ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೋವಿಡ್

ಸದ್ಯ ವಸತಿ ಕಾಲೇಜನ್ನು ಬಂದ್ ಮಾಡಿ, ಕಂಟೈನ್ಮೆಂಟ್ ವಲಯವೆಂದು ಘೋಷಿಸಿದ್ದು, ತರಗತಿಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಕಾಲೇಜು ತರಗತಿ ಮತ್ತು ವಸತಿ ನಿಲಯದ ಕೊಠಡಿ ಸೇರಿದಂತೆ ಎಲ್ಲೆಡೆ ಸ್ಯಾನಿಟೈಸರ್ ಮಾಡಲಾಗಿದೆ. ಅಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿ ವೈದ್ಯರ ತಂಡ ಶಾಲಾ ಆವರಣದಲ್ಲೇ ಬೀಡುಬಿಟ್ಟಿದ್ದು, ಉಳಿದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.

ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜು.

ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜು.

  • Share this:
ಕೊಡಗು: ಪದವಿಪೂರ್ವ ಕಾಲೇಜು ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಅಟ್ಯಾಕ್ ಆಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಕಳೆದ ವಾರವಷ್ಟೇ ವಿದ್ಯಾರ್ಥಿ ಒಬ್ಬನಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಪೋಷಕರನ್ನು ಕರೆದು ಆ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಪೋಷಕರು ತೀವ್ರ ಜ್ವರ ಇದ್ದಿದ್ದರಿಂದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸೋಮವಾರ ವಿದ್ಯಾರ್ಥಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್ ಇರುವುದನ್ನು ಆರೋಗ್ಯ ಇಲಾಖೆ ಕಾಲೇಜು ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡ ಕಾಲೇಜು ಪ್ರಾಂಶುಪಾಲ ಲೋಕೇಶ್ ಅವರು ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ಕರೆಸಿ ಕಾಲೇಜಿನಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ದ್ವಿತೀಯ ಪಿಯು ತರಗತಿಯ 24 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಆರೋಗ್ಯ ಸರಿಯಿಲ್ಲವೆಂದು ಮನೆಗೆ ಕಳುಹಿಸಿದ್ದ ವಿದ್ಯಾರ್ಥಿ ಸೇರಿದಂತೆ ಒಟ್ಟು 25 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಜನವರಿ 11 ರಂದು ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಆರಂಭವಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕೋವಿಡ್ ನೆಗೆಟಿವ್ ವರದಿ ಪಡೆದೇ ಕಾಲೇಜು ಮತ್ತು ತರಗತಿಗೆ ಅವಕಾಶ ನೀಡಲಾಗಿತ್ತು. ಆದರೆ ಮೊದಲು ಪಾಸಿಟಿವ್ ಬಂದ ವಿದ್ಯಾರ್ಥಿ ಆರೋಗ್ಯ ಸರಿಯಿಲ್ಲದೆ ಇದಕ್ಕೂ ಮೊದಲು ಒಮ್ಮೆ ಮನೆಗೆ ಹೋಗಿ ಬಂದಿದ್ದ ಎನ್ನೋದು ಕಾಲೇಜಿನ ಉಪನ್ಯಾಸಕರಿಂದ ತಿಳಿದು ಬಂದ ಮಾಹಿತಿ. ಹೀಗಾಗಿ ಊರಿಗೆ ಹೋಗಿದ್ದ ಆ ವಿದ್ಯಾರ್ಥಿಗೆ ಎಲ್ಲೋ ಕೊರೋನಾ ಅಟ್ಯಾಕ್ ಆಗಿದೆ ಎನ್ನೋದು ಗೊತ್ತಾಗಿದೆ. ಕಾಲೇಜಿನ ದ್ವಿತೀಯ ಪಿಯುಸಿ ತರಗತಿಯಲ್ಲಿ ಒಟ್ಟು 76 ವಿದ್ಯಾರ್ಥಿಗಳಿದ್ದು 49 ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಉಳಿದ ಇಬ್ಬರು ಹೆಣ್ಣು ಮಕ್ಕಳಿಗೆ ಶೀತದ ಲಕ್ಷಣವಿದ್ದು ಆ ವಿದ್ಯಾರ್ಥಿನಿಯರನ್ನು ವಸತಿ ನಿಲಯದಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ.

ಇದನ್ನು ಓದಿ: ಏರೋ ಇಂಡಿಯಾ 2021 ಯಶಸ್ವಿಗೆ ಭಾಗಶಃ ಬಂದ್ ಆಗಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಕಾಲೇಜಿನ ಎಲ್ಲಾ ಸಿಬ್ಬಂದಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಎಲ್ಲರೂ ಪಾಸಿಟಿವ್ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿ ಇದಿದ್ದರಿಂದ ವಿದ್ಯಾರ್ಥಿ ಮತ್ತು ಸಿಬ್ಬಂದಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಎಲ್ಲಾ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಕಾಲೇಜಿಗೆ ಭೇಟಿ ನೀಡಿದ್ದ ಕೊಡಗು ಡಿಎಚ್ಓ ಮೋಹನ್ ಕುಮಾರ್ ಹೇಳಿದ್ದಾರೆ.

ಸದ್ಯ ವಸತಿ ಕಾಲೇಜನ್ನು ಬಂದ್ ಮಾಡಿ, ಕಂಟೈನ್ಮೆಂಟ್ ವಲಯವೆಂದು ಘೋಷಿಸಿದ್ದು, ತರಗತಿಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಕಾಲೇಜು ತರಗತಿ ಮತ್ತು ವಸತಿ ನಿಲಯದ ಕೊಠಡಿ ಸೇರಿದಂತೆ ಎಲ್ಲೆಡೆ ಸ್ಯಾನಿಟೈಸರ್ ಮಾಡಲಾಗಿದೆ. ಅಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿ ವೈದ್ಯರ ತಂಡ ಶಾಲಾ ಆವರಣದಲ್ಲೇ ಬೀಡುಬಿಟ್ಟಿದ್ದು, ಉಳಿದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.
Published by:HR Ramesh
First published: