HOME » NEWS » District » 60 THOUSAND TONE WASTAGE DUMP AT STUWART HILLS IN MADIKERI RH

ಸ್ಟುವರ್ಟ್ ಹಿಲ್ಸ್​ನಲ್ಲಿ 60 ಸಾವಿರ ಟನ್ ಕಸದ ರಾಶಿ!; ಹೈಕೋರ್ಟ್ ನಿರ್ದೇಶನಕ್ಕೂ ಕ್ಯಾರೆ ಎನ್ನದ ಮಡಿಕೇರಿ ನಗರಸಭೆ

ಎ.ಎಸ್ ಓಕಾ ನೇತೃತ್ವದ ನ್ಯಾಯಪೀಠ ಸ್ಟುವರ್ಟ್ ಹಿಲ್ಸ್ ನಲ್ಲಿ ಕಸ ಸುರಿಯದೇ ಬದಲಿ ಜಾಗವನ್ನು ಗುರುತಿಸಿಕೊಳ್ಳುವಂತೆ ಸೂಚಿಸಿ, ಅದಕ್ಕಾಗಿ ಎರಡು ವಾರಗಳ ಗಡುವು ನೀಡಿದೆ. ಹೈಕೋರ್ಟ್ ನೀಡಿರುವ ಎರಡು ವಾರಗಳ ಗಡುವೂ ಮುಗಿಯುತ್ತಿದ್ದರೂ ಮಡಿಕೇರಿ ನಗರ ಸಭೆ ಮಾತ್ರ ಮತ್ತೆ ಅಲ್ಲಿಯೇ ಕಸ ಸುರಿಯುತ್ತಿದೆ.

news18-kannada
Updated:November 9, 2020, 4:37 PM IST
ಸ್ಟುವರ್ಟ್ ಹಿಲ್ಸ್​ನಲ್ಲಿ 60 ಸಾವಿರ ಟನ್ ಕಸದ ರಾಶಿ!; ಹೈಕೋರ್ಟ್ ನಿರ್ದೇಶನಕ್ಕೂ ಕ್ಯಾರೆ ಎನ್ನದ ಮಡಿಕೇರಿ ನಗರಸಭೆ
ಮಡಿಕೇರಿಯ ಸ್ಟುವರ್ಟ್ ಹಿಲ್ಸ್​ನಲ್ಲಿ ಸುರಿದಿರುವ ರಾಶಿ ಕಸ.
  • Share this:
ಕೊಡಗು: ಮಡಿಕೇರಿಯ ನಗರದಲ್ಲಿ ನಿತ್ಯವೂ ಸಂಗ್ರಹಿಸಿದ ಹತ್ತಾರು ಲೋಡ್ ಕಸವನ್ನು ಅತ್ಯಂತ ಎತ್ತರದ ಬೆಟ್ಟವಾಗಿರುವ ಸ್ಟುವರ್ಟ್ ಹಿಲ್ಸ್ ಮೇಲೆ ಮಡಿಕೇರಿ ನಗರಸಭೆ ಸುರಿಯುತ್ತಿದೆ. ಅಲ್ಲೇ ಕೊಳೆಯುತ್ತಿರುವ ಕಸ ಕೊಳಚೆ ನೀರಾಗಿ ನಗರ ಪ್ರದೇಶದ ಅಂತರ್ಜಲ ಸೇರುತ್ತಿದೆ. ಹೀಗಾಗಿ ಕಸವನ್ನು ಅಲ್ಲಿ ಸುರಿಯದಂತೆ ರಾಜ್ಯ ಹೈಕೋರ್ಟ್ ನಗರಸಭೆಗೆ ನಿರ್ದೇಶನ ನೀಡಿದೆ. ಆದರೂ ನಗರಸಭೆ ಮಾತ್ರ ಹೈಕೋರ್ಟ್ ನಿರ್ದೇಶನಕ್ಕೂ ಕ್ಯಾರೆ ಎನ್ನುತ್ತಿಲ್ಲ.

ಹೌದು, ಸ್ವಚ್ಛ ಕೊಡಗು ನಿರ್ಮಾಣಕ್ಕಾಗಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಮಡಿಕೇರಿ ನಗರಸಭೆ ಕೂಡ ಪ್ರತೀ ಮನೆ ಮನೆಗೂ ಹೋಗಿ ವಿಂಗಡಣೆ ಮಾಡಿದ ಕಸವನ್ನು ಸಂಗ್ರಹಿಸಿ ಪಟ್ಟಣದ ಅತ್ಯಂತ ಎತ್ತರದ ಬೆಟ್ಟವಾಗಿರುವ ಸ್ಟುವರ್ಟ್ ಹಿಲ್ಸ್ ನಲ್ಲಿ ವಿಲೇವಾರಿ ಮಾಡುತ್ತಿದೆ. ಆದರೆ ಸಂಗ್ರಹಿಸಿದ ಕಸವನ್ನು ಮರು ಪರಿಷ್ಕರಣೆ ಮಾಡುವುದರಲ್ಲಿ ಮಾತ್ರ ಸಂಪೂರ್ಣ ಸೋತಿದೆ. ಸ್ಟುವರ್ಟ್ ಹಿಲ್ಸ್ ನಲ್ಲಿ ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವುದನ್ನು ಪ್ರಶ್ನಿಸಿ ಎಸ್‍ಆರ್ ವಿಕೆ ವೆಲ್‍ಫೇರ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿ ವಿಚಾರಣೆ ನಡೆಸಿರುವ ಎ.ಎಸ್ ಓಕಾ ನೇತೃತ್ವದ ನ್ಯಾಯಪೀಠ ಸ್ಟುವರ್ಟ್ ಹಿಲ್ಸ್ ನಲ್ಲಿ ಕಸ ಸುರಿಯದೇ ಬದಲಿ ಜಾಗವನ್ನು ಗುರುತಿಸಿಕೊಳ್ಳುವಂತೆ ಸೂಚಿಸಿ, ಅದಕ್ಕಾಗಿ ಎರಡು ವಾರಗಳ ಗಡುವು ನೀಡಿದೆ. ಹೈಕೋರ್ಟ್ ನೀಡಿರುವ ಎರಡು ವಾರಗಳ ಗಡುವೂ ಮುಗಿಯುತ್ತಿದ್ದರೂ ಮಡಿಕೇರಿ ನಗರ ಸಭೆ ಮಾತ್ರ ಮತ್ತೆ ಅಲ್ಲಿಯೇ ಕಸ ಸುರಿಯುತ್ತಿದೆ.

ಇದನ್ನು ಓದಿ: ಮಳೆಯಿಂದ ಬೆಳೆಯೂ ನಾಶ, ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲ; ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿಷ್ಕರಿಸಲು ನಗರಸಭೆ ಹಲವು ವರ್ಷಗಳ ಹಿಂದೆಯೇ ಮಿಷನರಿಗಳನ್ನು ಅಳವಡಿಸಿದೆ. ಎಲ್ಲಾ ಯಂತ್ರಗಳೂ ಸಂಪೂರ್ಣ ಕೆಟ್ಟು ನಿಂತಿದ್ದು, ಅದಕ್ಕಾಗಿ ಹೂಡಿಕೆ ಮಾಡಿದ್ದ ಕೋಟ್ಯಂತರ ಹಣ ಕೂಡ ಪೋಲಾಗಿದೆ. ಹೈಕೋರ್ಟ್ ನಿರ್ದೇಶನದ ಬಳಿಕ ಮೂರು ಕಡೆಗಳಲ್ಲಿ ಜಾಗ ಗುರುತಿಸಿದ್ದೇವೆ. ಆದರೆ ಮೂರು ಕಡೆಗಳಲ್ಲೂ ಜನವಸತಿ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ನ್ಯಾಯಾಲಯಕ್ಕೆ ಇದೇ ವರದಿ ನೀಡಿದ್ದು, ಮುಂದೆ ಕೋರ್ಟ್ ನೀಡುವ ನಿರ್ದೇಶನವನ್ನು ಪಾಲಿಸುತ್ತೇವೆ ಎನ್ನುತ್ತಾರೆ ನಗರಸಭೆ ಆಯುುಕ್ತ ರಾಮದಾಸ್. ಸದ್ಯ ಪ್ರವಾಸೋದ್ಯಮ ಅಭಿವೃದ್ಧಿಗೆಂದು ನಾಲ್ಕು ಕೋಟಿ ಹಣವನ್ನು ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ. ಇದೇ ಹಣವನ್ನು ಕಸ ವಿಲೇವಾರಿಗಾದರೂ ಕೊಡಬಹುದಿತ್ತು ಎನ್ನೋದು ಪರಿಸರವಾದಿ ತಮ್ಮುಪೂವಯ್ಯ ಅವರ ಅಭಿಪ್ರಾಯ.
Youtube Video

ಒಟ್ಟಿನಲ್ಲಿ ಕಳೆದ ಹದಿನೈದು ವರ್ಷಗಳಿಂದ ಸ್ಟುವರ್ಟ್ ಹಿಲ್ಸ್ ನಲ್ಲಿ ಬರೋಬ್ಬರಿ 60 ಸಾವಿರ ಟನ್ ಕಸ ಸಂಗ್ರಹಣೆಯಾಗಿದ್ದು, ದೊಡ್ಡ ಬೆಟ್ಟವಾಗಿ ಬೆಳೆದಿದ್ದು, ಮಡಿಕೇರಿಗೆ ಕಂಟಕವಾಗಿ ಪರಿಣಮಿಸಿದೆ.
Published by: HR Ramesh
First published: November 9, 2020, 4:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories