ಹುಬ್ಬಳ್ಳಿ; ಕಿತ್ತು ತಿನ್ನುವ ಬಡತನದಲ್ಲಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಬಡ ಕುಟುಂಬವೊಂದು ಸಾಕಷ್ಡು ಕಷ್ಟ ಅನುಭವಿಸುತ್ತಿದೆ. ಕುಟುಂಬದ ಸ್ಥಿತಿ ತೀರ ಕಷ್ಟಕರವಾಗಿದ್ದು, ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ. ಇರುವ ಮೂರು ಮುದ್ದಾದ ಮಕ್ಕಳು ವಿಚಿತ್ರ ಕಾಯಿಲೆಯಿಂದ ನರಳುತ್ತಿವೆ. ಕಾರ್ತಿಕ, ಕುನಾಲ್ ಹಾಗೂ ಗೋವಿಂದ ಹೆಸರಿನ ಈ ಮಕ್ಕಳು ನರ ದೌರ್ಬಲ್ಯದಿಂದ ಬಳಲುತ್ತಿವೆ. ಹೊಸೂರಿನ ವಿನಾಯಕ ಕಬಾಡೆ ಮತ್ತು ಅಶ್ವಿನಿ ಕಬಾಡೆ ದಂಪತಿಗಳ ಮೂರು ಮಕ್ಕಳು ಈ ರೀತಿ ಅನಾರೋಗ್ಯಕ್ಕೆ ತುತ್ತಾಗಿವೆ.
ವಿನಾಯಕ ಪಾನ್‌ಶಾಪ್ ನಡೆಸಿ ಕುಟುಂಬ ಸಲಹುತ್ತಾರೆ. ಹುಟ್ಟಿದ ಒಂದು ವರ್ಷ ಸರಿಯಾಗೇ ಇರುವ ಈ ಮಕ್ಕಳು ನಂತರ ಈ ರೀತಿ ಕಾಯಿಲೆಗೆ ತುತ್ತಾಗುತ್ತಿವೆ. ವೈದ್ಯರನ್ನು ಕೇಳಿದರೆ ನರ ದೌರ್ಬಲ್ಯದಿಂದ ಕಾಯಿಲೆ ಬರುತ್ತೆ. ಲಕ್ಷದಲ್ಲಿ ಒಬ್ಬರಿಗೆ ಇಂತಹ ಕಾಯಿಲೆ ಇರುತ್ತೆ. ಜನೆಟಿಕ್ ಸಮಸ್ಯೆಯ ಕುರಿತು ಪರಿಶೀಲಿಸಿ ಚಿಕಿತ್ಸೆ ಮುಂದುವರಿಸಬೇಕು ಎನ್ನುತ್ತಿದ್ದಾರೆ. ಕುನಾಲ್ ಹಾಗೂ ಕಾರ್ತಿಕ ಅವಳಿ ಮಕ್ಕಳಾಗಿದ್ದು, ಕಳೆದ 12 ವರ್ಷಗಳಿಂದ ವಿಚಿತ್ರವಾದ ರೋಗದಿಂದ ನರಳುತ್ತಿವೆ. ಇನ್ನು ಕಳೆದ 8 ವರ್ಷದಿಂದ ಮೂರನೇ ಮಗನಾದ ಗೋವಿಂದ ಕೂಡ ಅಂಗವಿಕಲ ಹಾಗೂ ಬುದ್ದಿ ಮಾಂಧ್ಯನಾಗಿದ್ದಾನೆ. ಹೀಗಾಗಿ ಮಕ್ಕಳ ಚಿಕಿತ್ಸೆಗಾಗಿ ಇಡೀ ಕುಟುಂಬ ತುಂಬಾ ಕಷ್ಟ ಅನುಭವಿಸುತ್ತಿದೆ. ಕಳೆದ 10 ವರ್ಷಗಳಿಂದ ಮಕ್ಕಳ ಆರೋಗ್ಯಕ್ಕಾಗಿ ವಿನಾಯಕ ಕಬಾಡೆಯವರು ಸುಮಾರು 20 ಲಕ್ಷಕ್ಕೂ ಹೆಚ್ಚಿನ ಹಣವನ್ನು ಆಸ್ಪತ್ರೆ ಮತ್ತು ಔಷಧಿಗಾಗಿ ಖರ್ಚು ಮಾಡಿದ್ದಾರೆ. ಕಬಾಡೆ ಕುಟುಂಬ ಮಕ್ಕಳ ಚಿಕಿತ್ಸೆಗಾಗಿ ಇದ್ದಬದ್ದ ಎಲ್ಲವನ್ನು ಕಳೆದುಕೊಂಡು ಈಗ ಬೀದಿಗೆ ಬಂದಿದೆ. ಈಗ ಮಕ್ಕಳ ಔಷಧಿ ಸೇರಿದಂತೆ ಇತರೆ ಖರ್ಚು ನಿರ್ವಹಣೆ ಮಾಡಲಾಗದೆ ಕಂಗಾಲಾಗಿ ಕುಳಿತಿದ್ದಾರೆ.
ಇದನ್ನು ಓದಿ: ಸಚಿವ ಸುಧಾಕರ್ ನಿವಾಸದಲ್ಲಿ ವಲಸಿಗರ ಸಭೆಯಲ್ಲಿ ಆಹಾರ ಖಾತೆ ಬದಲಾವಣೆಗೆ ಕಣ್ಣೀರಿಟ್ಟ ಸಚಿವ ಗೋಪಾಲಯ್ಯ
ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ನಗರಗಳಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಈ ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಯಾವ ಆಸ್ಪತ್ರೆಯಲ್ಲಿಯೂ ಮಕ್ಕಳು ಉಳಿಯುವ ಧೈರ್ಯವನ್ನು ವೈದ್ಯರು ನೀಡುತ್ತಿಲ್ಲ. ಹೊಸೂರಿನಲ್ಲಿ ಪಾನಶಾಪ್ ಇಟ್ಟುಕೊಂಡಿರುವ ವಿನಾಯಕ ಅವರು ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಮ್ಮೆ ಮೂರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಲಕ್ಷಾಂತರ ಹಣ ಖರ್ಚಾಗುತ್ತದೆ. ಹೀಗಾಗಿ ಖರ್ಚು ಭರಿಸಲಾಗದೆ ಸಹಾಯಕ್ಕಾಗಿ ದಾನಿಗಳಿಗೆ ಮೊರೆ ಇಡುತ್ತಿದ್ದಾರೆ ಪೋಷಕರು. ಮಕ್ಕಳ ಚಿಕಿತ್ಸೆಗಾಗಿ ಈಗಾಗಲೇ ಹಲವು ಸಂಘಟನೆಗಳು ಸಾಕಷ್ಟು ಸಹಾಯ ಮಾಡಿವೆ. ಆದ್ರೆ ಜನಪ್ರತಿನಿಧಿಗಳಿಗೆ ಸಹಾಯ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸಹಾಯ ಸಹಕಾರ ಸಿಕ್ಕಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ