HOME » NEWS » District » 300 MORE TREES CUT DOWN FOR THE SAKE OF ROAD DEVELOPMENT BY CONTRACTOR HK

ರಸ್ತೆ ಅಗಲಿಕರಣ ಹೆಸರಿನಲ್ಲಿ ಮರಗಳ ಮಾರಣಹೋಮ; 300 ಕ್ಕೂ ಹೆಚ್ಚು ಮರಗಳನ್ನ ಕಡಿದ ಗುತ್ತಿಗೆದಾರ

ಏಕಾಏಕಿ ಜೆಸಿಬಿ ಯಂತ್ರಗಳ ಮೂಲಕ ರಸ್ತೆಯ  ಉದ್ದಕ್ಕೂ ಬೆಳೆದಿದ್ದ ತೆಂಗು, ಬೇವು, ಮಾವು ಹಾಗೂ ಸಾಗವಾನಿಯ 300 ಕ್ಕೂ ಹೆಚ್ಚು ಮರಗಳನ್ನ ಕಡಿದು ಹಾಕಿ ರಸ್ತೆ ಅಗಲಿಕರಣಕ್ಕೆ ಮುಂದಾಗಿದ್ದಾರೆ.

news18-kannada
Updated:November 12, 2020, 7:56 PM IST
ರಸ್ತೆ ಅಗಲಿಕರಣ ಹೆಸರಿನಲ್ಲಿ ಮರಗಳ ಮಾರಣಹೋಮ; 300 ಕ್ಕೂ ಹೆಚ್ಚು ಮರಗಳನ್ನ ಕಡಿದ ಗುತ್ತಿಗೆದಾರ
ಜೆಸಿಬಿ ಮೂಲಕ ಮರಗಳನ್ನು ಉರುಳಿಸಲಾಯಿತು
  • Share this:
ಚಿಕ್ಕೋಡಿ(ನವೆಂಬರ್​. 12): ಅದು ಹಚ್ಚ ಹಸಿರಿನಿಂದ ತುಂಬಿದ ಗ್ರಾಮೀಣ ರಸ್ತೆಯ ಉದ್ದಗಲಕ್ಕೂ ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಮರಗಳನ್ನ ಬೆಳೆಸಿದ್ದರು. ಆದರೆ, ರಸ್ತೆ ಅಗಲಿಕರಣದ ಹೆಸರಿನಲ್ಲಿ ಏಕಾಏಕಿ ಬಂದು ಗುತ್ತಿಗೆದಾರ 300 ಕ್ಕೂ ಹೆಚ್ಚು ಮರಗಳನ್ನ ಕಡಿದು ಹಾಕಿದ್ದಾರೆ. ಇಂತಹ ಮರಗಳ ಮಾರಣಹೋಮ ನಡೆದಿರುವುದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ. ಸೊಲ್ಲಾಪುರದಿಂದ ಹೊನ್ನಿಹಳ್ಳಿ ಗ್ರಾಮದ ವರೆಗೆ 4.5 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ 5 ಕೋಟಿ ಕಾಮಗಾರಿಗೆ ಮಂಜೂರಾತಿ ಸಿಕ್ಕಿದೆ. ಈಗಾಗಲೇ 22 ಅಡಿಯಷ್ಟು ಅಗಲವಾದ ರಸ್ತೆ ಇರುವಾಗಲೇ ಕೇಂದ್ರ ಸರ್ಕಾರದಿಂದ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಮತ್ತೆ ರಸ್ತೆ ಮಂಜೂರಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ರಸ್ತೆ ಮಾಡಬೇಕು ಅಂದ್ರೆ 33 ಅಡಿ ಅಗಲದ ರಸ್ತೆ ಮಾಡಬೇಕು. ಆದರೆ 33 ಅಡಿ ಅಗಲದ ರಸ್ತೆ ಮಾಡಲು ಇಲ್ಲಿನ ಕೆಲವು ರೈತರು ವಿರೋಧ ಮಾಡಿದರು.

ಈಗಾಗಲೇ 22 ಅಡಿಯಷ್ಟು ರಸ್ತೆ ಇದೆ. ಅಕ್ಕ ಪಕ್ಕದಲ್ಲಿ ಹತ್ತಾರು ವರ್ಷಗಳಿಂದ ಬೆಳೆದ ಗಿಡಗಳಿರಬೇಕಾದ್ರೆ 33 ಅಡಿ ಅಗಲದ ರಸ್ತೆ ಬೇಡಾ ಎಂದು ವಿರೋಧಿಸಿದರು. ಆದರೆ, ಈ ವಿರೋಧಕ್ಕೆ ಕ್ಯಾರೆ ಎನ್ನದ ಗುತ್ತಿಗೆದಾರ ಸ್ಥಳೀಯ ಮುಖಂಡರ ಜತೆ ಸೇರಿ ಕಾಮಗಾರಿಯನ್ನ ಆರಂಭಿಸಿದ್ದಾರೆ.

ರಸ್ತೆ ಕಾಮಗಾರಿ ಬಂದ್ ಮಾಡುವಂತೆ ಕೆಲವು ರೈತರು ವಿರೋಧ ಮಾಡಿದರು. ಗುತ್ತಿಗೆದಾರ ರಸ್ತೆ ನಿರ್ಮಾಣ ಬಂದ್ ಆದರೆ ಎಲ್ಲಿ ತನಗೆ ಸಿಕ್ಕ ಟೆಂಡರ್ ಕೈಬಿಟ್ಟು ಹೋಗುತ್ತೆ ಎನ್ನುವ ಭಯದಿಂದಾಗಿ ವಿರೋಧವನ್ನ ಲೆಕ್ಕಿಸದೆ ರೈತರ ಮೇಲೆ ದಬ್ಬಾಳಿಕೆ ನಡೆಸಿ ರಸ್ತೆ ಅಗಲಿಕರಣಕ್ಕೆ ಮುಂದಾಗಿದ್ದಾರೆ. ಏಕಾಏಕಿ ಜೆಸಿಬಿ ಯಂತ್ರಗಳ ಮೂಲಕ ರಸ್ತೆಯ  ಉದ್ದಕ್ಕೂ ಬೆಳೆದಿದ್ದ ತೆಂಗು, ಬೇವು, ಮಾವು ಹಾಗೂ ಸಾಗವಾನಿಯ 300 ಕ್ಕೂ ಹೆಚ್ಚು ಮರಗಳನ್ನ ಕಡಿದು ಹಾಕಿ ರಸ್ತೆ ಅಗಲಿಕರಣಕ್ಕೆ ಮುಂದಾಗಿದ್ದಾರೆ.

ಇನ್ನು ಸಾಮಾನ್ಯವಾಗಿ ಯಾವುದೇ ಒಂದು ಮರ ಕಡಿಬೇಕು ಅಂದ್ರು ಅರಣ್ಯ ಇಲಾಖೆ ಪರವಾನಗಿ ಪಡೆಯಬೇಕು. ಆದರೆ, ಗುತ್ತಿಗೆದಾರ ಮಾತ್ರ ಯಾವುದೇ ಪರವಾನಗಿ ಪಡೆಯದೆ ಮರಗಳನ್ನ ಕಡಿದು ಹಾಕಿದ್ದಾನೆ ಎಂದು ರೈತರು ಆರೋಪಿಸಿದ್ದಾರೆ.

ಇನ್ನು 4.5 ಕಿಲೋಮೀಟರ್ ರಸ್ತೆಗೆ 5 ಕೋಟಿ ರೂಪಾಯಿ ಹಣ ಮಂಜೂರಾಗಿದೆ. ನಮ್ಮ ಗ್ರಾಮಕ್ಕೆ ಇದೊಂದು ದೊಡ್ಡ ಯೋಜನೆ ಆಗಿದೆ. ಈ ರಸ್ತೆ ಅಗಲೇ ಬೇಕು ಎಂದು ಗ್ರಾಮದ ಇನ್ನೊಂದು ಗುಂಪು ನಿಂತಿದೆ. ನಮ್ಮ ಜಮೀನುಗಳು ಸ್ವಲ್ಪ ಮಟ್ಟಿಗೆ ಹೋದರು ಪರವಾಗಿಲ್ಲ ನಮಗೆ ರಸ್ತೆ ಅಗಲಿಕರಣ ಆಗಬೇಕು ಎಂದಿದ್ದಾರೆ. ಈ ರಸ್ತೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳು ಹಾಗೂ ಶಾಲೆಗಳು ಇವೆ. ತುಂಬ ಕಿರಿದಾದ ರಸ್ತೆ ಇರುವುದರಿಂದ ನಮಗೆ ಓಡಾಡುವುದು ಕಷ್ಟವಾಗಿದೆ. ಹಾಗಾಗಿ ರಸ್ತೆ ಬೇಕು ಎಂದು ಊರಿನ ಕೆಲ ಮುಖಂಡರು ಹಾಗೂ ರೈತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಕೇಂದ್ರ ಸಚಿವ ಡಿವಿ ಸದಾನಂದಗೌಡ

ಇನ್ನು ಹಚ್ಚ ಹಸಿರಿನಿಂದ ಕಂಗೋಳಿಸುತ್ತಿದ್ದ 300 ಕ್ಕೂ ಹೆಚ್ವು ಮರಗಳ ಮಾರಣಹೋಮ ನಡೆದರು ಅರಣ್ಯ ಇಲಾಖೆ ಮಾತ್ರ ನಮಗೆ ಸಂಬಂಧವೆ ಇಲ್ಲ ಅನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಸಾಮಾನ್ಯ ಜನ ಒಂದು ಮರ ಕಡಿದ್ರೆ ಸಾಕು ಕ್ರಮಕೈಗೊಳ್ಳುತಾರೆ. ಆದರೆ, 300 ಕ್ಕೂ ಹೆಚ್ಚು ಮರ ಕಡಿದರು. ಗುತ್ತಿಗೆದಾರ ಎನ್ನುವ ಕಾರಣಕ್ಕೆ ಇಲಾಖೆ ಸುಮ್ಮನಾಗಿದೆ ಎಂದು ರೈತರು ಆರೋಪಿಸಿದ್ದಾರೆ.ಒಟ್ಟಿನಲ್ಲಿ ಒಂದು ಗುಂಪು ರಸ್ತೆ ಬೇಕು ಅಂದ್ರೆ ಇನ್ನೊಂದು ಗುಂಪು ರಸ್ತೆ ಬೇಡಾ ಅಂತಿದೆ. ಇದೆಲ್ಲದರ ಮಧ್ಯೆ ಗುತ್ತಿಗೆದಾರ ಮಾತ್ರ ತನ್ನ ಲಾಭಕ್ಕಾಗಿ ಬೆಳೆದು ನಿಂತ ಮರಗಳನ್ನ ಕಡಿದು ಹಾಕಿದ್ದಾನೆ. ಇತ್ತ ಪರಿಹಾರವು ಇಲ್ಲದೆ ಇತ್ತ ಮರಗಳು ಇಲ್ಲದೆ ಮರ ಕಳೆದುಕೊಂಡ ರೈತರು ಮಾತ್ರ ಕಂಗಾಲಾಗಿದ್ದಾರೆ.
Published by: G Hareeshkumar
First published: November 12, 2020, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading