• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮನೆ ಪಕ್ಕದ ಖಾಲಿ ಸೈಟ್ ನೋಡಿ ಬೇಜಾರು, ತಾನೇ ಮುಂದೆ ನಿಂತು ಸಖತ್ ಪಾರ್ಕ್ ಮಾಡಿದ 9ರ ಪೋರ !

ಮನೆ ಪಕ್ಕದ ಖಾಲಿ ಸೈಟ್ ನೋಡಿ ಬೇಜಾರು, ತಾನೇ ಮುಂದೆ ನಿಂತು ಸಖತ್ ಪಾರ್ಕ್ ಮಾಡಿದ 9ರ ಪೋರ !

ತನ್ನ ಕೈದೋಟದಲ್ಲಿ ಸಾಗರ್

ತನ್ನ ಕೈದೋಟದಲ್ಲಿ ಸಾಗರ್

ದಿನ ಬೆಳಗಾದರೆ 6 ಗಂಟೆಗೆ ಏಳುವ ಸಾಗರ್ ದಿನಚರಿ ಆರಂಭವಾಗುವುದೇ ಪುಣ್ಯಕೋಟಿ ಗಾರ್ಡನ್ ಮೂಲಕ. ಸಸ್ಯಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು, ಹೊಸ ತಳಿಯ ಸಸ್ಯಗಳು ಬಂದಿದ್ದರೆ ಅವುಗಳಿಗೇ ಬೇಕಾಗುವ ಮಣ್ಣನ್ನು ಸ್ವತಃ ತಾನೇ ಕಲಿಸಿ ಪಾಟ್ ಒಳಗಡೆ ಹಾಕುತ್ತಾನೆ.

  • Share this:

ರಾಯಚೂರು: ಕಲಿಯುತ್ತಿರುವುದು ಕೇವಲ 4 ನೇತರಗತಿ. ಆದರೆ ಈತನಿಗೆ ಇರುವ ಪರಿಸರ ಕಾಳಜಿ ಅಪಾರ. ಕಳೆದ ಎರಡು ವರ್ಷಗಳಿಂದ ಬಾಧಿಸುತ್ತಿರುವ ಕರೋನಾ ಮಹಮಾರಿ ಹಿನ್ನಲೆ ಶಾಲೆಗಳು ಮುಚ್ಚಿ ಹೋಗಿವೆ. ಮನೆಯಲ್ಲಿ ಸುಮ್ಮನೆ ಕುಳಿತು ಮಾಡುವುದಾದರೂ ಏನು.. ? ಎಂಬ ಪ್ರಶ್ನೆಗೆ ಈ ಬಾಲಕ ಕಂಡುಕೊಂಡ ಉತ್ತರ ಪರಿಸರ ಸಂರಕ್ಷಣೆ. ಕಲಿಕೆಯ ಬಿಡುವಿನ ವೇಳೆಯಲ್ಲಿ ಪರಿಸರ ಕಾಳಜಿ ಮೆರೆಯುತ್ತಿರುವ ಈ ಬಾಲಕ ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ನಿವಾಸಿ. ಸಾಗರ್ ಎಂಬುದು ಈತನ ಹೆಸರು.  ಪಟ್ಟಣದ ಎಸ್.ವಿ. ಬೊಮ್ಮಸಾಗರ ಶಾಲೆಯಲ್ಲಿ4 ನೇತ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿಯ ಪರಿಸರ ಪ್ರೇಮದಿಂದ ಇಂದು "ಪುಣ್ಯಕೋಟಿ" ಎಂಬ ಸಸ್ಯವನ ತಲೆ ಎತ್ತಿ ನಿಂತಿದೆ.


ದಿನ ಬೆಳಗಾದರೆ 6 ಗಂಟೆಗೆ ಏಳುವ ಸಾಗರ್ ದಿನಚರಿ ಆರಂಭವಾಗುವುದೇ ಪುಣ್ಯಕೋಟಿ ಗಾರ್ಡನ್ ಮೂಲಕ. ಸಸ್ಯಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು, ಹೊಸ ತಳಿಯ ಸಸ್ಯಗಳು ಬಂದಿದ್ದರೆ ಅವುಗಳಿಗೇ ಬೇಕಾಗುವ ಮಣ್ಣನ್ನು ಸ್ವತಃ ತಾನೇ ಕಲಿಸಿ ಪಾಟ್ ಒಳಗಡೆ ಹಾಕುತ್ತಾನೆ. ತಾನು ಪ್ರೀತಿಯಿಂದ ಬೆಳೆಸಿರುವ ಸಸಿಗಳನ್ನು ಮಗುವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಾನೆ. ಬಾಲ್ಯದಿಂದಲೇ ಪರಿಸರ, ಪ್ರಾಣಿ, ಪಕ್ಷಿಗಳೆಡೆಗೆ ವಿಶೇಷ ಕಾಳಜಿ ಬೆಳೆಸಿಕೊಂಡಿರುವ ಸಾಗರ್, ತಾನೊಬ್ಬನೇ ಅಲ್ಲ ಮರ ಗಿಡಗಳನ್ನ, ಸಸಿಗಳನ್ನ ಬೆಳೆಸುತ್ತೇನೆ ಎಂದು ಮುಂದೆ ಬಂದವರಿಗೆ ತಾನು ಬೆಳೆಸಿರುವ ಸಸಿಗಳನ್ನು ಉಚಿತವಾಗಿ ನೀಡುತ್ತಾನೆ.


ಇದನ್ನೂ ಓದಿ: Spot the Animal: ಈ ಚಿತ್ರದಲ್ಲಿ ಹಿಮ ಚಿರತೆ ಇದೆ.. ಎಲ್ಲಿದೆ ಹುಡುಕಿ ನೋಡೋಣ ! ಕಣ್ಣಿಗೊಂದು ಕಸರತ್ತು


ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗುಡಿಹಾಳ ಗ್ರಾಮದ ಡಾ. ಅಮರಗುಂಡಪ್ಪ ಮತ್ತು ಬಸಮ್ಮ ದಂಪತಿಗಳ ಮಗ ಈ ಸಾಗರ್. ಸದ್ಯ ಮುದಗಲ್ ಪಟ್ಟಣದಲ್ಲಿ ನೆಲೆಸಿರುವ ಇವರ ಕುಟುಂಬ ಸಾಗರ್ ನ ಪರಿಸರ ಪ್ರೇಮಕ್ಕೆ ಬೆನ್ನೆಲುಬಾಗಿ ನಿಂತಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಅಮರಗುಂಡಪ್ಪ ಪರಿಸರದ ಬಗ್ಗೆ ಮಗನಿಗೆ ಇರುವ ಕಾಳಜಿ, ಪ್ರೀತಿ ಕಂಡು ಮನೆಯ ಪಕ್ಕದಲ್ಲಿ 30*40 ಸೈಟೊಂದನ್ನ ಅವನ ಹವ್ಯಾಸಕ್ಕೆ ತಕ್ಕಂತೆ ಉದ್ಯಾನವನ ನಿರ್ಮಾಣಕ್ಕೆ ಮೀಸಲಿಟ್ಟಿದ್ದಾರೆ.


ಮುದಗಲ್ ಪಟ್ಟಣದ ಜನರಿಗೆ, ಅದರಲ್ಲೂ ಸಾಗರ್ ಕುಟುಂಬ ವಾಸವಿರುವ ರಾಮಲಿಂಗೇಶ್ವರ ಕಾಲೋನಿಯಲ್ಲಿ 'ಪುಣ್ಯಕೋಟಿ' ಗಾರ್ಡನ್ ಎಲ್ಲರಿಗೂ ಅಚ್ಚುಮೆಚ್ಚಿನ ತಾಣವಾಗಿದೆ. ವಾಯು ವಿಹಾರಿಗಳಿಗಂತೂ ವಿಶ್ರಾಂತಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.. ಪುಣ್ಯಕೋಟಿ ಉದ್ಯಾನವನದಲ್ಲಿ ವಿವಿದ ಬಗೆಯ ವಿಭಿನ್ನ ತಳಿಯ ಸಸ್ಯಗಳಿವೆ. ಮಯೂರಿ, ರುಹಾಲಿಯ, ಮನೀ ಪ್ಲಾಂಟ್, ಅಕಾಲಿಫಾ, ಪೆಂಟನಸ್, ಸಫ್ಲೇರ, ಬೇಬಿ ಸನ್ ರೋಸ್, ಹೀಗೆ ನಾನಾ ಬಗೆಯ ಹಲವು ಜಾತಿಯ ಸಸ್ಯಗಳು ಇಲ್ಲಿ ಕಾಣ ಸಿಗುತ್ತವೆ.
ಕೋಟ್.


ಪರಿಸರ ಮಾಲಿನ್ಯ ತಡೆಗಟ್ಟದಿದ್ದರೆ ಮನುಕುಲಕ್ಕೆ ಕಂಟಕವಿದೆ. ಕರೋನಾದಂತಹ ಮಹಾಮಾರಿ ರೋಗಗಳು ನಮ್ಮನ್ನ ಬಾಧಿಸಬಾರದು ಎಂದರೆ, ಪರಿಸರದ ಬಗೆಗಿನ ಮನುಷ್ಯನ ಮನಸ್ಥಿತಿ ಬದಲಾಗಬೇಕು. ನನಗೆ ಪರಿಸರದ ಬಗ್ಗೆ ಒಲವು ಮೂಡಲು ಕಾರಣ ನನ್ನ ಅಜ್ಜ ವೃತ್ತಿಯಲ್ಲಿ ಕೃಷಿಕರಾಗಿರುವ ಗುಡಿಹಾಳ ಅಮರಣ್ಣ, ಮತ್ತು ತಂದೆ ಡಾ. ಅಮರಗುಂಡಪ್ಪ, ಮತ್ತು ನನ್ನ ಶಾಲೆಯ ಶಿಕ್ಷಕರು ಹೇಳಿಕೊಟ್ಟ ಪಾಠವೇ ಪ್ರೇರಣೆ ಎನ್ನುತ್ತಾನೆ.


ಪುಣ್ಯಕೋಟಿ ಉದ್ಯಾನವನ ಕ್ಕೆ ಒಮ್ಮೆ ಭೇಟಿ ನೀಡಿದರೆ, ಅಲ್ಲಿ ಕಾಣುವ ಸಸ್ಯ ಸಂಕುಲಕ್ಕೆ ಮನಸೋಲದವರೇ ಇಲ್ಲ. ಬಣ್ಣ ಬಣ್ಣದ ತರ ತರದ ಸಸ್ಯಗಳನ್ನು ಹೊತ್ತು ನಿಂತ ಪಾಟ್ ಗಳು ಕಣ್ಮನ ತಣಿಸುತ್ತವೆ. ಇಂತಹ ಪರಿಸರವನ್ನು ಆಸ್ವಾದಿಸಲು ಪುಣ್ಯಕೋಟಿ ಗಾರ್ಡನ್ ಗೆ ಬರುವಂತಹ ಪರಿಸರ ಪ್ರೇಮಿಗಳಿಗೆ, ಅವರು ಬೆಳೆಸುವ ಇಚ್ಛೆ ವ್ಯಕ್ತಪಡಿಸಿದರೆ ಉಚಿತವಾಗಿ ಸಸಿಗಳನ್ನು ಕೊಟ್ಟು ಕಳುಹಿಸುತ್ತಾನೆ. ಬಾಲಕನ ಈ ಪರಿಸರ ಪ್ರೇಮಕ್ಕೆ ಇಡೀ ಕುಟುಂಬವೇ ಸಾತ್ ನೀಡುತ್ತಿದೆ. ಆರೋಗ್ಯಕರ ಜೀವನ ನಡೆಸಲು ಪರಿಸರ ಮುಖ್ಯ ಎಂಬ ಅರಿವು ಈ ಬಾಲಕನಂತೆ ಎಲ್ಲರಲ್ಲೂ ಒಡಮೂಡಿದರೆ, ಭುವಿ ಸ್ವರ್ಗವಾಗುತ್ತದೆ.


(ವರದಿ: ವಿಶ್ವನಾಥ್ ಹೂಗಾರ್ )

top videos
    First published: