Corona Alert- ಕೆಜಿಎಫ್​ಗೆ ಕೇರಳ ಕಂಟಕ; ನರ್ಸಿಂಗ್ ಕಾಲೇಜಲ್ಲಿ 65 ಮಂದಿಗೆ ಕೋವಿಡ್ ಸೋಂಕು ದೃಢ

ಕೆಜಿಎಫ್​ನ ನೂರುನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 65ಕ್ಕೆ ಏರಿದೆ. ಪಾಸಿಟಿವ್ ಬಂದಿರುವ ಇವರೆಲ್ಲರೂ ಕೇರಳದಿಂದ ಇತ್ತೀಚೆಗೆ ಬಂದವರಾಗಿದ್ದಾರೆ.

ಕೆಜಿಎಫ್​ನ ನೂರುನ್ನೀಸಾ ನರ್ಸಿಂಗ್ ಕಾಲೇಜು

ಕೆಜಿಎಫ್​ನ ನೂರುನ್ನೀಸಾ ನರ್ಸಿಂಗ್ ಕಾಲೇಜು

  • Share this:
ಕೋಲಾರ: ಕೇರಳ ಸೇರಿದಂತೆ ಕೊರೋನಾ ಸೋಂಕು ಹೆಚ್ಚಿರುವ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಆಗಮಿಸಬೇಕಿದ್ದರೆ ಕಡ್ಡಾಯವಾಗಿ ಕೊರೊನಾ ನೆಗಟಿವ್ ವರದಿ ಇರಲೇಬೇಕು. ಆದರೆ ಕೊರೊನಾ ನೆಗಟಿವ್ ವರದಿ ಸಮೇತ ಕೇರಳದಿಂದ ಕೋಲಾರಕ್ಕೆ ಆಗಮಿಸಿದ್ದ ಮಂದಿಯಲ್ಲಿ ಒಂದು ವಾರದ ಬಳಿಕ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಕೆಜಿಎಫ್ ನಗರದ ರೆವರೆಂಟ್ ನೂರುನ್ನೀಸಾ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ಕೊರೊನಾ ಕೇಕೆ ಮುಂದುವರೆದಿದೆ. ಮೊನ್ನೆ 33 ಪ್ರಕರಣ ಪತ್ತೆಯಾಗಿದ್ದ ನೂರುನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ ಮತ್ತೆ ಕೊರೊನಾ ಸ್ಪೋಟಗೊಂಡಿದ್ದು, ನಿನ್ನೆ ಒಂದೇ ದಿನ 32 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಈ ಒಂದೇ ಕಾಲೇಜಿನಲ್ಲಿ ಸೋಂಕಿತರ ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. ಕಾಲೇಜಿನಲ್ಲಿ ಒಟ್ಟು 265 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ಕೇರಳದಿಂದ ಬಂದಿದ್ದ 146 ಜನರ ಪೈಕಿ ಈಗ 65 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಕೇರಳದಿಂದ ಬಂದವರಲ್ಲಿ ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಕಾಲೇಜಿನಲ್ಲಿನ 265 ವಿದ್ಯಾರ್ಥಿಗಳಿಗೂ ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಲಾಗಿದೆ. ಕೇರಳದಿಂದ ಆಗಮಿಸಿದವರಲ್ಲೇ ಸೋಂಕಿನ ಲಕ್ಷಣ ಕಂಡುಬಂದಿದೆ. ಇದರಿಂದ ಇತರರಿಗೂ ಸೋಂಕಿನ ಭೀತಿ ಎದುರಾಗಿದೆ. ಈಗಾಗಲೇ ಸೋಂಕಿತರನ್ನ ಕೆಜಿಎಫ್ ನಗರದ ಬಿಜಿಎಂಎಲ್ ಕೋವಿಡ್ ಕೇರ್ ಸೆಂಟರ್​ಗೆ ದಾಖಲು ಮಾಡಿದ್ದು, ಎಲ್ಲರ ಆರೋಗ್ಯವು ಸ್ಥಿರವಾಗಿದೆ ಎಂದು ಕೆಜಿಎಫ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಾಲೇಜು ಆಡಳಿತ ಮಂಡಳಿಗೆ ನೋಟೀಸ್ ಜಾರಿ:

ಕೆಜಿಎಫ್ ನಗರದಲ್ಲಿ ಹತ್ತಾರು ನರ್ಸಿಂಗ್ ಕಾಲೇಜುಗಳು ಇದ್ದು, ಬೇರೆ ರಾಜ್ಯಗಳಿಂದಲೇ ಆಗಮಿಸಿದ ವಿಧ್ಯಾರ್ಥಿಗಳು ಇಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ‌ಆದರೆ ಕೇರಳದಿಂದ ವಿದ್ಯಾರ್ಥಿಗಳನ್ನ ಕರೆಸಿಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನ ಧಿಕ್ಕರಿಸಲಾಗಿದೆ ಎಂಬ ಆರೋಪ ಇದೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾ ವೈದ್ಯಾಧಿಕಾರಿ ಡಾ ಜಗದೀಶ್, ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಕೇರಳದಿಂದ ವಿದ್ಯಾರ್ಥಿಗಳನ್ನ ಕರೆತರಲಾಗಿದೆ. ಇದಕ್ಕೆ ಕಾರಣ ಕೇಳಿ ಕಾಲೇಜಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಯೂರಿಯಾಗಾಗಿ ರೈತರ ಮಧ್ಯೆಯೇ ಕುಸ್ತಿ; ಯಾವುದೇ ಕ್ರಮ ವಹಿಸದ ಆಡಳಿತ

ಕಳೆದ 1 ವಾರದ ಹಿಂದೆ 146 ವಿದ್ಯಾರ್ಥಿಗಳು ಕೇರಳದಿಂದ ಬಂದಿದ್ದಾರೆ. ಕೇರಳದಿಂದ ಬರುವಾಗಲೇ 146 ಮಂದಿಯ ಕೊರೋನಾ ನೆಗಟಿವ್ ವರದಿ ಇದೆ. ಆದರೆ 3 ದಿನದ ಹಿಂದೆ ನರ್ಸಿಂಗ್ ಕಾಲೇಜಿನಲ್ಲಿ ಸೋಂಕಿನ ಲಕ್ಷಣ ಪತ್ತೆಯಾಗಿದೆ. ನೂರುನ್ನೀಸಾ ನರ್ಸಿಂಗ್ ಕಾಲೇಜು ಹಾಗು ಹಾಸ್ಟೆಲ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಕ್ವಾರೆಂಟೈನ್ ಒಳಪಟ್ಟಿರುವವರು ಹೊರಗೆ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ‌ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಜಗದೀಶ್ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಕೋಲಾರ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇಕಡಾ 1 ಕ್ಕಿಂತ ಕಡಿಮೆ ಇದ್ದು, ಜಿಲ್ಲೆಯಲ್ಲಿ ಕೊರೋನಾ ಕಟ್ಟಿಹಾಕಲು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೆ, ಕೆಜಿಎಫ್ ನಗರದಲ್ಲಿನ ಕೆಲ ಖಾಸಗಿ ನರ್ಸಿಂಗ್ ಕಾಲೇಜುಗಳು ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದು, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಜ್ಞಾಪನಾ ಪತ್ರ ನೀಡುವುದಾಗಿ ಜಿಲ್ಲಾ ವೈದ್ಯಾಧಿಕಾರಿಗಳು ಹೇಳಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ರಘುರಾಜ್
Published by:Vijayasarthy SN
First published: