ಕೊಡಗು : ಅವರಿಬ್ಬರು ಎಂಟು ವರ್ಷಗಳಿಂದ ಒಂದೇ ಜೀವ ಎರಡು ದೇಹ ಎನ್ನುವಂತೆ ಅಮರ ಪ್ರೇಮಿಗಳಂತೆ (Love Birds) ಇದ್ದರು. ಆದರೆ ಕಳೆದ 4 ತಿಂಗಳಿಂದ ಆಕೆ ತನ್ನ ಪ್ರೇಮಿಯನ್ನು ಒಲ್ಲೆ ಎನ್ನೋದಕ್ಕೆ ಶುರು ಮಾಡಿದ್ದಳು. ನಿನ್ನನ್ನು ಒರಿಸಿದರೆ ನನಗೆ ಕಣ್ಣೀರೇ ಗತಿ ಎಂದು ಬಿಟ್ಟಿದ್ದಳು. ಹೀಗಾಗಿ ಎಂಟು ವರ್ಷದ ಪ್ರೀತಿ ನಾಲ್ಕು ತಿಂಗಳಲ್ಲಿ ಮುಗಿದು ಇದೀಗ ಪ್ರಿಯಕರ ನೇಣಿಗೆ (Boy Committed Suicide) ಕೊರಳೊಡ್ಡಿದ್ದಾನೆ. ಇಬ್ಬರದು ಮುದ್ದಾದ ಜೋಡಿ, ಮೇಡ್ ಫಾರ್ ಈಚ್ ಅದರ್ ಎನ್ನುವಂತಿದ್ದರು. ಆದರೆ ಕಳೆದ ನಾಲ್ಕು ತಿಂಗಳಲ್ಲಿ ಎದ್ದಿದ್ದ ಬಿರುಗಾಳಿಗೆ ಪ್ರಿಯಕರ 28 ವರ್ಷದ ದರ್ಶನ್ ನೇಣಿಗೆ ಕೊರಳೊಡ್ಡಿ ಜೀವಬಿಟ್ಟಿದ್ದಾನೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಸುಳುಗೋಡಿನ ಶಿವದಾಸ್ ಮತ್ತು ಶಾರದ ದಂಪತಿಯ ಒಬ್ಬನೇ ಮಗ ದರ್ಶನ್. ಇನ್ನು ಐದು ತಿಂಗಳು ಕಳೆದಿದ್ದರೆ ದರ್ಶನ್ ಹಸೆಮಣೆ ಏರೋದಕ್ಕೆ ಸಂಬಂಧಿಕರೆಲ್ಲಾ ಸಾಕ್ಷಿ ಆಗಬೇಕಾಗಿತ್ತು. ಆದರೆ ವಿಧಿ ಮಾತ್ರ ಆತನ ಸಾವನ್ನು ಕಂಡು ಸಂಬಂಧಿಕರು ದುಃಖದ ಕಡಲಿನಲ್ಲಿ ಮುಳುಗುವಂತೆ ಮಾಡಿದೆ. ದರ್ಶನ್ ಸುಳುಗೋಡಿನಿಂದ ಕೇವಲ 6 ಕಿ ಮೀಟರ್ ದೂರದ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಇಬ್ಬರೂ ಗೋಣಿಕೊಪ್ಪದ ಖಾಸಗಿ ಶಾಲೆಯಲ್ಲಿ ಓದಿದವರು. ಆಗಿನಿಂದಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಬಳಿಕ ಕಾಲೇಜು ದಿನಗಳಲ್ಲಿ ಆ ಪ್ರೀತಿಯೇ ಅವರ ಪ್ರಪಂಚವಾಗಿಬಿಟ್ಟಿತ್ತು. ಅಷ್ಟರಮಟ್ಟಿಗಿನ ಅಮರ ಪ್ರೇಮವದು.
ಮದುವೆಗೆ ಒಪ್ಪಿದ್ದ ಪೋಷಕರು
ಪಿಯುಸಿ ಮುಗಿಸಿ ಪದವಿಗೆ ಬರುವಷ್ಟರಲ್ಲಿ ಇಬ್ಬರ ಪ್ರೀತಿಯ ವಿಷಯ ಎರಡು ಮನೆಗಳಿಗೂ ಗೊತ್ತಾಗಿದೆ. ಈ ವೇಳೆ ಯುವತಿಯ ತಂದೆ ತಾಯಿಗಳು ವಿರೋಧ ವ್ಯಕ್ತಪಡಿಸಿದ್ದರಂತೆ. ಆದರೆ ಒಬ್ಬನೇ ಮಗನಾಗಿದ್ದರಿಂದ ಮತ್ತು ಇಬ್ಬರು ಮಲಯಾಳಿ ಹಿಂದೂಗಳಾಗಿದ್ದರಿಂದ ದರ್ಶನ್ ತಂದೆ ಶಿವದಾಸ್ ಯುವತಿಯ ಮನೆಗೆ ಹೋಗಿ ಮಾತನಾಡಿದ್ದರಂತೆ. “ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ, ನಾವು ವಿರೋಧ ಮಾಡಿ, ಅವರಿಬ್ಬರು ಏನಾದರೂ ಮಾಡಿದರೆ ನಮ್ಮ ಮರ್ಯಾದೆಯೇ ಹೋಗುತ್ತದೆ” ಎಂದು ಯುವತಿಯ ಪೋಷಕರನ್ನು ಶಿವದಾಸ್ ಒಪ್ಪಿಸಿದ್ದರಂತೆ. ಕೊನೆಗೆ ದರ್ಶನ್ ಗೆ ಮಗಳನ್ನು ಕೊಟ್ಟು ಮದುವೆ ಮಾಡುವುದಕ್ಕೆ ಒಪ್ಪಿದ್ದರಂತೆ. ಮದುವೆಗೆ ಒಪ್ಪಿದ್ದರಿಂದ ಯುವತಿ ಮತ್ತು ದರ್ಶನ್ ಬಾನಾಡಿಗಳಾಗಿ ಪ್ರೀತಿಯ ಬಾನಿನಲ್ಲಿ ತೇಲಿದ್ದಾರೆ. ಎಲ್ಲೆಲ್ಲೋ ಇಬ್ಬರು ಓಡಾಡಿದ್ದಾರೆ. ಹೋದಲೆಲ್ಲಾ ಸೆಲ್ಫಿತೆಗೆದುಕೊಂಡು ಖುಷಿಪಟ್ಟಿದ್ದಾರೆ. ಆದರೆ ಯುವತಿ ಪದವಿ ಓದುತ್ತಿದ್ದರಿಂದ ಸದ್ಯಕ್ಕೆ ಮದುವೆ ಬೇಡ ಎಂದು ಮುಂದೂಡಿದ್ದರಂತೆ. ದರ್ಶನ್ ಮನೆಯಲ್ಲಿ ಆರ್ಥಿಕವಾಗಿ ಸ್ಥಿತಿವಂತರಲ್ಲದಿದ್ದರಿಂದ ಪಿಯುಸಿ ಮುಗಿಸಿದ ದರ್ಶನ್ ‘ಇಂಡಿಯನ್ ಕಾಫಿ ಹೌಸ್’ ಕಂಪೆನಿಗೆ ಉದ್ಯೋಗಿಯಾಗಿ ಸೇರಿದ್ದಾನೆ.
ಕಳೆದ ನಾಲ್ಕು ವರ್ಷಗಳಿಂದಲೂ ಮಧ್ಯಪ್ರದೇಶದ ಸಿಂಗ್ರೋಳ್ಳಿಯಲ್ಲಿರುವ ಕಂಪೆನಿಯ ಬ್ರಾಂಚ್ ನಲ್ಲಿ ಉದ್ಯೋಗ ಮಾಡುತ್ತಿದ್ದಂತೆ. ನಿತ್ಯವೂ ಪ್ರಿಯತಮೆಗೆ ವಿಡಿಯೋ ಕಾಲ್ ಮಾಡೋದು, ಮೆಸೇಜ್ ಚಾಟ್ ಮಾಡಿಕೊಂಡು ಸಂತಸವಾಗಿಯೇ ಇದ್ದನಂತೆ. ಆದರೆ ಇತ್ತೀಚೆಗೆ ಯುವತಿ ತಾಯಿ ಮತ್ತು ಆಕೆಯ ಸಂಬಂಧಿ ದಿವ್ಯಾ ಎಂಬುವವರು ಅವನೊಂದಿಗೆ ಮದುವೆ ಬೇಡ ಅಂತ ತೀವ್ರ ವಿರೋಧ ವ್ಯಕ್ತಡಿಸುತ್ತಿದ್ದರಂತೆ. ನೀನೇನಾದರೂ ಅವನನ್ನು ಮದುವೆಯಾದರೆ ಮನೆಯವರು ಯಾರೂ ಬದುಕೋದಿಲ್ಲ” ಅಂತಲೂ ಬೆದರಿಕೆಯೊಡ್ಡಿದ್ದರಂತೆ. ಹೀಗಾಗಿ ಯುವತಿ ದರ್ಶನ್ ನನ್ನು ಮದುವೆ ಆಗೋದಿಲ್ಲ, ಈ ಮದುವೆ ಬೇಡ ಅಂತ ಅಂದಿದ್ದಳು ಅಂತ ಮೃತ ದರ್ಶನ್ ನ ಸೋದರ ಅತ್ತೆ ಮಗಳು ಪುಷ್ಪಾ ಆರೋಪ ಮಾಡಿದ್ದಾರೆ.
ಮದುವೆ ಬೇಡ ಎಂದ ಯುವತಿ
ಪೋಷಕರ ಮತ್ತು ಸಂಬಂಧಿಕರ ಮಾತಿಗೆ ಸೋತಿದ್ದ ಯುವತಿ 'ನನಗೆ ಈ ಮದುವೆ ಇಷ್ಟ ಇಲ್ಲ. ನಾನು ನಿಮಗೆಲ್ಲಾ ಮೋಸ ಮಾಡುತ್ತಿದ್ದೇನೆ' ಅಂತಾ ದರ್ಶನ್ ಅಕ್ಕ ದಿವ್ಯಾಗೆ ಮೆಸೇಜ್ ಮಾಡಿದ್ದಳಂತೆ. ಜೊತೆಗೆ ತನ್ನ ಪ್ರಿಯಕರ ದರ್ಶನ್ ಗೂ ಇದನ್ನೇ ಹೇಳಿದ್ದಳಂತೆ. ಯಾಕೆ ಎಂದು ಕೇಳಿದರೆ ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುತ್ತಿರಲಿಲ್ಲವಂತೆ ಯುವತಿ. ನಾಲ್ಕು ದಿನಗಳ ಹಿಂದೆ ಬೆಳಿಗ್ಗೆ ಎಂಟುವರೆಗೆ ಮಧ್ಯಪ್ರದೇಶದಿಂದಲೇ ಯುವತಿಯ ತಾಯಿಗೆ ವಿಡಿಯೋ ಕಾಲ್ ಮಾಡಿದ್ದ ದರ್ಶನ್ “ನಾನು ಸಾಯುತ್ತಿದ್ದೇನೆ” ಎಂದು ಹೇಳಿ ಹಗ್ಗವನ್ನೆಲ್ಲಾ ತೋರಿಸಿದ್ದನಂತೆ. ಇದನ್ನು ದರ್ಶನ್ ತಾಯಿ ಶಾರದಾಗೆ ಯುವತಿಯ ತಾಯಿಯೇ ಕಾಲ್ ಮಾಡಿ ಹೇಳಿದ್ದರಂತೆ. ಕೂಡಲೇ ದರ್ಶನ್ ಮನೆಯವರು ಎಷ್ಟೇ ಕಾಲ್ ಮಾಡಿದ್ರೂ ದರ್ಶನ್ ಫೋನ್ ರಿಸೀವ್ ಮಾಡಿಲ್ಲ.
ಇದನ್ನು ಓದಿ: Maharishi Valmiki Jayanti: ವಾಲ್ಮೀಕಿ ಜನಾಂಗ ನಿಷ್ಠೆ, ಪ್ರಾಮಾಣಿಕತೆಗೆ ಹೆಸರುವಾಸಿ: ಸಚಿವ ಡಾ.ಕೆ.ಸುಧಾಕರ್
ಯುವತಿ ಮತ್ತು ಆಕೆಯ ಕುಟುಂಬದವರ ವಿರುದ್ಧ ಕೊಡಗು ಎಸ್ಪಿಗೆ ಡೆತ್ ನೋಟ್ ಬರೆದಿಟ್ಟ ದರ್ಶನ್ ತನ್ನ ಪ್ರೀತಿಯ ಪ್ರಪಂಚವನ್ನು ಬಿಟ್ಟು, ನೇಣಿಗೆ ಕೊರಳೊಡ್ಡಿ ಇಹಲೋಕವನ್ನು ತ್ಯಜಿಸಿದ್ದಾನೆ. ದರ್ಶನ್ ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದರಿಂದ ಅಲ್ಲಿನ ಸಿಂಗ್ರೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಪ್ರದೇಶದಿಂದ ದರ್ಶನ್ ನ ಮೃತದೇಹವನ್ನು ತಂದು ಆತನ ಸ್ವಗ್ರಾಮ ಕೊಡಗಿನ ಸುಳುಗೋಡಿನಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಗಿದೆ.
ದರ್ಶನ್ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಕಾರಣವಾದ ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಎನ್ನೋದು ಸಂಬಂಧಿಕರ ಆಗ್ರಹ. ಯುವತಿ ಎಂಟು ವರ್ಷದಿಂದ ಪ್ರೀತಿಸಿದಳೋ ಇಲ್ಲಾ, ಪ್ರೀತಿಯ ನಾಟಕವಾಡಿದಳೋ ಒಟ್ಟಿನಲ್ಲಿ ಆಕೆಗೆ ಮರುಳಾದ ದರ್ಶನ್ ತನ್ನನ್ನು ಸಾಕಿದ ತಂದೆ ತಾಯಿಯ ಸ್ಥಿತಿಯ ಬಗ್ಗೆಯೂ ಚಿಂತಿಸದೆ ಇಹಲೋಕ ತ್ಯಜಿಸಿದ್ದು ಮಾತ್ರ ದುರಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ