ಕಾರವಾರ: ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ದಾಂಡೇಲಿ ತಾಲೂಕಿನ ಭರ್ಚಿಯಲ್ಲಿ ಆರು ಆರೋಪಿಗಳನ್ನು ಕಾರು ಹಾಗೂ 72 ಲಕ್ಷ ಖೋಟಾ ನೋಟು ಮತ್ತು 4.50 ಲಕ್ಷ ಅಸಲಿ ನೋಟುಗಳ ಸಮೇತ ವಶಕ್ಕೆ ಪಡೆದ ಘಟನೆ ನಡೆದಿದೆ...ಸದ್ದಿಲ್ಲದೆ ಖೋಟಾ ನೋಟು ವ್ಯವಹಾರ ಜಾಲ ಬೆಳಕಿಗೆ ತಂದಿದ್ದಾರೆ ದಾಂಡೇಲಿ ಪೋಲಿಸರು.
ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ,ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭರ್ಚಿ ಚೆಕ್ ಪೋಸ್ಟ್ ನಲ್ಲಿ ಅನುಮಾನಾಸ್ಪದ ಕಾರನ್ನು ತಡೆದ ಪೊಲೀಸರು, ಪರಿಶೀಲನೆಗೆ ಮುಂದಾದಾಗ ಕಾರು ರತ್ನಗಿರಿ ಕಡೆಯಿಂದ ಬಂದಿದೆ ಎನ್ನುವುದು ತಿಳಿದುಬಂದಿದೆ. ಪೊಲೀಸರಿಗೆ ತಮ್ಮ ಮೇಲೆ ಅನುಮಾನ ಬಂದಿದೆ ಎನ್ನುವುದು ಗೊತ್ತಾಗುತ್ತಲೇ ಕಾರಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಒಬ್ಬ ಕಾರು ಬಾಗಿಲು ತೆರೆದು ಓಡಿ ಹೋಗಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲಿಸರು ಕಾರನ್ನು ಸುತ್ತುವರೆದು ಪರಿಶೀಲಿಸಿದಾಗ ಕಾರಿನಲ್ಲಿ ಭಾರೀ ಮೊತ್ತದ ನೋಟಿನ ಕಂತೆಗಳು ಇರುವುದು ಪತ್ತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾರು ತಡೆದು ವಿಚಾರಣೆ ನಡೆಸುತ್ತಿರುವಾಗಲೇ ಹಿಂಬದಿಯಲ್ಲಿ ಮತ್ತೊಂದು ಕಾರು ಬಂದಿದ್ದು, ಅದರಲ್ಲಿಯೂ ಇಬ್ಬರು ಆರೋಪಿಗಳಿದ್ದು, ಅವರನ್ನೂ ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆಗ ವನಶ್ರೀ ಭಾಗದ ಶಿವಾಜಿ ಶ್ರವಣ್ ಎನ್ನುವವರ ಮನೆಯಲ್ಲಿ 4.5 ಲಕ್ಷ ಅಸಲಿ ನೋಟು ಪಡೆದು, 9 ಲಕ್ಷ ಮೌಲ್ಯದ ನಕಲಿ ನೋಟು ನೀಡಲು ಪ್ಲಾನ್ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇದನ್ನು ಓದಿ: Lock down Extension: ಲಾಕ್ಡೌನ್ ವಿಸ್ತರಣೆ ಬಗ್ಗೆ ಶನಿವಾರ ಮತ್ತೆ ಸಭೆ; ಅಂದೇ ಅಂತಿಮ ನಿರ್ಧಾರ ಪ್ರಕಟ
ಬಂಧಿತ ಆರೋಪಿಗಳನ್ನು ತೀವ್ರತರದ ವಿಚಾರಣೆಗೆ ಒಳಪಡಿಸಿದಾಗ ಇನ್ನೂ 62 ಲಕ್ಷ ಮೊತ್ತದ ಖೋಟಾ ನೋಟು ಪತ್ತೆಯಾಗಿದೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಕಿರಣ ದೇಸಾಯಿ, ಗಿರೀಶ ಪೂಜಾರಿ, ಬೆಳಗಾವಿಯ ಅಮರ ನಾಯ್ಕ, ಸಾಗರ ಕುಣ್ಣೂರ್ಕರ್, ದಾಂಡೇಲಿಯ ಶಬ್ಬೀರ್ ಕುಟ್ಟಿ ಹಾಗೂ ಶಿವಾಜಿ ಶ್ರವಣ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿಯೇ ಅತೀ ದೊಡ್ಡ ಖೋಟಾ ನೋಟು ಪ್ರಕರಣ ಎನ್ನಬಹುದಾದ ಈ ಪ್ರಕರಣವನ್ನು ಬೇಧಿಸುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ದಾಂಡೇಲಿ ಡಿಎಸ್ಪಿ ಗಣೇಶ, ಸಿಪಿಐ ಪ್ರಭು, ಗ್ರಾಮೀಣ ಠಾಣೆಯ ಪಿಎಸ್‌ಐ ಗಾಡೇಕರ್, ಪಿಎಸ್‌ಐ ಯಲ್ಲಾಲಿಂಗ, ನಗರ ಠಾಣೆಯ ಪಿಎಸ್‌ಐ ಯಲ್ಲಪ್ಪ ಹಾಗೂ ದಾಂಡೇಲಿ ಗ್ರಾಮೀಣ ಮತ್ತು ನಗರ ಠಾಣೆಯ ಎಲ್ಲಾ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಖೋಟಾ ನೋಟಿನ ದಂಧೆ ಬೆಳಕಿಗೆ ಬಂದಿದೆ. ಈ ದಂಧೆಯ ಜಾಲವನ್ನು ಕೆದಕುತ್ತ ಹೋದರೆ ಆಳ ಬಾವಿಯೇ ಸಿಗುತ್ತಿದೆ. ದಾಂಡೇಲಿ ಹೇಳಿ ಕೇಳಿ ಉತ್ತರ ಕನ್ನಡ ಜಿಲ್ಲೆಯ ಮಿನಿ ಇಂಡಿಯಾ ಎಂದೇ ಖ್ಯಾತಿ ಎಲ್ಲಿ ಏನು ಸಿಗಲ್ವೋ ಅದು ದಾಂಡೇಲಿ ಯಲ್ಲಿ ಸಿಗತ್ತೆ ಎನ್ನುವ ಮಾತು ಕೂಡಾ ಇದೆ. ಪ್ರವಾಸೋದ್ಯಮದಲ್ಲಿ ತನ್ನದೇ ಚಾಪು ಮೂಡಿಸಿದ ದಾಂಡೇಲಿಯಲ್ಲಿ ಈಗ ಖೋಟಾ ನೋಟಿನ ಕುಳಗಳು ಕೂಡಾ ಬೇರೂರಿದ್ದಾರೆ ಎನ್ನೋದು ದಾಂಡೇಲಿ ಪೋಲೀಸರು ಸಾಬೀತು ಪಡಿಸಿದ್ದಾರೆ. ಈಗ ಬಂಧಿತರಾಗಿರುವ ಆರೋಪಿಗಳ ಪೈಕಿ ನಾಲ್ವರು ದಾಂಡೇಲಿಯವರೆ ಎನ್ನಲಾಗಿದೆ. ಹೀಗಿರುವಾಗ ಈ ದಂಧೆಗೆ ದಾಂಡೇಲಿಯೇ ಕಿಂಗ್ ಪಿನ್ ಎನ್ನೋದು ಕೂಡ ಖಾತ್ರಿ ಆದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ