ಚಿಕ್ಕಬಳ್ಳಾಪುರ, ಜುಲೈ 25: ಇಡೀ ರಾಜ್ಯದಲ್ಲಿ ಮುಂದಿನ ಎರಡು, ಮೂರು ತಿಂಗಳಲ್ಲಿ 6 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಎಂಪಿಎಲ್ ಸಂಸ್ಥೆಯಿಂದ ಉಚಿತ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ಕೋವಿಡ್ ಲಸಿಕೆ ಬಗ್ಗೆ ಕೆಲವು ಪಕ್ಷಗಳು ಭಯ ಉಂಟುಮಾಡಿದವು. ಭೀತಿ ಉಂಟುಮಾಡುವ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸಲಾಯಿತು. ಆದರೆ ಜನರಿಗೆ ಇತ್ತೀಚಿನ ದಿನಗಳಲ್ಲಿ ಅರ್ಥವಾಗಿದೆ. ಲಸಿಕೆ ಪಡೆದುಕೊಂಡವರಿಗೆ ಕೊರೊನಾ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇಡೀ ರಾಜ್ಯದಲ್ಲಿ ಎರಡು ಮೂರು ತಿಂಗಳಲ್ಲಿ 5-6 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಎಂಪಿಎಲ್ ಸಂಸ್ಥೆ ಮೊದಲ ಕಂತಿನಲ್ಲಿ 2,500 ಲಸಿಕೆ ನೀಡಿದೆ. ನಗರಕ್ಕೆ 2,000 ಹಾಗೂ 500 ಮಂಚೇನಹಳ್ಳಿ ಭಾಗಕ್ಕೆ ನೀಡಿದೆ. ರಾಜ್ಯಕ್ಕೆ ಈವರೆಗೆ ಒಂದು ಲಕ್ಷ ಲಸಿಕೆಯನ್ನು ಸಂಸ್ಥೆ ನೀಡಿದೆ. ಶೇ.25 ರಷ್ಟು ಲಸಿಕೆಯನ್ನು ಖಾಸಗಿ ವಲಯಕ್ಕೆ ಮೀಸಲಿಡಲಾಗಿದೆ. ಇನ್ನು ಸಾಕಷ್ಟು ಸಂಸ್ಥೆಗಳು ಮುಂದೆ ಬಂದು ಲಸಿಕೆ ಖರೀದಿ ಮಾಡಿ ಜನರಿಗೆ ಉಚಿತವಾಗಿ ನೀಡಬೇಕು ಎಂದು ಮನವಿ ಮಾಡಿದರು.
ಕಾಳಜಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಲಾಗಿದೆ. ಮೊಬೈಲ್ ಕ್ಲಿನಿಕ್ ಗಳನ್ನೂ ತೆರಯಲಾಗಿದೆ. ಮಳೆಗಾಲದಲ್ಲಿ ನೀರಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಕಡಿಮೆಯಾದಂತೆ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗಿದೆ. ನಂದಿ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು. ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಬಳಿ ವೃಷಭಾವತಿಯಿಂದ ನೀರು ತರುವ ಯೋಜನೆ ರೂಪಿಸಲಾಗಿದೆ. ಇದರಿಂದ 50 ಕೆರೆಗಳಿಗೆ ನೀರು ತುಂಬಿಸಲಾಗುವುದು. ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಕೃಷಿಗೆ ಹೊಂದಿಕೊಂಡ ಕೈಗಾರಿಕೆ ಸ್ಥಾಪಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಬೇಕಾದ ಜಮೀನು ಗುರುತಿಸಲಾಗುವುದು ಎಂದರು.
ಇದನ್ನೂ ಓದಿ: BJP Karnataka: ಕೊನೆ ಕ್ಷಣದವರೆಗೂ ನಾನು ಕೆಲಸ ಮಾಡುತ್ತೇನೆ: ಸಿಎಂ ಯಡಿಯೂರಪ್ಪ
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಒಳ್ಳೆಯ ಬೆಳೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರಸಗೊಬ್ಬರಕ್ಕೆ ಶೇ. 150 ರಷ್ಟು ಸಬ್ಸಿಡಿ ನೀಡಿದ್ದಾರೆ. ಆದರೆ ವಿರೋಧಿಗಳು ಏನೂ ಮಾಡಿಲ್ಲವೆಂದು ಟೀಕಿಸುತ್ತಾರೆ. ಈ ಮಟ್ಟಿಗೆ ಸಬ್ಸಿಡಿ ಹೆಚ್ಚಳವನ್ನು ಇತಿಹಾಸದಲ್ಲಿ ಯಾವುದೇ ಸರ್ಕಾರ ಮಾಡಿಲ್ಲ. ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದೆ. ಪ್ರತಿ ಕೋವಿಡ್ ರೋಗಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಪರೀಕ್ಷೆ, ಆಂಬ್ಯುಲೆನ್ಸ್, ಕೋವಿಡ್ ಕೇರ್ ಸೆಂಟರ್ ಎಲ್ಲವನ್ನೂ ಉಚಿತವಾಗಿ ನೀಡಲಾಗಿದೆ. ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿದರೆ ಮೂರನೇ ಅಲೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ