷಿಯಲ್ಲಿ ಯಶಸ್ವಿಯಾಗಿ ಯುವ ರೈತರಿಗೆ ಮಾದರಿಯಾದ ಮಂಗಳೂರಿನ ಕೃಷಿಕ!

ಸಮಗ್ರ ಕೃಷಿಯಲ್ಲಿ ಯಶಸ್ವಿಯಾದ ರೈತ ವೆಂಕಟಕೃಷ್ಣ ಶರ್ಮ

ಸಮಗ್ರ ಕೃಷಿಯಲ್ಲಿ ಯಶಸ್ವಿಯಾದ ರೈತ ವೆಂಕಟಕೃಷ್ಣ ಶರ್ಮ

ಡಿಗ್ರಿವರೆಗೆ ವಿದ್ಯಾಭ್ಯಾಸ ಪಡೆದಿರುವ ವೆಂಕಟಕೃಷ್ಣ ಶರ್ಮರು ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಮನೆಯಲ್ಲಿ ಪತಿ, ಇಬ್ಬರು ಪುತ್ರರು- ಸೊಸೆಯಂದಿರ ಜೊತೆ ನೆಮ್ಮದಿಯ ಕೃಷಿ ಜೀವನವನ್ನು ನಡೆಸುತ್ತಿದ್ದಾರೆ. ಕೃಷಿಗೆ ಮನೆಯವರು ಸಹ ಸಪೋರ್ಟ್ ನೀಡುತ್ತಿದ್ದು, ಇವರ ತೋಟದಲ್ಲಿ ನಿತ್ಯ ಐದು ಜನರಿಗೆ ಕೆಲಸವೂ ಲಭ್ಯವಾಗುತ್ತಿದೆ. ಒಟ್ಟಿನಲ್ಲಿ ಸಮಗ್ರ ಕೃಷಿಯಿಂದ ಯಶಸ್ವಿಯಾಗಿ ಕೃಷಿ ಬದಕನ್ನು ನಿರ್ವಹಣೆ ಮಾಡಬಹುದು ಎಂದು ಶರ್ಮರು ತೋರಿಸಿಕೊಟ್ಟಿದ್ದಾರೆ.

ಮುಂದೆ ಓದಿ ...
  • Share this:

ಮಂಗಳೂರು: ಕೃಷಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆಯಾ ಪ್ರದೇಶದ ಮಣ್ಣಿನ ಗುಣ, ಭೌಗೋಳಿಕ ವ್ಯವಸ್ಥೆ, ನೀರಾವರಿ ವ್ಯವಸ್ಥೆ ಹೀಗೆ ಹಲವು ಆಯಾಮಗಳನ್ನು ನೋಡಿಕೊಂಡು ಯಾವ ಕೃಷಿ ಮಾಡಬಹುದು ಎಂಬ ನಿರ್ಧಾರಕ್ಕೆ ಬರಬೇಕು. ಇದೇ ರೀತಿ ನಾವು ಇವತ್ತು ಹೇಳೋಕೆ ಹೊರಟಿರುವ ಈ ಸ್ಟೋರಿಯ ಕೃಷಿಕರೊಬ್ಬರು ತಮ್ಮಲ್ಲಿನ ವ್ಯವಸ್ಥೆಗಳಿಗುಣವಾದ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕರಾವಳಿ ಜಿಲ್ಲೆ ದಕ್ಷಿಣಕನ್ನಡದಲ್ಲಿಯೂ ಕೃಷಿಕರೊಬ್ಬರು ತಮ್ಮ ಜಾಗದ ಭೌಗೋಳಿಕ ವ್ಯವಸ್ಥೆ, ನೀರಾವರಿ ವ್ಯವಸ್ಥೆಗನುಗುಣವಾಗಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.


ಎನ್.ವೆಂಕಟಕೃಷ್ಣ ಶರ್ಮ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯ ನಿವಾಸಿ. ಇವರು ತಮ್ಮ ಒಟ್ಟು ಹನ್ನೆರಡು ಎಕರೆ ಜಾಗದಲ್ಲಿ ಸಮಗ್ರ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದಾರೆ. ಒಟ್ಟು ಹನ್ನೆರಡು ಎಕರೆ ಜಾಗದಲ್ಲಿ ಐದು ಎಕರೆಯಲ್ಲಿ ಅಡಕೆ, ಬಾಳೆ, ಕೊಕ್ಕೋ, ಜಾಯಿಕಾಯಿ, ತೆಂಗು, ಕಾಳುಮೆಣಸು ಕೃಷಿ ಮಾಡಿದ್ರೆ, ನೀರಾವರಿ ವ್ಯವಸ್ಥೆಯಿಲ್ಲದ ಮೂರು ಎಕರೆಯಲ್ಲಿ ಹಲಸಿನ ತೋಟವನ್ನು ನಿರ್ಮಾಣ ಮಾಡಿದ್ದಾರೆ.
ತೋಟದ ಬದಿಯಲ್ಲಿ ಹಲಸಿನ ಮರ ಬೆಳೆಸುವುದು ಸಹಜ. ಆದ್ರೆ ಇವರು ಮಾತ್ರ ಮೂರು ಎಕರೆ ಜಾಗವನ್ನು ಹಲಸಿನ ತೋಟಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಉತ್ತಮ ಹಣ್ಣಿನ ತಳಿಯನ್ನು ಆಯ್ಕೆ ಮಾಡಿ ಬೇರೆ ಬೇರೆ ತಳಿಯ 250ರಿಂದ 300 ಗಿಡಗಳನ್ನು ನೆಟ್ಟು ತೋಟ ನಿರ್ಮಾಣ ಮಾಡಿದ್ದಾರೆ. ಸುಮಾರು ಆರು ವರ್ಷದ ಹಿಂದೆ ಈ ಹಲಸಿನ ಗಿಡಗಳನ್ನು ನೆಟ್ಟಿದ್ದು, ಕೆಲ ಮರಗಳಲ್ಲಿ ಫಸಲು ಲಭ್ಯವಾಗಿದೆ.


ಇನ್ನು ವಿಶೇಷ ಅಂದ್ರೆ ಈ ಜಾಗಕ್ಕೆ ನೀರಾವರಿ ವ್ಯವಸ್ಥೆ ಇಲ್ಲದಿರುವುದರಿಂದ ಯಾವುದೇ ನೀರು, ಗೊಬ್ಬರಗಳನ್ನು ಹಾಕದೇ ಸಹಜವಾಗಿಯೇ ಹಲಸಿನ ಮರ ಬೆಳೆಯುವಂತೆ ಮಾಡಿದ್ದಾರೆ. ಹೀಗಾಗಿ ಫಸಲು ಸಿಗುವುದು ಒಂದಷ್ಟು ತಡವಾದರೂ ತೋಟ ಉತ್ತಮವಾಗಿದೆ. ಪ್ರಾರಂಭದಲ್ಲಿ ಗುಡ್ಡದಲ್ಲಿನ ಸಣ್ಣ ಸಣ್ಣ ಮರಗಳನ್ನು ಕಟ್ ಮಾಡಿ ಜೆ.ಸಿ.ಬಿ ಯಂತ್ರದ ಸಹಾಯದಿಂದ ರಬ್ಬರ್ ತೋಟ ನಿರ್ಮಾಣ ಮಾಡುವ ಹಾಗೆ ಟೇರೆಸ್ ಮಾಡಿಕೊಳ್ಳಲಾಗಿದೆ. ಆ ಬಳಿಕ ಜೆ.ಸಿ.ಬಿ ಮೂಲಕ ಗುಂಡಿ ತೆಗೆದು ಇಪ್ಪತ್ತು ಫೀಟ್‌ಗೊಂದರಂತೆ ಕಸಿಕಟ್ಟಿದ ಗಿಡಗಳನ್ನು ನೆಡಲಾಗಿದೆ. ನೀರಾವರಿ ವ್ಯವಸ್ಥೆಯಿಲ್ಲದ ಕಾರಣ ಮಳೆಗಾಲದ ಜೂನ್ ತಿಂಗಳಲ್ಲಿ ಗಿಡ ನೆಟ್ಟಿದ್ದಾರೆ. ಹೀಗಾಗಿ ಮಳೆಗಾಲ ಮುಗಿಯುವ ಸಂದರ್ಭದಲ್ಲಿ ಗಿಡ ಶಕ್ತಿಯನ್ನು ಪಡೆದು ಬೆಳೆದುನಿಂತಿರುತ್ತದೆ.


ವೆಂಕಟಕೃಷ್ಣ ಶರ್ಮರು ಕೇವಲ ಆದಾಯ ಪಡೆಯುವ ಉದ್ದೇಶಕ್ಕೆ ಮಾತ್ರವಲ್ಲದೇ ಆಸಕ್ತಿಯಿಂದ ಗಿಡಗಳನ್ನು ನೆಟ್ಟು ಈ ಹಲಸಿನ ತೋಟ ನಿರ್ಮಾಣ ಮಾಡಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 100 ಗಿಡ ನೆಡಲಾಗಿದೆ. ಒಂದೊಂದು ಎಕರೆಗೂ ಸುಮಾರು 30 ಸಾವಿರ ಖರ್ಚು ಬಂದಿದೆ. ಅರಣ್ಯ ಇಲಾಖೆಯಿಂದ, ತೋಟಗಾರಿಕೆ ಇಲಾಖೆಯಿಂದ ಒಂದಷ್ಟು ಸಹಾಯಧನವೂ ಶರ್ಮರಿಗೆ ಸಿಕ್ಕಿದೆ. ಇದರ ಜೊತೆ ಹಲಸಿನ ತೋಟದ ನಡು ನಡುವೆ ನೀರು ಇಲ್ಲದೆ ಬೆಳೆಯುವ ಹಣ್ಣಿನ ಮರಗಳಾದ ಚಿಕ್ಕು, ಮಾವು, ಸ್ಟಾರ್ ಫ್ರೂಟ್, ನೆಲ್ಲಿ ಹೀಗೆ ಹಲವು ಬಗೆಯ ಹಣ್ಣಿನ ಗಿಡವನ್ನು ಸಹ ಬೆಳೆಯಲಾಗಿದೆ. ಇನ್ನು ಐದು ಎಕೆರೆಯಲ್ಲಿ ಸುಮಾರು 2000 ಅಡಕೆ ಗಿಡ, ಮರವಿದೆ. ಸ್ಥಳೀಯ ಅಡಕೆ ತಳಿಯ ಗಿಡವನ್ನು ಮಾತ್ರ ನೆಟ್ಟು ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಸ್ಥಳೀಯ ಅಡಕೆಯಲ್ಲಿ ಫಸಲು ಕಡಿಮೆಯಾದ್ರು ಮರದ ಬಾಳಿಕೆ ಮಾತ್ರ ಹೆಚ್ಚು ಸಮಯದಾಗಿರುತ್ತದೆ ಎಂಬುದು ಶರ್ಮರ ಅಭಿಪ್ರಾಯ. ಸದ್ಯ ವೆಂಕಟಕೃಷ್ಣ ಶರ್ಮರಿಗೆ ಎಕರೆಗೆ ಸುಮಾರು 750 ಕೆ.ಜಿಯಷ್ಟು ಅಡಕೆ ಫಸಲು ಲಭ್ಯವಾಗುತ್ತಿದೆ.


ತೋಟದ ಮಧ್ಯದಲ್ಲಿ ಜಾಯಿಕಾಯಿ ಗಿಡಗಳನ್ನು ಸಹ ಬೆಳೆಯಲಾಗಿದೆ. ಸುಮಾರು 100 ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಅಡಕೆ ತೋಟದ ಮಧ್ಯೆಯೆ ಬೆಳೆದಿರುವುದರಿಂದ ಇದಕ್ಕಾಗಿ ಪ್ರತ್ಯೇಕ ಖರ್ಚು ಅಂತಾ ಇಲ್ಲ. ನೀರಾವರಿ ವ್ಯವಸ್ಥೆಯು ಸಹ ಅಡಕೆಗೆ ಹಾಕಿರುವುದನ್ನೇ ಇದಕ್ಕೆ ಬಳಸಲಾಗುತ್ತಿದೆ. ಮಳೆಗಾಲದಲ್ಲಿ ಜಾಯಿಕಾಯಿ ಬೆಳೆ ಆಗುವುದರಿಂದ ಕೆಲಸಗಾರರಿಗೂ ಆ ಟೈಮಲ್ಲಿ ಕೆಲಸ ಕಡಿಮೆಯಿರುವುದರಿಂದ ಕೊಯ್ಯುವುದಕ್ಕೂ ಸುಲಭವಾಗುತ್ತದೆ. ಜಾಯಿಕಾಯಿಯನ್ನು ಡ್ರೈ ಮಾಡುವುದಕ್ಕೂ ಡ್ರೈಯರ್ ವ್ಯವಸ್ಥೆಯನ್ನು ಶರ್ಮರು ಮಾಡಿಕೊಂಡಿದ್ದಾರೆ.


ನೀರಿಗಾಗಿ ಎರಡು ಕೆರೆ, ಒಂದು ಬೋರ್‌ವೆಲ್‌ನ್ನು ಬಳಸಲಾಗುತ್ತಿದೆ. ಕೆರೆಯ ನೀರು ಮುಗಿದ ಬಳಿಕವಷ್ಟೇ ಕೊಳವೆಬಾವಿಯ ನೀರನ್ನು ಬಳಸಲಾಗುತ್ತದೆ. ಸನಿಹದಲ್ಲೇ ವೆಂಟೆಂಡ್ ಡ್ಯಾಂ ಇರುವುದರಿಂದ ಅದರ ನೀರನ್ನು ಸಹ ಬಳಸಲಾಗುತ್ತಿದೆ. ತೋಟಕ್ಕೆ ಸ್ಪಿಂಕ್ಲರ್ ನೀರಿನ ವ್ಯವಸ್ಥೆಯನ್ನು ಮಾಡಿದ್ದು ತೋಟದಲ್ಲಿರುವ ಅಡಕೆ, ಬಾಳೆ, ಕೊಕ್ಕೋ, ಜಾಯಿಕಾಯಿ ಎಲ್ಲದಕ್ಕೂ ಇದೇ ನೀರು ಸಾಕಾಗುತ್ತದೆ. ಇನ್ನು ಅಡಕೆ ಮರ, ತೆಂಗಿನ ಮರಗಳಿಗೆ ಸಹಜವಾಗಿಯೇ ಹತ್ತಿಕೊಳ್ಳುವಂತಹ ಕಾಳುಮೆಣಸಿನ ಬಳ್ಳಿಗಳನ್ನು ನೆಡಲಾಗಿದೆ. ಇದರಿಂದ ಸುಮಾರು 75 ಕೆ.ಜಿಯಷ್ಟು ಕಾಳುಮೆಣಸು ಲಭ್ಯವಾಗುತ್ತಿದೆ.


ಐದು ಎಕರೆಯಲ್ಲಿ ಮಾಡಿರುವ ಕೃಷಿಗೆ ಹಟ್ಟಿಯ ಗೊಬ್ಬರವೇ ಸಾಕಾಗುತ್ತದೆ. ಸುಮಾರು ಎಂಟು ದನ-ಕರು ಇದೆ. ಡೈಜೆಸ್ಟರ್ ಪ್ಲ್ಯಾಂಟ್ ಅನ್ನು ಸಹ ನಿರ್ಮಾಣ ಮಾಡಲಾಗಿದ್ದು, ಸುಮಾರು ಒಂದೂವರೆ ಎಕರೆ ತೋಟಕ್ಕೆ ಇದರ ಸ್ಲರಿಯನ್ನೇ ನೀಡಲಾಗುತ್ತದೆ. ಉಳಿದ ತೋಟಕ್ಕೆ ಹಟ್ಟಿಗೊಬ್ಬರವನ್ನು ಬಳಸಲಾಗುತ್ತೆ. ಇದರ ಜೊತೆ ಸುಡುಮಣ್ಣನ್ನು ಬಳಸಲಾಗುತ್ತೆ, ತೆಂಗಿನ ಮರಕ್ಕೆ ಮಾತ್ರ ಒಂದಷ್ಟು ರಾಸಾಯನಿಕ ಗೊಬ್ಬರವನ್ನು ಹಾಕಲಾಗುತ್ತೆ.


ತೋಟದ ಮಧ್ಯೆ ಬೆಳೆದ ಬಾಳೆಗಿಡಗಳಲ್ಲಿ ಲಭ್ಯವಾಗುವ ಬಾಳೆಗೊನೆಯನ್ನು ಶರ್ಮರು ಯಾವತ್ತು ಮಾರಿಲ್ಲ. ಇದಕ್ಕಾಗಿ ಹಲ್ವ ಮೇಕಿಂಗ್ ಮೆಷಿನ್‌ನ್ನು ಇಟ್ಟುಕೊಂಡಿದ್ದಾರೆ. ಬಾಳೆ ಹಣ್ಣಿನಿಂದ ಹಲ್ವ ತಯಾರಿಸಿ ತಮ್ಮ ಪರಿಚಯಸ್ಥ ಗ್ರಾಹಕರಿಗೆ ನೀಡುತ್ತಾರೆ. ಬಾಳೆ ಹಣ್ಣಿನ ಜೊತೆ ಹಲಸಿನ ಹಣ್ಣಿನ ಹಲ್ವವನ್ನು ರೆಡಿ ಮಾಡಿ ಮಾರುಕಟ್ಟೆಗೆ ನೀಡುತ್ತಾರೆ. ಕಳೆದ ವರ್ಷ ಎರಡು ಕ್ವಿಂಟಾಲ್ ಹಲಸಿನ ಹಲ್ವವನ್ನು ರೆಡಿ ಮಾಡಿ ಮಾರಾಟ ಮಾಡಿದ್ದಾರೆ. ಮುಂದೆ ಹಲ್ವ ತಯಾರಿಯನ್ನು ಒಂದು ಬ್ರಾಂಡ್ ಆಗಿ ರೆಡಿ ಮಾಡಬೇಕು ಎಂಬುದು ಶರ್ಮರ ಕನಸಾಗಿದೆ.


ಇದನ್ನು ಓದಿ: ಅಧಿವೇಶನದಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಚರ್ಚೆ ಪ್ರಸ್ತಾಪ: ಡಿಕೆ ಶಿವಕುಮಾರ್ ಆಕ್ರೋಶ


150ಕ್ಕೂ ಹೆಚ್ಚು ತೆಂಗಿನ ಮರಗಳು ಸಹ ಇದ್ದು, ಹಣ್ಣಿನ ಮರಗಳು ಸಹ ಇದೆ. ಇನ್ನು ಇವರು ಮನೆಗೆ ಪೇಟೆಯಿಂದ ತರಕಾರಿಯನ್ನು ತರದೇ ವರುಷಗಳೇ ಕಳೆದು ಹೋಯತಂತೆ. ಯಾಕಂದ್ರೆ ಮನೆಗೆ ಬೇಕಾದ ತರಕಾರಿಯನ್ನು ಇವರೇ ಬೆಳೆದುಕೊಳ್ಳುತ್ತಾರೆ. ಸೀಸನ್‌ಗೆ ತಕ್ಕ ಹಾಗೆ ತರಕಾರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಸದ್ಯ ಬದನೆ, ಖಾಲಿ ಫ್ಲವರ್, ಕ್ಯಾಬೇಜ್ ತರಕಾರಿ ಬೆಳೆ ಇದೆ.


ಡಿಗ್ರಿವರೆಗೆ ವಿದ್ಯಾಭ್ಯಾಸ ಪಡೆದಿರುವ ವೆಂಕಟಕೃಷ್ಣ ಶರ್ಮರು ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಮನೆಯಲ್ಲಿ ಪತಿ, ಇಬ್ಬರು ಪುತ್ರರು- ಸೊಸೆಯಂದಿರ ಜೊತೆ ನೆಮ್ಮದಿಯ ಕೃಷಿ ಜೀವನವನ್ನು ನಡೆಸುತ್ತಿದ್ದಾರೆ. ಕೃಷಿಗೆ ಮನೆಯವರು ಸಹ ಸಪೋರ್ಟ್ ನೀಡುತ್ತಿದ್ದು, ಇವರ ತೋಟದಲ್ಲಿ ನಿತ್ಯ ಐದು ಜನರಿಗೆ ಕೆಲಸವೂ ಲಭ್ಯವಾಗುತ್ತಿದೆ. ಒಟ್ಟಿನಲ್ಲಿ ಸಮಗ್ರ ಕೃಷಿಯಿಂದ ಯಶಸ್ವಿಯಾಗಿ ಕೃಷಿ ಬದಕನ್ನು ನಿರ್ವಹಣೆ ಮಾಡಬಹುದು ಎಂದು ಶರ್ಮರು ತೋರಿಸಿಕೊಟ್ಟಿದ್ದಾರೆ.

Published by:HR Ramesh
First published: