HOME » NEWS » District » 75 PERCENT CORONA PATIENT CURED IN KODAGU DISTRICT RH

ಕೊಡಗಿನ ಶೇ.75ರಷ್ಟು ಕೊರೋನಾ ರೋಗಿಗಳು ಗುಣಮುಖ; ಜಿಲ್ಲೆಯ ಜನರಲ್ಲಿ ದೂರಾದ ದುಗುಡ

ಕೊಡಗು ಜಿಲ್ಲೆ ಶೀತದ ವಾತಾವರಣ ಇರುವ ಜಿಲ್ಲೆಯಾಗಿದ್ದು, ಮಳೆ ಆರಂಭವಾದಲ್ಲಿ ಕೊರೋನಾ ಭಾರೀ ಪ್ರಮಾಣದಲ್ಲಿ ಜಿಲ್ಲೆಯ ಜನರಿಗೆ ತಗುಲಲಿದೆ ಎನ್ನುವ ಆತಂಕ ಏಪ್ರಿಲ್ ಮೇ ತಿಂಗಳಲ್ಲಿ ಕಾಡಿತ್ತು. ಆದರೆ ಈಗ ಸೋಂಕು ಹರಡುವ ಸಂಖ್ಯೆಯೂ ಕಡಿಮೆಯಾಗಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

news18-kannada
Updated:July 29, 2020, 7:23 AM IST
ಕೊಡಗಿನ ಶೇ.75ರಷ್ಟು ಕೊರೋನಾ ರೋಗಿಗಳು ಗುಣಮುಖ; ಜಿಲ್ಲೆಯ ಜನರಲ್ಲಿ ದೂರಾದ ದುಗುಡ
ಸಾಂದರ್ಭಿಕ ಚಿತ್ರ
  • Share this:
ಕೊಡಗು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಗಾಳಿ ವೇಗದಲ್ಲಿ ಹರಡುತ್ತಿದ್ದು, ಪ್ರತಿದಿನ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಗುಣಮುಖವಾಗುತ್ತಿರುವ ಪ್ರಕರಣಗಳು ಕಡಿಮೆ ಎನ್ನುವ ಆತಂಕವೂ ಇದೆ. ಅದಕ್ಕೆ ತದ್ವಿರುದ್ಧವಾಗಿ ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ರೋಗಿಗಳು ಗುಣಮುಖರಾಗುತ್ತಿದ್ದಾರೆ.

ಕೊರೊನಾ ಎಂಬ ಮಾರಕ ವೈರಸ್ ರಾಜ್ಯದಲ್ಲಿ ಬಾರೀ ಸಂಖ್ಯೆಯಲ್ಲಿ ಏರಿದ್ದ ಸಂದರ್ಭದಲ್ಲೂ ಕೊಡಗು ಜಿಲ್ಲೆಯಲ್ಲಿ ಕೇವಲ ಎರಡಂಕಿಗಿಂತಲೂ ಕಡಿಮೆ ಸಂಖ್ಯೆಯ ಜನರಿಗೆ ಕೊರೋನಾ ಸೋಂಕು ಇತ್ತು. ಆದರೆ ಕಳೆದ ಒಂದೂವರೆ ತಿಂಗಳಲ್ಲಿ ಮೂರಂಕಿಯನ್ನು ದಾಟಿ 350 ಮೀರಿದೆ. ಆದರೆ ಅಷ್ಟೇ ಸಂಖ್ಯೆಯಲ್ಲಿ ಕೊಡಗಿನಲ್ಲಿ ಕೊರೋನಾದಿಂದ ಗುಣಮುಖರಾಗುತ್ತಿದ್ದಾರೆ ಎನ್ನುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ.

ಕೊಡಗಿನಲ್ಲಿ ಈಗಾಗಲೇ ಬರೋಬ್ಬರಿ 356 ಜನರಿಗೆ ಕೊರೋನಾ ತಗುಲಿದೆ. ಇವರಲ್ಲಿ 266 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನುಳಿದ 84 ಜನರಿಗೆ ಮಾತ್ರವೇ ಕೊರೋನಾ ಕೇರ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದರೆ ಅಂದರೆ ಶೇ.75 ರಷ್ಟು ಜನರು ಗುಣಮುಖರಾಗಿದ್ದಾರೆ.

ಇದುವರೆಗೆ ಕೊಡಗಿನಲ್ಲಿ ಕೇವಲ 6 ಜನರು ಮಾತ್ರವೇ ಕೊರೋನಾದಿಂದ ಮೃತಪಟ್ಟಿದ್ದಾರೆ. ಅವರು ಸಹ ಸರಿಯಾದ ಸಂದರ್ಭಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರೆ ಅವರು ಕೂಡ ಗುಣಮುಖರಾಗಲು ಸಾಧ್ಯತೆ ಇತ್ತು. ಐಸಿಯುನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರು ಕೇವಲ ಇಬ್ಬರು ಮಾತ್ರ. ಹೀಗಾಗಿ ಕೊಡಗಿನಲ್ಲಿ ಜನರು ಕೊರೋನಾ ಬಂದು ಕೂಡಲೇ ಆತಂಕ ಪಡುವ ಯಾವುದೇ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್.

ಕೊಡಗು ಭೌಗೋಳಿಕವಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಸಹಜವಾಗಿಯೇ ಹೆಚ್ಚು ಮಳೆ ಸುರಿಯುವ ಪ್ರದೇಶ ಕೂಡ ಹೌದು. ಹೀಗಾಗಿ ಶೀತದ ವಾತಾವರಣವೂ ಇದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಶೀತದ ವಾತಾವರಣದಲ್ಲಿ ಈ ಕೊರೋನಾ ಹರಡುವುದು ಮತ್ತು ಅದರಿಂದ ಅಪಾಯ ಜಾಸ್ತಿ. ಆದರೂ ಕೊಡಗಿನಲ್ಲಿ ಕೊರೋನಾ ಹರಡಿರುವುದು ಕಡಿಮೆ. ಅಂದರೆ ಜನರು ಕೂಡ ಕೊರೋನಾ ಹರಡದಂತೆ ಹೆಚ್ಚು ಮುನ್ನೆಚ್ಚರಿಕೆ ವಹಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುತ್ತಿದ್ದಾರೆ. ಜೊತೆಗೆ ಅನಗತ್ಯವಾಗಿ ಜನರು ಹೊರಗೆ ಬರುವುದನ್ನು ಕಡಿಮೆ ಮಾಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಕೋವಿಡ್ ಟೆಸ್ಟ್ ಗೆ ಒಳಗಾಗಿ ರೋಗ ನಿಯಂತ್ರಣ ಮಾಡುವುದರಲ್ಲಿ ಜಾಗರೂಕರಾಗಿದ್ದಾರೆ. ಹೀಗಾಗಿಯೇ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಕೊರೋನಾ ಪೀಡಿತರ ಸಂಖ್ಯೆ ಕಡಿಮೆ ಇದ್ದರೆ, ಅದರಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

ಇದನ್ನು ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19​: ಒಂದೇ ದಿನ 5536 ಕೇಸ್​​, 1.07 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಒಟ್ಟಿನಲ್ಲಿ ಕೊಡಗು ಜಿಲ್ಲೆ ಶೀತದ ವಾತಾವರಣ ಇರುವ ಜಿಲ್ಲೆಯಾಗಿದ್ದು, ಮಳೆ ಆರಂಭವಾದಲ್ಲಿ ಕೊರೋನಾ ಭಾರೀ ಪ್ರಮಾಣದಲ್ಲಿ ಜಿಲ್ಲೆಯ ಜನರಿಗೆ ತಗುಲಲಿದೆ ಎನ್ನುವ ಆತಂಕ ಏಪ್ರಿಲ್ ಮೇ ತಿಂಗಳಲ್ಲಿ ಕಾಡಿತ್ತು. ಆದರೆ ಈಗ ಸೋಂಕು ಹರಡುವ ಸಂಖ್ಯೆಯೂ ಕಡಿಮೆಯಾಗಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
Published by: HR Ramesh
First published: July 29, 2020, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories