ಯುವಕ ನೀರು ಪಾಲಾದ ಸ್ಥಳದಲ್ಲಿಯೇ ಏಳು ಜನ ಅದೃಷ್ಟವಶಾತ್ ಬಚಾವ್ ; ಆದರೂ ನಿಂತಿಲ್ಲ ಉಮರಾಣಿ ಬ್ಯಾರೇಜ್ ಮೇಲಿನ ಓಡಾಟ

ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಪಿಕ್‌ ಅಪ್‌ ವಾಹನಕಕ್ಕೆ ಹಗ್ಗ ಕಟ್ಟಿ ಟ್ರ್ಯಾಕ್ಟರ್‌ ಮೂಲಕ ಹೊರಕ್ಕೆ ಎಳೆದು ತಂದಿದ್ದಾರೆ. ಈ ಮೂಲಕ ಪಿಕ್‌ ಅಪ್‌ ವಾಹನಕ್ಕೆ ಉಂಟಾಗುತ್ತಿದ್ದ ಹೆಚ್ಚುವರಿ ಹಾನಿಯನ್ನು ತಪ್ಪಿಸಿದ್ದಾರೆ

news18-kannada
Updated:September 15, 2020, 7:13 PM IST
ಯುವಕ ನೀರು ಪಾಲಾದ ಸ್ಥಳದಲ್ಲಿಯೇ ಏಳು ಜನ ಅದೃಷ್ಟವಶಾತ್ ಬಚಾವ್ ; ಆದರೂ ನಿಂತಿಲ್ಲ ಉಮರಾಣಿ ಬ್ಯಾರೇಜ್ ಮೇಲಿನ ಓಡಾಟ
ಬ್ಯಾರೇಜ್ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಪಿಕ್‌ ಅಪ್‌ ವಾಹನ
  • Share this:
ವಿಜಯಪುರ(ಸೆಪ್ಟೆಂಬರ್​.15): ಜನ ಮರಳೋ ಜಾತ್ರೆ ಮರಳೋ ಎಂಬುವಂತಾಗಿದೆ ಭೀಮಾ ತೀರದ ಜನರ ವರ್ತನೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಮಾನಾಂತರ ಗಡಿಯಲ್ಲಿ ಭೀಮಾ ನದಿಗೆ ನಿರ್ಮಿಸಲಾಗಿರುವ ಎಂಟೂ ಬ್ಯಾರೇಜುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಆದರೆ, ಜನ ಮಾತ್ರ ಇದಾವುದನ್ನೂ ಲೆಕ್ಕಿಸದೆ ಈ ಬ್ಯಾರೇಜುಗಳ ಮೂಲಕ ಸಂಚಾರ ಮುಂದುವರೆಸಿದ್ದಾರೆ. ಕಾಲ್ನಡಿಗೆಯಲ್ಲಿ, ಮೋಟರ್ ಸೈಕಲ್ ಗಳಲ್ಲಿ, ಲಘು ಸರಕು ಸಾಗಿಸುವ ವಾಹನಗಳಲ್ಲಿ ಈ ಬ್ಯಾರೇಜುಗಳ ಮೇಲೆ ಕರ್ನಾಟದಿಂದ ಮಹಾರಾಷ್ಟ್ರಕ್ಕೆ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತಿರುಗಾಡುತ್ತಿದ್ದಾರೆ.  ಕಳೆದ ಬುಧವಾರ ಮಹಾರಾಷ್ಟ್ರದ ಸೋಲಾಪುರಕ್ಕೆ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದ ವಿಜಯಪುರ ಜಿಲ್ಲೆಯ ಹತ್ತಳ್ಳಿ ಗ್ರಾಮದ ಯುವಕ ರಮೇಶ ಬಸರಗಿ(25) ಇದೇ ಬ್ಯಾರೇಜಿನಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಶನಿವಾರ 20 ಕಿ. ಮೀ. ದೂರದ ಟಾಕಳಿ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದ, ಆದರೂ ಕೂಡ ಜನ ಈಗಲೂ ಎಚ್ಚೆತ್ತುಕೊಳ್ಳುತ್ತಿಲ್ಲ.

ಈ ಮತ್ತೊಂದು ಘಟನೆ ನಡೆದಿದೆಯಾದರೂ, ಇಲ್ಲಿ ಯಾವ ಜೀವ ಹಾನಿಯೂ ಆಗಿಲ್ಲ. ಆದರೆ, ಘಟನೆ ಮಾತ್ರ ಮೈ ನವಿರೇಳಿಸುವಂತಿದೆ. ಮೂರು ದಿನಗಳ ಹಿಂದೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ದಕ್ಷಿಣ ಸೋಲಾಪುರ ತಾಲೂಕಿನ ಸಾದೇಪುರದಿಂದ ಸಿಮೆಂಟ್ ತುಂಬಿಕೊಂಡ ಮಿನಿ ಸರಕು ಸಾಗಣೆ ಪಿಕ್ ಅಪ್ ವಾಹನ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಕಡೆಗೆ ಬರುತ್ತಿತ್ತು. ಅದರಲ್ಲಿ ಏಳು ಜನ ಪ್ರಯಾಣಿಕರಿದ್ದರು. ಈ ಸಂದರ್ಭದಲ್ಲಿ ಉಮರಾಣಿ-ಲವಗಿ ಬ್ಯಾರೇಜ್ ಉಕ್ಕಿ ಹರಿಯುತ್ತಿದ್ದರೂ ಲೆಕ್ಕಿಸದೇ ಪಿಕ್‌ ಅಪ್‌ ಚಾಲಕ ವಾಹನವನ್ನು ತುಂಬಿ ಹರಿಯುತ್ತಿದ್ದ ಭೀಮಾ ನದಿ ನೀರಿನಲ್ಲಿಯೇ ಓಡಿಸಿದ್ದಾನೆ. ಬ್ಯಾರೇಜ್ ಮಧ್ಯದ ವರೆಗೆ ಹೋದ ಪಿಕ್‌ ಅಪ್‌ ವಾಹನ, ಬ್ಯಾರೇಜ್ ಮಧ್ಯೆ ಸಿಲುಕಿಕೊಂಡಿದೆ.

ಬ್ಯಾರೇಜಿನ ಕಲ್ಲಿಗೆ ತಟ್ಟಿ ನಿಂತಿದೆ. ಇಲ್ಲದಿದ್ದಲ್ಲಿ ಭಾರೀ ಅನಾಹುತ ಕಾದಿತ್ತು. ಅತ್ತ ಮುಂದೆಯೂ ಹೋಗಲಾಗದೇ, ಇತ್ತ ಹಿಂದೆಯೂ ಬಾರಲಾಗದೆ ವಾಹನ ಅಲ್ಲಿಯೇ ಸಿಲುಕಿಕೊಂಡಿದ್ದರಿಂದ ಅದರಲ್ಲಿದ್ದ 7 ಜನ ಕೆಳಗಿಳಿದು ಬಂದು ಸುರಕ್ಷಿತವಾಗಿ ಕರ್ನಾಟಕದ ದಡ ಸೇರಿದ್ದಾರೆ.

ಇದನ್ನೂ ಓದಿ : ಶಾಲೆಗೆ ಹೋಗದೆ ಇದ್ದಿದ್ದರೆ , ಲಾಯರ್ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ : ಸಿದ್ದರಾಮಯ್ಯ

ಇಂದು ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಪಿಕ್‌ ಅಪ್‌ ವಾಹನಕಕ್ಕೆ ಹಗ್ಗ ಕಟ್ಟಿ ಟ್ರ್ಯಾಕ್ಟರ್‌ ಮೂಲಕ ಹೊರಕ್ಕೆ ಎಳೆದು ತಂದಿದ್ದಾರೆ. ಈ ಮೂಲಕ ಪಿಕ್‌ ಅಪ್‌ ವಾಹನಕ್ಕೆ ಉಂಟಾಗುತ್ತಿದ್ದ ಹೆಚ್ಚುವರಿ ಹಾನಿಯನ್ನು ತಪ್ಪಿಸಿದ್ದಾರೆ. ಆದರೆ, ಈಗಲೂ ಜನ ಮಾತ್ರ ತುಂಬಿ ಹರಿಯುತ್ತಿರುವ ಬ್ಯಾರೇಜ್ ಮೇಲೆ ಸಂಚಾರ ಮಾತ್ರ ಮುಂದುವರೆಸಿರುವುದು ಊರಿಗೊಂದು ಚಿಂತೆಯಾದರೆ, ಜನರಿಗೊಂದು ಚಿಂತೆ ಎಂಬ ಮಾತಿಗೆ ಹೇಳಿ ಮಾಡಿಸಿದಂತಿದೆ.

ಕಡೇ ಪಕ್ಷ ರಾಜ್ಯದ ವ್ಯಾಪ್ತಿಯಲ್ಲಿರುವ ಬ್ಯಾರೇಜುಗಳ ಒಂದು ಎರಡೂ ಬದಿಗೆ ವಾಹನಗಳು ಮತ್ತು ಜನರು ಒಂದು ವೇಳೆ ಆಯತಪ್ಪಿ ಬಿದ್ದರೂ ಮುಂದೆ ಹೋಗದಂತೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಭೀಮಾ ತೀರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Published by: G Hareeshkumar
First published: September 15, 2020, 6:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading