ಕಲಬುರ್ಗಿ; ಪ್ರಸಕ್ತ ಸಾಲಿನ ಕಬ್ಬು ನುರಿಸುವಿಕೆ, ಕಬ್ಬಿನ ದರ ನಿಗದಿಗೆ ಸಂಬಂಧಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಡಳಿ ಪ್ರತಿನಿಧಿಗಳ ಸಭೆ ವಿಫಲವಾಗಿದೆ. ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಕುರಿತು ಚರ್ಚಿಸಲಾಯಿತು. ಸಭೆಗೆ ಕೇವಲ ಮೂರು ಕಾರ್ಖಾನೆಗಳ ಪ್ರತಿನಿಧಿಗಳು ಮಾತ್ರ ಭಾಗಿಯಾಗಿದ್ದರು. ಯಾದಗಿರಿ ಕೋರ್ ಗ್ರೀನ್ ಕಾರ್ಖಾನೆ ಪ್ರತಿನಿಧಿಗಳ ಗೈರು ಹಾಜರಾಗಿದ್ದರು.
ಸರ್ಕಾರ ನಿಗದಿಗೊಳಿಸಿದ ಎಫ್.ಆರ್.ಪಿ. ದರದಲ್ಲಿಯೂ ಕಡಿತ ಮಾಡುತ್ತಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ವರ್ಷ ಪ್ರತಿ ಟನ್ ಗೆ 100 ರೂಪಾಯಿ ಕಡಿತ ಮಾಡಿ ರೈತರಿಗೆ ವಂಚಿಸಲಾಗಿದೆ ಎಂದು ರೈತರು ಆರೋಪಿಸಿದರು. ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಗೆ ಆಳಂದ ಎನ್.ಎಸ್.ಎಲ್. ಕಾರ್ಖಾನೆಗೆ 2,756, ಅಫಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆಗೆ 2,853, ಜೇವರ್ಗಿಯ ಉಗಾರ್ ಶುಗರ್ಸ್ ಕಾರ್ಖಾನೆಗೆ 2,753 ಹಾಗೂ ಯಾದಗಿರಿಯ ಕೋರ್ ಗ್ರೀನ್ ಕಾರ್ಖಾನೆಗೆ 2,734 ರೂಪಾಯಿ ಎಫ್.ಆರ್.ಪಿ. ದರ ನಿಗದಿಗೊಳಿಸಲಾಗಿದೆ. ಕಾರ್ಖಾನೆ ಗೇಟ್ ಗೆ ತರೋ ಕಬ್ಬಿಗೆ ಈ ದರ ನಿಗದಿ ಮಾಡಲಾಗಿದೆ.
ಆದರೆ ಕಳೆದ ವರ್ಷ ಎಫ್.ಆರ್.ಪಿ. ದರಕ್ಕಿಂತ ಕಡಿಮೆ ದರ ನೀಡಿ ವಂಚನೆ ಮಾಡಿವೆ. ಈ ವರ್ಷ ಯಾವುದೇ ದರ ನಿಗದಿ ಮಾಡದೇ ಕಬ್ಬು ನುರಿಸಲು ಕಾರ್ಖಾನೆಗಳು ಆರಂಭಿಸಿವೆ ಎಂದು ರೈತರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಲದಿಂದಲೇ ಕಬ್ಬನ್ನು ಖರೀದಿ ಮಾಡಿ, ಪ್ರತಿ ಟನ್ ಗೆ 2500 ರೂಪಾಯಿ ದರ ನಿಗದಿ ಮಾಡಬೇಕು ಎಂದು ಕಬ್ಬು ಬೆಳೆಗಾರರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಕಾರ್ಖಾನೆ ಪ್ರತಿನಿಧಿಗಳು ಸಮ್ಮತಿ ಸೂಚಿಸಿಲ್ಲ. ಜಿಲ್ಲಾಧಿಕಾರಿ ಮಧ್ಯಸ್ತಿಕೆ ನಂತರವೂ ಸಭೆ ವಿಫಲವಾಗಿದೆ.
ಇದನ್ನು ಓದಿ: ಸತೀಶ ಜಾರಕಿಹೊಳಿ ಹೆಗಲಿಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಹೊಣೆ; ಮಾಜಿ ಸಚಿವ ಎಂ ಬಿ ಪಾಟೀಲ್
ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ರಾಜಾಪುರ, ಪ್ರತಿ ವರ್ಷವೂ ಸಕ್ಕರೆ ಕಾರ್ಖಾನೆಗಳು ರೈತರೊಂದಿಗೆ ಚೆಲ್ಲಾಟ ಆಡುತ್ತಿವೆ. ಸರ್ಕಾರ ನಿಗದಿ ಮಾಡೋದು ಒಂದು ದರವಾದರೆ, ಕಾರ್ಖಾನೆಗಳು ಕೊಡೋದೆ ಮತ್ತೊಂದು ದರ. ಆದರೂ ಸಹ ತಿಂಗಳಾನುಗಟ್ಟಲೇ ತಡ ಮಾಡಿ ಕೊಡುತ್ತಿವೆ. 15 ದಿನಗಳ ನಂತರ ತಡವಾಗಿ ಕೊಡೋ ಹಣಕ್ಕೆ ಬಡ್ಡಿ ನೀಡಬೇಕೆಂಬ ನಿಯಮವಿದ್ದರೂ ಕಾರ್ಖಾನೆಗಳು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ