2nd PUC Results 2020 - ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ ; ಫಲಿತಾಂಶ ವೀಕ್ಷಿಸಲು ಆತನೇ ಇಲ್ಲ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಗುರಲಿಂಗಪ್ಪ ಅಂಗಡಿ ಮತ್ತು ದಾನಮ್ಮ ಅಂಗಡಿ ಅವರ ಮಗ ರಕ್ಷಿತ ದ್ವಿತೀಯ ಪಿಯುಸಿಯಲ್ಲಿ ಮಾಡಿರುವ ಸಾಧನೆ ಆತನ ನಿಧನದ ಬಳಿಕವೂ ಚಿರಸ್ಥಾಯಿಯಾಗಿದೆ

ಮೃತ ವಿದ್ಯಾರ್ಥಿ ರಕ್ಷಿತ ಗುರಲಿಂಗಪ್ಪ ಅಂಗಡಿ

ಮೃತ ವಿದ್ಯಾರ್ಥಿ ರಕ್ಷಿತ ಗುರಲಿಂಗಪ್ಪ ಅಂಗಡಿ

  • Share this:
ವಿಜಯಪುರ(ಜುಲೈ. 15): ವಿಧಿಯಾಟ ಎಂಥೆಂಥ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ವಿದ್ಯಾಭ್ಯಾಸ, ತಾಂತ್ರಿಕ ನೈಪುಣ್ಯತೆಯಲ್ಲಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಇಂಗ್ಲೀಷ್ ಪರೀಕ್ಷೆಗೂ ಮುನ್ನವೇ ಇಹಲೋಕ ತ್ಯಜಿಸಿದ್ದ. ಆದರೆ, ನಿನ್ನೆ ಈತನ ಪರೀಕ್ಷೆಯ ಫಲಿತಾಂಶ ಬಂದಿದ್ದು, ಈತ ಬರೆದ ಎಲ್ಲ ವಿಷಯಗಳಲ್ಲೂ ಶೇ. 90 ರಷ್ಟು ಅಂಕ ಗಳಿಸಿರುವುದು ಈತನಲ್ಲಿದ್ದ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ರಕ್ಷಿತ ಗುರಲಿಂಗಪ್ಪ ಅಂಗಡಿ(18) ದಿವ್ಯಾಂಗ ಯುವಕ. ಬಾಲ್ಯದಿಂದಲೂ ವಿದ್ಯಾಭ್ಯಾಸ, ಜಗತ್ತಿನ ಆಗುಹೋಗುಗಳು, ತಾಂತ್ರಿಕ ನೈಪುಣ್ಯತೆ, ಹೊಸ ಹೊಸ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಇತನಿಗೆ ಜ್ಞಾನ ಇವನಿಗಿದ್ದ ಅಂಧತ್ವಕ್ಕೆ ಎಂದೂ ಸವಾಲಾಗಲಿಲ್ಲ. ಬಾಲ್ಯದಿಂದಲೂ ಅಂಧನಾಗಿದ್ದರೂ ಮತ್ತೋಬ್ಬರ ಬಾಳಿಗೆ ಬೆಳಕಾಗುವಂಥ ಸಾಧನೆ ಮೂಲಕ ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಗುರಲಿಂಗಪ್ಪ ಅಂಗಡಿ ಮತ್ತು ದಾನಮ್ಮ ಅಂಗಡಿ ಅವರ ಹಿರಿಯ ಮಗ ರಕ್ಷಿತ ದ್ವಿತೀಯ ಪಿಯುಸಿಯಲ್ಲಿ ಮಾಡಿರುವ ಸಾಧನೆ ಆತನ ನಿಧನದ ಬಳಿಕವೂ ಚಿರಸ್ಥಾಯಿಯಾಗಿದೆ. ಈ ಯುವಕ ತನ್ನ ಪೋಷಕರೊಂದಿಗೆ ವಿಜಯಪುರ ನಗರದ ಪದ್ಮಾವತಿ ಕಾಲನಿಯಲ್ಲಿ ವಾಸಿಸುತ್ತಿದ್ದ. ಇವರ ತಂದೆ ಗುರಲಿಂಗಪ್ಪ ಅಂಗಡಿ ಖ್ಯಾತ ಉದ್ಯಮಿ. ತಾಯಿ ದಾನಮ್ಮ ಗುರಲಿಂಗಪ್ಪ ಕಾಖಂಡಕಿ ಜಿಲ್ಲಾ ಪಂಚಾಯತ್​ ಬಿಜೆಪಿ ಸದಸ್ಯೆ. ಬಾಲ್ಯದಿಂದಲೇ ಈತನಿಗೆ ದೃಷ್ಠಿದೋಷವಿದ್ದರೂ ಈತನ ಕಲಿಕೆಯ ಉತ್ಸಾಹಕ್ಕೇನೂ ಕೊರತೆ ಇರಲಿಲ್ಲ. ವಯಸ್ಸು ಕೇವಲ 18 ಆದರೂ ತಂದೆ ನಡೆಸುವ ಉದ್ಯಮದ ಬಗ್ಗೆ ಈತ ಹೊಂದಿದ್ದ ಆಸಕ್ತಿ, ಇಂಥ ಸಣ್ಣ ವಯಸ್ಸಿನಲ್ಲಿಯೇ ತಂದೆಯ ಉದ್ಯೋಗವನ್ನು ವಿಸ್ತರಿಸಿದ ರೀತಿ ದೊಡ್ಡ ಉದ್ಯಮಿಗಳೇ ಅಚ್ಚರಿ ಪಡುವಂತೆ ಮಾಡಿತ್ತು.

ಶ್ರೀ ಸಿದ್ಧೇಶ್ವರ ಎಂಜಿನಿಯರಿಂಗ್ ಕಂಪನಿ ಇವರ ತಂದೆಯವರು ನಿರ್ವಹಿಸುತ್ತಿದ್ದ ಕಂಪನಿ.  ರೈತರ ಕೃಷಿ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿಗೆ ಜಿಲ್ಲೆಯ ನಾನಾ ಮೂಲೆಗಳಿಂದ ರೈತರು ಬರುತ್ತಿರುತ್ತಾರೆ. ಈ ರೈತರು ಒಂದು ಕೆಲಸಕ್ಕಾಗಿ ತಮ್ಮ ಊರಿನಿಂದ ಇಲ್ಲಿಗೆ ಬರುವುದನ್ನು ತಪ್ಪಿಸಲು ಈ ಯುವಕ ಹೊಸ ಐಡಿಯಾ ಹುಡುಕಿದ್ದ. ಆಸಕ್ತ ಸಣ್ಣ ಉದ್ಯಮಿಗಳನ್ನು ಹುಡುಕಿ ಅವರಿಗೆ ವಿಜಯಪುರ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಶ್ರೀ ಸಿದ್ಧೇಶ್ವರ ಎಂಜಿನಿಯರಿಂಗ್ ಕಂಪನಿ ವತಿಯಿಂದಲೇ ಫ್ರ್ಯಾಂಚೈಸಿ ನೀಡಿದ್ದ.

ಈ ರೀತಿ ಮಾಡುವುದರಿಂದ ಉದ್ಯೋಗ ಸೃಷ್ಛಿ ಅಷ್ಟೇ ಅಲ್ಲ, ರೈತರು ದೂರದ ಊರಿನಿಂದ ವಿಜಯಪುರಕ್ಕೆ ಬರುವ ಬದಲು ಹತ್ತಿರದ ತಾಲೂಕು ಕೇಂದ್ರಕ್ಕೆ ಹೋದರೆ ಸಮಯದ ಜೊತೆಗೆ ಹಣದ ಹೆಚ್ಚುವರಿ ಖರ್ಚು ಉಳಿಯುತ್ತದೆ ಎಂದು ಯೋಚಿಸಿ ಈ ಕ್ರಮ ಕೈಗೊಂಡಿದ್ದ ಎನ್ನುತ್ತಾರೆ ಈ ವಿದ್ಯಾರ್ಥಿಯ ಸ್ನೇಹಿತ ಕೈಲಾಸ ತಿಮಶೆಟ್ಟಿ.

ಕಣ್ಣು ಕಾಣದಿದ್ದರೂ ಲ್ಯಾಪ್ ಟಾಪ್, ಮೊಬೈಲ್ ಬಳಸುತ್ತಿದ್ದ ಈತ ಅಂಧರಿಗಾಗಿ ಇರುವ ವಾಯ್ಸ್ ಓವರ್ ಆ್ಯಪ್ ಬಳಸುತ್ತಿದ್ದ.  ಈ ಮೂಲಕ ಯಾವುದೇ ಸಮಸ್ಯೆ ಎದುರಾದರೂ ಕ್ಷಣಾರ್ಧದಲ್ಲಿ ಅದಕ್ಕೊಂದು ಸೂಕ್ತ ಪರಿಹಾರ ಕಂಡು ಹಿಡಿಯುತ್ತಿದ್ದ. ಮೊಬೈಲ್, ಬೈಕ್ ಎಲೆಕ್ಟ್ರಾನಿಕ್ಸ್ ವಸ್ತುಗಳ ದುರಸ್ಥಿಯನ್ನೂ ಮಾಡುತ್ತಿದ್ದ.  ಕಣ್ಣು ಕಾಣದಿದ್ದರೂ ಹಿಂಬದಿಯಲ್ಲೊಬ್ಬರು ಕುಳಿತು ಮಾರ್ಗದರ್ಶನ ಮಾಡಿದರೆ ಬೈಕ್ ಓಡಿಸುತ್ತಿದ್ದ, ಕಾರು ಚಲಾಯಿಸುತ್ತಿದ್ದ. ಅಂಧತ್ವ ಶಾಪವಲ್ಲ.  ಸಾಧಕರು ನಿಜವಾಗಿಯೂ ಮೆಟ್ಟಿ ನಿಲ್ಲಲು ಬಂದಿರುವ ಸವಾಲು ಎಂದು ಹೇಳುತ್ತಿದ್ದ.

ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಕಾಣು ಎನ್ನುವಂತೆ ಅಂಧನಾಗಿದ್ದರೂ, ಈತ ವಿಜಯಪುರ ನಗರದ ಪ್ರೇರಣಾ ಪ್ರೌಢಶಾಲೆಯಲ್ಲಿ ಓದುವಾಗ ಕೇಂದ್ರ ಸರಕಾರ ನಡೆಸುವ ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆ(ಎನ್ ಟಿ ಎಸ್ ಇ)ಯಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ. ಈ ಮೂಲಕ ಎಲ್ಲ ರೀತಿಯಿಂದಲೂ ಸೌಲಭ್ಯ ಹೊಂದಿದ್ದರೂ ಇತರ ವಿದ್ಯಾರ್ಥಿಗಳು ಮಾಡಲಾಗದ ಸಾಧನೆಯನ್ನು ಮಾಡಿದ್ದ.

ಇದನ್ನೂ ಓದಿ : ಪಶ್ಚಿಮಘಟ್ಟ ಕಾಡುಗಳಲ್ಲಿವೆ ರಕ್ತ‌ಹೀರುವ ಅತಿಥಿಗಳು ; ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!

ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿ ಇಂಗ್ಲೀಷ್ ಪರೀಕ್ಷೆ ಬರೆಯುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದ. ಈಗ ಪ್ರಕಟವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈತ ಪಡೆದಿರುವ ಅಂಕಗಳು ಈತನ ಪೋಷಕರು, ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಕಣ್ಣೀರು ತರಿಸುತ್ತಿವೆ. ಪಿಯು ಸೈನ್ಸ್  ಓದುತ್ತಿದ್ದ ಈತ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನ್ನಡದಲ್ಲಿ 90, ಭೌತಶಾಸ್ತ್ರದಲ್ಲಿ 90. ರಸಾಯನ ಶಾಸ್ತ್ರದಲ್ಲಿ 92, ಗಣಿತದಲ್ಲಿ 86 ಮತ್ತು ಜೀವಶಾಸ್ತ್ರದಲ್ಲಿ 90 ಅಂಕ ಗಳಿಸಿದ್ದಾನೆ.

ಈ ಅಂಕಗಳು ರಕ್ಷಿತ ಗುರಲಿಂಗಪ್ಪ ಅಂಗಡಿಯಲ್ಲಿದ್ದ ಪ್ರತಿಭೆಗೆ ಸಾಕ್ಷಿಯಾಗಿದೆ.  ಈಗ ಈ ಯುವಕನಿಲ್ಲದಿದ್ದರೂ ಆತ ಬದುಕಿದ ರೀತಿ ಮತ್ತು ಮಾಡಿರುವ ಸಾಧನೆಗಳು ಮಾತ್ರ ಚಿರಸ್ಥಾಯಿಯಾಗಿವೆ.
Published by:G Hareeshkumar
First published: