ಚಾಮರಾಜನಗರ (ನವೆಂಬರ್ 23) 50 ಲಕ್ಷ ರೂಪಾಯಿಗು ಹೆಚ್ಚು ಮೌಲ್ಯದ ಪಾನ್ ಮಸಾಲ ಹಾಗು ಟೊಬ್ಯಾಕೋ ದರೋಡೆಯಾದ ಕೆಲವೆ ಗಂಟೆಗಳಲ್ಲಿ ಪೊಲೀಸರು ಪ್ರಕರಣ ಭೇದಿಸಿರುವ ಘಟನೆ ಚಾಮರಾಜನಗರದ ಪೂರ್ವ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಗಡಿಭಾಗದಲ್ಲಿರುವ ಕೋಳಿಪಾಳ್ಯ ಗ್ರಾಮದಲ್ಲಿ ರಾಜಸ್ಥಾನ ಮೂಲದ ಬವರಲಾಲ್ ಎಂಬುವರಿಗೆ ಸೇರಿದ ಗೋದಾಮಗಳ ಬಾಗಿಲು ಮುರಿದು ಸಿಬ್ಬಂದಿಯನ್ನು ಬೆದರಿಸಿ 12 ಮಂದಿ ಇದ್ದ ತಂಡವೊಂದು 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಲಾವನ್ನು ದೋಚಿತ್ತು. ಕೋಳಿಪಾಳ್ಯ ಗ್ರಾಮದಲ್ಲಿ ಬವರಲಾಲ್ ಅವರು ಮಹಾವೀರ್ ಮಾರ್ಕೆಟಿಂಗ್ ಪಾನ್ ಮಸಾಲ ದಾಸ್ತಾನು ಮಳಿಗೆಯನ್ನು ಹೊಂದಿದ್ದು ವಿವಿಧ ಕಂಪನಿಗಳ ಪಾನ್ ಮಸಾಲ ಹಾಗು ಟೊಬ್ಯಾಕೋ ಪ್ಯಾಕೆಟ್ ಗಳನ್ನು ಬೆಂಗಳೂರಿನಲ್ಲಿ ಖರೀದಿಸಿ ಇಲ್ಲಿ ದಾಸ್ತಾನು ಮಾಡಿ ಚಾಮರಾಜನಗರ ಜಿಲ್ಲೆಯಲ್ಲಿ ವಿತರಣೆ ಮಾಡುವ ವ್ಯಾಪಾರ ಮಾಡುತ್ತಿದ್ದರು.
ಈ ವಿಷಯ ಅರಿತಿದ್ದ ದುಷ್ಕರ್ಮಿಗಳು ನಿನ್ನೆ ರಾತ್ರಿ ಈ ಗೋದಾಮಿನ ಬಾಗಿಲು ಮುರಿದು ಪಾನ್ ಮಸಾಲ ಚೀಲಗಳನ್ನು ಗೂಡ್ಸ್ ವಾಹನಗಳಿಗೆ ತುಂಬುತ್ತಿದ್ದರು. ಅದೇ ವೇಳೆಗೆ ಬೆಂಗಳೂರಿನಿಂದ ಲಾರಿಯಲ್ಲಿ ಮಾಲು ತುಂಬಿಕೊಂಡು ಗೋದಾಮಿಗೆ ಬಂದ ಬವರ ಲಾಲ್ ಅವರ ಚಾಲಕ ರಮೇಶ್ ಇದನ್ನು ನೋಡಿ ಗಾಬರಿಗೊಂಡು ಪ್ರಶ್ನಿಸಿದ್ದಾರೆ.
ನಾವು ಪೊಲೀಸರು ಎಂದ ದುಷ್ಕರ್ಮಿಗಳು ಚಾಲಕ ರಮೇಶ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಹೊರಬಂದ ಆತ ತನ್ನ ಮಾಲೀಕ ಬವರಲಾಲ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಞಳಕ್ಕೆ ಧಾವಿಸಿದ ಬವರಲಾಲ್ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಥಾಮಸ್ ಪ್ರಕರಣ ಬೇಧಿಸಲು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ನಂಜಪ್ಪ, ಸಬ್ ಇನ್ಸ್ಪೆಕ್ಟರ್ ಗಳಾದ ಡಿ.ಆರ್.ರಾಜಕುಮಾರ್, ಎಸ್ ಲೋಕೇಶ್ ಅವರನ್ನೊಳಗೊಂಡ ತಂಡ ರಚಿಸಿದರು.
ಬಳಿಕ ಹರದನಹಳ್ಳಿ ಬಳಿ ಹೊಂಚು ಹಾಕಿದ ಪೊಲೀಸರ ತಂಡ ಪಾನ್ ಮಸಾಲ ಸಾಗಿಸುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ತಮಿಳುನಾಡು ತಿರುಪೂರು ಜಿಲ್ಲೆ ಧರ್ಮಪುರಿ ತಾಲೋಕಿನ ಅಬುತಲ್ಲಾ ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಉಳಿದ 11 ಮಂದಿ ಪರಾರಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ