ಚಿಕ್ಕಮಗಳೂರು : ಕಾಫಿನಾಡು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬರೋಬ್ಬರಿ 50 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಮೂವರು ಕಿಂಗ್ ಫಿನ್ ಗಳನ್ನ ಬಂಧಿಸಿದ್ದಾರೆ. ಚಿಕ್ಕಮಗಳೂರು ಪೊಲೀಸ್ ಇತಿಹಾಸದಲ್ಲೇ ದೊಡ್ಡ ಮಟ್ಟದ ಗಾಂಜಾ ದಾಳಿ ಇದಾಗಿದೆ. ಮೂವರು ಆರೋಪಿಗಳಿಂದ 102 ಕೆಜಿ ಗಾಂಜಾವನ್ನಪೊಲೀಸರು ವಶಪಡಿಸಿಕೊಂಡಿದ್ದಾರೆ.ಕಾಫಿನಾಡ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಕಾರ್ಯಾಚರಣೆ ನಡೆದಿದ್ದು ಚಿಕ್ಕಮಗಳೂರಿನ ಪೊಲೀಸರು ಸರಿಯಾದ ಬೇಟೆಯನ್ನೇ ಆಡಿದ್ದಾರೆ.
ಖಚಿತ ಮಾಹಿತಿ ಮೆರೆಗೆ ಸೆನ್ ಪೊಲೀಸ್ ಇನ್ಸ್ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ದಾಳಿ ನಡೆಸಿದ ಖಾಕಿ ಪಡೆ, ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಬಳಿ ಆರೋಪಿಗಳನ್ನ ಲಾಕ್ ಮಾಡಿದೆ. ಈ ರೀತಿಯ ಗಾಂಜಾ ರೇಡ್ ಚಿಕ್ಕಮಗಳೂರು ಪೊಲೀಸರಿಗೆ ಮೊದಲೆನಲ್ಲ. ಈ ಹಿಂದೆಯೂ ಹಲವಾರು ದಾಳಿ ನಡೆಸಿ ಪೊಲೀಸರು ಮಾದಕ ವಸ್ತು ಸಮೇತ ಆರೋಪಿಗಳನ್ನ ಬಂಧಿಸಿದ್ದರು.
ಆದರೆ ಇದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಚಿಕ್ಕಬಳ್ಳಾಪುರದ ಇಬ್ಬರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗಾಂಜಾವನ್ನ ದೊಡ್ಡ ಮಟ್ಟದಲ್ಲಿ ಡೀಲ್ ಮಾಡಿಕೊಂಡು ಅದನ್ನ ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು ಎಂಬ ಮಾಹಿತಿಯನ್ನ ಅರಿತ ಪೊಲೀಸರು ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ನಿನ್ನೆ ಕೂಡ ವಿಶಾಖಪಟ್ಣಣದಿಂದ ಗಾಂಜಾ ಲೋಡ್ ಆಗಿ ಬರುತ್ತಿದ್ದ ಮಾಹಿತಿಯನ್ನ ಖಚಿತ ಪಡಿಸಿಕೊಂಡು ಆರೋಪಿಗಳ ಸಮೇತ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.. ಖಚಿತ ಮಾಹಿತಿ ಪಡೆದುಕೊಂಡು ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಲು ಸೆನ್ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ರಕ್ಷಿತ್, ಸಬ್ ಇನ್ಸ್ಪೆಕ್ಟರ್ಗಳಾದ ರಫೀಕ್, ನೀತು ಗುಡೆ ಹಾಗೂ ಸಿಬ್ಬಂದಿಗಳು ತುಂಬಾ ಶ್ರಮವಹಿಸಿದ್ದರು.
ಆಂಧ್ರಪ್ರದೇಶದಿಂದ ಗಾಂಜಾವನ್ನ ನಮ್ಮ ರಾಜ್ಯಕ್ಕೆ ಸಾಗಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಖತರ್ನಾಕ್ ಗ್ಯಾಂಗ್ ಆಂಧ್ರದ ವಿಶಾಖಪಟ್ಟಣದಿಂದ ತುಂಬಾ ಸಲೀಸಾಗಿ ಗಾಂಜಾವನ್ನ ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು. ತರಕಾರಿ ಗಾಡಿಯಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಗೆ ಗಾಂಜಾ ಸಫ್ಲೈ ಆಗ್ತಿತ್ತು. ಪಿಕ್ ಆಪ್ ವಾಹನದಲ್ಲಿ ಕೆಳಗಡೆ ಗಾಂಜಾವನ್ನ ಇಟ್ಟು, ಈ ಖತರ್ನಾಕ್ಗಳು ತರಕಾರಿಯನ್ನ ಮೇಲೆ ಲೋಡ್ ಮಾಡುತ್ತಿದ್ದರು. ಇದರಿಂದ ಚೆಕ್ಕಿಂಗ್ ಸ್ಥಳಗಳಲ್ಲೂ ಪೊಲೀಸರು ಸೇರಿದಂತೆ ಯಾರಿಗೂ ಕೂಡ ಡೌಟೇ ಬರ್ತಾ ಇರಲಿಲ್ಲ. ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗದ ಅನೇಕ ಗಾಂಜಾ ಪಾಯಿಂಟ್ಗಳಿಗೆ ಈ ಮಾಲು ಹಂಚಿಕೆಯಾಗುತ್ತಿತ್ತು.
ಇದನ್ನೂ ಓದಿ: Sirsi-Kumta Highway: ಹದಗೆಟ್ಟ ಶಿರಸಿ-ಕುಮಟಾ ರಾಜ್ಯ ಹೆದ್ದಾರಿ.. ಸಾಕಪ್ಪ ಸಾಕು ಅಂತಿದ್ದಾರೆ ಪ್ರಯಾಣಿಕರು
ಹೀಗೆ ಮೂಟೆಗಟ್ಟಲ್ಲೇ ಬರುತ್ತಿದ್ದ ಗಾಂಜಾವನ್ನ ಚಿಕ್ಕ ಚಿಕ್ಕ ಪಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಹೊರಗಡೆಯಿಂದ ಗಾಂಜಾವನ್ನ ತರುತ್ತಿದ್ದ ವ್ಯಕ್ತಿಗಳು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಪ್ರತಿ ಜಿಲ್ಲೆಗಳಲ್ಲೂ ಹೀಗೆ ಹೊರಗಡೆಯಿಂದ ಬಂದ ಗಾಂಜಾವನ್ನ ಮಾರಾಟ ಮಾಡಲು ನಿರ್ದಿಷ್ಟ ವ್ಯಕ್ತಿಗಳು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ನೆಟ್ವರ್ಕ್ನ ವ್ಯಕ್ತಿಗಳಿಗೆ ಗಾಂಜಾವನ್ನ ನೀಡಿ ಡೀಲ್ ಮುಗಿಸಿಕೊಂಡು ಹೊರಗಡೆಯಿಂದ ಬಂದ ವ್ಯಕ್ತಿಗಳು ಕೈತೊಳೆದುಕೊಳ್ಳುತ್ತಿದ್ದರು. ಆ ವ್ಯಕ್ತಿಗಳ ಕೂಡ ಕೆಲವು ತಂಡಗಳನ್ನ ಮಾಡಿಕೊಂಡು ಗಾಂಜಾವನ್ನ ಕಾಲೇಜು ವಿದ್ಯಾರ್ಥಿಗಳು, ಯುವಕರು, ಕೂಲಿ ಕಾರ್ಮಿಕರನ್ನ ಗುರಿಯಾಗಿಸಿ ಮಾರಾಟ ಮಾಡುತ್ತಿರೋದನ್ನ ಪೊಲೀಸರು ಈ ಮೊದಲು ಪತ್ತೆ ಹಚ್ಚಿದ್ದರು. ಹೀಗಾಗಿ ಚಿಕ್ಕ ಚಿಕ್ಕ ಮೀನುಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಇದೀಗ ತಿಮಿಂಗಿಲವನ್ನೇ ಬೇಟೆಯಾಡಿದ್ದಾರೆ.
ಈ ಮೂಲಕ ಕಾಫಿನಾಡಿನ ಪೊಲೀಸ್ ಪೊಲೀಸ್ ಇತಿಹಾಸದಲ್ಲಿ ದೊಡ್ಡ ಮಟ್ಟದ ಗಾಂಜಾ ರೇಡ್ ಮಾಡಿ ಖಾಕಿ ಪಡೆ ಇತಿಹಾಸ ನಿರ್ಮಿಸಿದೆ. ಒಟ್ಟಿನಲ್ಲಿ ಬೃಹತ್ ಗಾಂಜಾ ರೇಡ್ ಮಾಡಿದ ಖಾಕಿ ಪಡೆಯನ್ನ ರಾಜ್ಯದ ಮಹಾಪೊಲೀಸ್ ನಿರ್ದೇಶಕರು ಸೇರಿದಂತೆ ಎಸ್ಪಿ ಅಕ್ಷಯ್ ಶ್ಲಾಘಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ