Transport Strike: ಚಾಲಕ-ನಿರ್ವಾಹಕರೇ ಸೇರಿ ಮತ್ತೊಬ್ಬ ಚಾಲಕನ ಕೊಲೆ ಮಾಡಿಬಿಟ್ರಾ? ಜಮಖಂಡಿ ಕೊಲೆ ಪ್ರಕರಣ ಬೇಧಿಸಿದ ಪೋಲೀಸರು

ಜಮಖಂಡಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಓರ್ವ ಚಾಲಕನ ಸಾವಿಗೆ ಕಾರಣವಾಗಿದ್ದು ಮತ್ಯಾರು ಅಲ್ಲ ಸಾರಿಗೆ ಸಿಬ್ಬಂದಿ ಕೃತ್ಯ ನಡೆಸಿದ್ದು ಎನ್ನುವುದು ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಐವರು ಆರೋಪಿಗಳು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ.

ಮೃತ ಚಾಲಕ ನಬಿ ರಸೂಲ್

ಮೃತ ಚಾಲಕ ನಬಿ ರಸೂಲ್

  • Share this:
ಬಾಗಲಕೋಟೆ (ಏ,17):  ಸಾರಿಗೆ ನೌಕರರ ಮುಷ್ಕರ ಮಧ್ಯೆಯೂ ಬಸ್ ಸಂಚಾರ ನಡೆದ ವೇಳೆ ಬಾಗಲಕೋಟೆ ಜಿಲ್ಲೆಯ  ಜಮಖಂಡಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಓರ್ವ ಚಾಲಕನ ಸಾವಿಗೆ ಕಾರಣವಾಗಿದ್ದು ಮತ್ಯಾರು ಅಲ್ಲ ಸಾರಿಗೆ ಸಿಬ್ಬಂದಿ ಕೃತ್ಯ ನಡೆಸಿದ್ದು ಎನ್ನುವುದು ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಐವರು ಆರೋಪಿಗಳು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ.

ರಾಜ್ಯದಲ್ಲಿ 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಕಳೆದ 11 ದಿನದಿಂದಲೂ  ಸಾರಿಗೆ  ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಬಸ್ ಗೆ ಕಲ್ಲು ತೂರಾಟದಂತಹ ಪ್ರಕರಣ ನಡೆಯುತ್ತಿದ್ದು, ಇದರ ಹಿಂದೆ ಸಾರಿಗೆ ನೌಕರರೇ ಇರುವುದು ಆತಂಕದ ವಿಚಾರ. ಇದೀಗ ಇವರು ತಮ್ಮದೇ ಸಾರಿಗೆ ಇಲಾಖೆಯ ಚಾಲಕ ಸಾವಿಗೆ ಕಾರಣವಾಗಿದ್ದಾರೆ.

ನಿನ್ನೆ ಮಧ್ಯಾಹ್ನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬಸ್ ಗೆ ಕಲ್ಲು ತೂರಾಟ ನಡೆದಿತ್ತು. ಜಮಖಂಡಿಯ 59 ವರ್ಷದ ಚಾಲಕ ನಬಿ ರಸೂಲ್ ಕೆ ಅವಟಿ ಕುತ್ತಿಗೆ ಭಾಗಕ್ಕೆ ಬಲವಾಗಿ ಕಲ್ಲು ಬಿದ್ದ ಪರಿಣಾಮ ಸ್ಥಿತಿ ಚಿಂತಾಜನಕವಾಗಿತ್ತು.  ಘತ್ತರಗಾದಿಂದ ವಿಜಯಪುರ ಮಾರ್ಗವಾಗಿ ವಾಪಾಸ್ ಜಮಖಂಡಿ ಬರುತ್ತಿದ್ದ ಬಸ್ ನಲ್ಲಿ ಕಲ್ಲು ಎಸೆಯುವುದಕ್ಕೆ ಜಮಖಂಡಿ ಡಿಪೋದ ಚಾಲಕ ಕಂ ನಿರ್ವಾಹಕ ಅರುಣ್ ಅರಕೇರಿ ಕೂಡಾ ಪ್ರಯಾಣಿಸಿದ್ದಾರೆ. ಬಸ್ ಎಲ್ಲೆಲ್ಲಿ ಪ್ರಯಾಣವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾನೆ.

ಅದರಂತೆ  ಆರೋಪಿಗಳಾದ ಜಮಖಂಡಿ ಡಿಪೋದ ಚಾಲಕ ಹಾಗೂ ನಿರ್ವಾಹಕರಾದ  ಮಲ್ಲಪ್ಪ ತಳವಾರ, ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ಲೋಹಿತ್ ದಾಸರ ಎಂಬುವರು ಬಸ್ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದ್ದಾರೆ. ಕವಟಗಿ ಪುನರ್ವಸತಿ ಕೇಂದ್ರ ಬಳಿ ಬಸ್ ಬರುತ್ತಿದ್ದಂತೆ ಬೈಕ್ ನಲ್ಲಿ ಬಂದು ನಾಲ್ವರು ಬಸ್ ಗೆ ಕಲ್ಲು ಎಸೆದಿದ್ದಾರೆ.

ಬಸ್ ಮುಂಭಾಗದ ಗ್ಲಾಸ್ ಗೆ ಹಾನಿಯಾಗಿ, ನೇರವಾಗಿ ಚಾಲಕ ನಬಿರಸೂಲ್ ಕೆ ಅವಟಿ ಕುತ್ತಿಗೆಗೆ ಬಿದ್ದಿದೆ. ಈ ವೇಳೆ ಮಾರಣಾಂತಿಕ ಗಾಯವಾದರೂ ಚಾಲಕ ನಬಿ ರಸೂಲ್ ಅವಟಿ ಕರ್ತವ್ಯ ಪ್ರಜ್ಞೆ ಮೆರೆದು , ಪ್ರಯಾಣಿಕರಿಗೆ ಅನಾಹುತ ಆಗಬಾರದು ಎಂದು ರಸ್ತೆ ಪಕ್ಕಕ್ಕೆ ಬಸ್ ನಿಲ್ಲಿಸಿ, ಮೂರ್ಛೆ ಹೋಗಿದ್ದಾರೆ. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಪ್ರಯಾಣಿಕರ ಜೀವ ಉಳಿಸಿದ ಚಾಲಕ ನಬಿ ರಸೂಲ್ ಜೀವ ಉಳಿಸಲೆಂದು ಆಂಬ್ಯುಲೆನ್ಸ್ ಮೂಲಕ ಜಮಖಂಡಿ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದರೂ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಪ್ರಯಾಣಿಕರ ಜೀವ ಉಳಿಸಿ ಸಾವಿನ ಕೊನೆಯಲ್ಲೂ ನಬಿರಸೂಲ್ ಕರ್ತವ್ಯ ಪ್ರಜ್ಞೆ ಮೆರೆದಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಬಿ ರಸೂಲ್ ಇನ್ನು ಹತ್ತು ತಿಂಗಳ ಕಳೆದಿದ್ದರೆ ನಿವೃತ್ತಿಯಾಗುತ್ತಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು 55 ವರ್ಷ ಮೇಲ್ಪಟ್ಟ ಚಾಲಕ ನಿರ್ವಾಹಕರು ಆರೋಗ್ಯ ತಪಾಸಣೆ ಮಾಡಿಸಿಕೊ೦ಡು ಕರ್ತವ್ಯಕ್ಕೆ ಹಾಜರಾಗಲು ನೋಟಿಸ್ ನೀಡಿದ್ದರು. ಸೇವೆಯೇ ಉಸಿರು ಎಂದು ಭಾವಿಸಿ, ನಿವೃತ್ತಿ ಸೌಲಭ್ಯ ಸಿಗುವುದಿಲ್ಲ ಎಂದು ನಬಿ ರಸೂಲ್ ಕರ್ತವ್ಯಕ್ಕೆ ಹಾಜರಾಗಿದ್ದರು.

1984ರಲ್ಲಿ ಕರ್ತವ್ಯಕ್ಕೆ ಸೇರಿದ್ದ ನಬಿರಸೂಲ್ ಕೆ ಅವಟಿ, 2015ರಲ್ಲಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದುಕೊಂಡಿದ್ದರು. ಅಪಘಾತ ರಹಿತ ಅತ್ತ್ಯುತ್ತಮ ಚಾಲಕ ಎಂದು ಎರಡು ಬಾರಿ ಪದಕ, ಪ್ರಶಸ್ತಿಗೆ ಭಾಜನರಾಗಿದ್ದರು.ಇದೀಗ ನಿವೃತ್ತಿ ಅಂಚಿನಲ್ಲಿದ್ದ ಚಾಲಕ ತಮ್ಮದೇ ಸಾರಿಗೆ ಸಿಬ್ಬಂದಿಯಿಂದ ಕೊಲೆಯಾಗಿದ್ದು ವಿಪರ್ಯಾಸವೇ ಸರಿ. ಸಾರಿಗೆ ಇಲಾಖೆ ಅಧಿಕಾರಿಗಳು ನಬಿ ರಸೂಲ್ ಸೇವೆ, ಕರ್ತವ್ಯ ಪ್ರಜ್ಞೆ ಗೆ ಕಂಬನಿ ಮಿಡಿಯುತ್ತಿದ್ದಾರೆ.

ಬಸ್ ಗೆ ಕಲ್ಲು ಎಸೆದು ಪಾರಾಗಿದ್ದ ಆರೋಪಿಗಳ ಪತ್ತೆಗಾಗಿ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ವಿಶೇಷ ತಂಡ ರಚಿಸಿ ಪ್ರಕರಣ ಭೇದಿಸಲು ಮುಂದಾದ ವೇಳೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾರಿಗೆ ಇಲಾಖೆ ಸಿಬ್ಬಂದಿಯಿಂದಲೇ ಕೃತ್ಯ ನಡೆದಿದ್ದು ತನಿಖೆ ವೇಳೆ ಬಯಲಾಗಿದೆ. ನಿನ್ನೆ ಬೆಳಿಗ್ಗೆ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಮನೆ ಮುಂದೆ ಪ್ರತಿಭಟನೆ ಮಾಡುವ ಉದ್ದೇಶ ಹೊಂದಿದ್ದ ಸಾರಿಗೆ ನೌಕರರು ಅದನ್ನು ಕೈಬಿಟ್ಟು , ಜಮಖಂಡಿಯಲ್ಲಿ ಸಾರಿಗೆ ನೌಕರರ ಮುಷ್ಕರದ ಮುಖಂಡತ್ವ ವಹಿಸಿಕೊಂಡಿದ್ದ ಚಾಲಕ ಕಂ ನಿರ್ವಾಹಕ ಅರುಣ್ ಅರಕೇರಿ, ನಿನ್ನೆ ಬೆಳಿಗ್ಗೆ ವಿಜಯಪುರಕ್ಕೆ ಹೋಗಿದ್ದಾನೆ. ಆ ಬಳಿಕ ವಾಪಸ್ ಬಸ್ ನಲ್ಲಿ ಬರುವಾಗ ಕೃತ್ಯಕ್ಕೆ ಪ್ಲಾನ್ ರೂಪಿಸಿದ್ದಂತೆ ಘಟನೆ ನಡೆದಿದೆ. ಈ ಮಾಹಿತಿ ಬೆನ್ನತ್ತಿ, ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಮೊಬೈಲ್ ಸಿಡಿ ಆರ್ ಬಳಸಿ ಐವರು  ಆರೋಪಿಗಳನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಸ್ ಕಲ್ಲು ತೂರಾಟದ ಬಾಯಿಬಿಟ್ಟಿದ್ದಾರೆ. ಪಕ್ಕಾ ಪ್ಲಾನ್ ರೂಪಿಸಿಕೊಂಡು ಬಸ್ ಮೇಲೆ ಕಲ್ಲು ಎಸೆದಿದ್ದಾರೆ. ಬಬಲೇಶ್ವರಕ್ಕೆ ಬೈಕ್ ಮೇಲೆ ಅಂತ್ಯಕ್ರಿಯೆಗೆ ಹೋಗಿದ್ದ ನಾಲ್ವರು ಕವಟಗಿ ಪುನರ್ವಸತಿ ಕೇಂದ್ರ ಬಳಿ ಬಂದು ಚಾಲಕನಿಗೆ ಕಲ್ಲು ಎಸೆದು ಕರ್ತವ್ಯ ನಿರತ ಚಾಲಕನನ್ನು ಮಸಣಕ್ಕೆ ಕಳುಹಿಸಿದ್ದಾರೆ. ನಿನ್ನೆ ರಾತ್ರಿ ಹುಬ್ಬಳ್ಳಿ ಯ ಎನ್ ಡಬ್ಲೂಕೆಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ, ಡಿಸಿ ಕ್ಯಾಪ್ಟನ್ ರಾಜೇಂದ್ರ, ಎಸ್ಪಿ ಲೋಕೇಶ್ ಜಗಲಾಸರ, ಸಾರಿಗೆ ಇಲಾಖೆ ಅಧಿಕಾರಿಗಳು ಸೇರಿ ಮೃತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ 30 ಲಕ್ಷ ಪರಿಹಾರ ಚೆಕ್ ವಿತರಿಸಿದರು. ಮೃತ ಕುಟುಂಬದ ಓರ್ವರಿಗೆ ನೌಕರಿ, ಪತ್ನಿಗೆ ಪೆನ್ಶನ್ ಕೊಡುವ ಭರವಸೆ ನೀಡಿದ್ದಾರೆ.

ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ವರ್ಗಾವಣೆ ಮಾಡಿದ್ದೇ ಕ್ರೌರ್ಯಕ್ಕೆ ಕಾರಣವಾಗಿದ್ದು. ಜಮಖಂಡಿಯಲ್ಲಿ ಬಸ್ ಮೇಲೆ ಕಲ್ಲೆಸೆತಕ್ಕೆ ಐವರು  ಸಂಚು ರೂಪಿಸಿದ್ದಾರೆ. ವರ್ಗಾವಣೆಯಿಂದ ನೊಂದು ಬಸ್ ಸಂಚರಿಸುವದನ್ನು ತಡೆಯುವದಕ್ಕೆ ಪಣ ತೊಟ್ಟಿದ್ದಾರೆ. ಬಸ್ ಮೇಲೆ ಕಲ್ಲು ಎಸೆಯಲು ಪ್ಲಾನ್ ರೂಪಿಸಿದ್ದ ಜಮಖಂಡಿ ಡಿಪೋದ ಚಾಲಕ ಕಂ ನಿರ್ವಾಹಕ ಅರುಣ್ ಅರಕೇರಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ  ಕರ್ತವ್ಯಕ್ಕೆ ಗೈರಾಗಿದ್ದಕ್ಕೆ ಉತ್ತರ ಕನ್ನಡದ ಭಟ್ಕಳ ಡಿಪೋಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ನೊಂದು, ಹಿಂಸಾತ್ಮಕ ಕೃತ್ಯಕ್ಕಿಳಿದಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ಅಥಣಿಯಲ್ಲಿ ಈಚೆಗೆ ನಡೆದಿದ್ದ  ಬಸ್ ಗೆ ಕಲ್ಲೆಸೆತದಲ್ಲೂ ಅರುಣ್ ಅರಕೇರಿ ಶಾಮೀಲಾಗಿದ್ದು, ಜಮಖಂಡಿ ಭಾಗದಲ್ಲಿ ನಡೆದಿರುವ ಬಹುತೇಕವಾಗಿ ಬಸ್ ಕಲ್ಲು ಎಸೆತದಲ್ಲಿ ಈತನ ಕೈವಾಡವಿದೆ ಎನ್ನಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೃತ ಚಾಲಕ ನಬಿ ರಸೂಲ್ ಪತ್ನಿ ಶಾಹಿರಾಬಾನು ದೂರಿನನ್ವಯ ಸಾವಳಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ, ಕೊಲೆ ಕೇಸ್ ದಾಖಲಾಗಿದೆ.
ಒಟ್ಟಿನಲ್ಲಿ ಶಾಂತಿಯುತ ಸಾರಿಗೆ ನೌಕರರ ಮುಷ್ಕರ ಮಾಡುತ್ತೇವೆ ಎಂದು ಸದ್ದಿಲ್ಲದೆ ತೆರೆಮರೆಯಲ್ಲಿ ಸಿಬ್ಬಂದಿಯೇ ಹಿಂಸಾತ್ಮಕ ದಾರಿ ತುಳಿಯುತ್ತಿದ್ದು, ಹಿರಿಯ ಚಾಲಕ ಜೀವವೊಂದು ಬಲಿ ಪಡೆದುಕೊಂಡಂತಾಗಿದೆ.
Published by:Soumya KN
First published: