HOME » NEWS » District » 22 KV POWER PRODUCTION CAPACITY SOLAR SYSTEM IMPLANT ON PUTTUR APMC OFFICE TERRACE RHHSN AKP

ವಿದ್ಯುತ್ ಉತ್ಪಾದನೆಯಲ್ಲಿ‌ ಸ್ವಾವಲಂಬನೆ; ಪುತ್ತೂರು ಎಪಿಎಂಸಿಯಲ್ಲಿ 22 ಕೆವಿ ಸೌರ ವಿದ್ಯುತ್ ಘಟಕ ಆರಂಭ

ಪ್ರತೀ ಸರಕಾರಿ ಕಚೇರಿ ಹಾಗೂ ವ್ಯವಸ್ಥೆಗಳಲ್ಲಿ ಇಂಥ ಘಟಕಗಳನ್ನು ಅಳವಡಿಸಿ, ತಮಗೆ ಬೇಕಾದಷ್ಟು ಪ್ರಮಾಣದ ವಿದ್ಯುತ್ ಅನ್ನು ಸೌರಶಕ್ತಿಯ‌ ಮೂಲಕ ತಾವೇ ಉತ್ಪಾದಿಸಬಹುದಾಗಿದ್ದು, ಪುತ್ತೂರು ಎಪಿಎಂಸಿಯನ್ನು ಎಲ್ಲರೂ ಅನುಸರಿಸಬೇಕಿದೆ.

news18-kannada
Updated:April 16, 2021, 1:38 PM IST
ವಿದ್ಯುತ್ ಉತ್ಪಾದನೆಯಲ್ಲಿ‌ ಸ್ವಾವಲಂಬನೆ; ಪುತ್ತೂರು ಎಪಿಎಂಸಿಯಲ್ಲಿ 22 ಕೆವಿ ಸೌರ ವಿದ್ಯುತ್ ಘಟಕ ಆರಂಭ
ಪುತ್ತೂರು ಎಪಿಎಂಸಿ ಕಚೇರಿ ಮೇಲೆ ಹಾಕಲಾದ ಸೋಲಾರ್.
  • Share this:
ಪುತ್ತೂರು: ಇಂಧನ ಆಧಾರಿತ ಶಕ್ತಿಗೆ ಬದಲಾಗಿ ಗ್ರೀನ್ ಎನರ್ಜಿ ಮೂಲಕ ವಿದ್ಯುತ್ ಉತ್ಪಾದನೆಗೆ ವಿಶ್ವದೆಲ್ಲೆಡೆ ಹೆಚ್ಚಿನ ಒತ್ತು  ನೀಡಲಾಗುತ್ತಿದೆ. ಅದರಲ್ಲೂ ಸೌರಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದನೆಯತ್ತ ಹೆಚ್ಚಿನ ಗಮನವನ್ನೂ ಹರಿಸಲಾಗುತ್ತದೆ. ಭಾರತದಲ್ಲೂ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಗೆ ಹಲವು ಕ್ರಮಗಳನ್ನು ತೆಗದುಕೊಳ್ಳಲಾಗಿದೆ. ದೇಶಕ್ಕೆ ವಿದ್ಯುತ್ ಪೂರೈಕೆ ಮಾಡುವ ಉತ್ಪಾದನಾ ಘಟಕಗಳು ಇಂದು ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲು ಆರಂಭಿಸಿದ್ದು, ಇದರಿಂದಾಗಿ ದೇಶದ ಆರ್ಥಿಕತೆಯ ಮೇಲೂ ಪೂರಕ ಪರಿಣಾಮಗಳು ಬೀರುವ ಸಾಧ್ಯತೆಯನ್ನೂ ನಿರೀಲ್ಷಿಸಲಾಗುತ್ತಿದೆ. ಈ ನಡುವೆ ಸರಕಾರವೂ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ನಡೆಸುವಂತೆ ಎಲ್ಲಾ ಸಾರ್ವಜನಿಕ, ಖಾಸಗಿ ಉದ್ಯಮಗಳಿಗೂ ಮನವಿ ಮಾಡಿದೆ. ಈ ನಡುವೆ ಎಲ್ಲಾ ಸರಕಾರಿ ಕಚೇರಿಗಳಲ್ಲೂ ಸೌರಶಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕುರಿತು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಇವುಗಳು ಈಗಾಗಲೇ ಹಲವು ಕಡೆಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ.

ಕರ್ನಾಟಕ ರಾಜ್ಯದಲ್ಲೂ ಸರಕಾರಿ ಕಚೇರಿ ಹಾಗೂ ಸರಕಾರಕ್ಕೆ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಸೌರಶಕ್ತಿ ವಿದ್ಯುತ್ ಘಟಕಗಳು ಆರಂಭಗೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಎಪಿಎಂಸಿ ಯಲ್ಲಿ ಸೌರಶಕ್ತಿಯ ವಿದ್ಯುತ್ ಘಟಕವನ್ನು ಅಳವಡಿಸಲಾಗಿದೆ. ಸರಕಾರದ ವ್ಯವಸ್ಥೆಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಿದ ಮೊದಲ ಎಪಿಎಂಸಿ ಇದಾಗಿದೆ. ಕೇಂದ್ರದ ಹೊಸ ಕೃಷಿ ಕಾನೂನು ಜಾರಿಗೆ ಬಂದ ಬಳಿಕ ಎಪಿಎಂಸಿ ವ್ಯವಸ್ಥೆಗಳು ನೆಲಕಚ್ಚಲಿದೆ ಎನ್ನುವ ಆರೋಪಗಳ ನಡುವೆಯೂ ಪುತ್ತೂರು ಎಪಿಎಂಸಿ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿರುವುದರಲ್ಲಿ ಈ ಸೌರ ವಿದ್ಯುತ್ ಘಟಕವೂ ಒಂದಾಗಿದೆ. ಈ ಘಟಕವು 22 ಕೆ.ವಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕವಾಗಿದ್ದು, ಈ ಘಟಕವೊಂದಕ್ಕೇ  ಸುಮಾರು 25 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಈ ಘಟಕದಿಂದ ಉತ್ಪಾದನೆಗೊಳ್ಳುವ ವಿದ್ಯುತ್ ನೇರವಾಗಿ ಮೆಸ್ಕಾಂ ಗ್ರಿಡ್ ಗೆ ಪೂರೈಕೆಯಾಗುವಂತಹ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ.

ಇದನ್ನು ಓದಿ: Coronavirus - ಏ. 20ರವರೆಗೆ ಹೊಸ ಕರ್ಫ್ಯೂ ಕ್ರಮ ಇಲ್ಲ: ಸಿಎಂ ಯಡಿಯೂರಪ್ಪ ಹೇಳಿಕೆ

ಪುತ್ತೂರು ಎಪಿಎಂಸಿ ಪ್ರತೀ ತಿಂಗಳು ಸರಾಸರಿ ಒಂದು ಲಕ್ಷ ರೂಪಾಯಿಗಳಷ್ಟು ವಿದ್ಯುತ್ ಬಿಲ್ ಪಾವತಿಸಿಗೆ ವಿನಿಯೋಗಿಸಬೇಕಾಗಿದ್ದು, ನೂತನವಾಗಿ ಅಳವಡಿಸಲಾದ ಸೌರ ವಿದ್ಯುತ್ ಘಟಕದಿಂದ ಎಪಿಎಂಸಿಗೆ ಈ ಹಣದಲ್ಲಿ ಕೊಂಚ ಉಳಿತಾಯವಾಗಲಿದೆ. ಈ ಘಟಕದಿಂದ ಉತ್ಪಾದನೆಗೊಳ್ಳುವ ವಿದ್ಯುತ್ ಅನ್ನು ಮೆಸ್ಕಾಂ ನೇರವಾಗಿ ತನ್ನ ಗ್ರಿಡ್ ಗೆ ಸೇರಿಸಿಕೊಳ್ಳುತ್ತಿದ್ದು, ಪ್ರತಿ ದಿನ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಿ ಮೆಸ್ಕಾಂ ಗ್ರಿಡ್ ಗೆ ಸೇರ್ಪಡೆಯಾಗುತ್ತಿದೆ ಎನ್ನುವ ಲೆಕ್ಕಾಚಾರಕ್ಕೂ ವಿಶೇಷ ಮೀಟರ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಹಾಗೂ ಅಧ್ಯಕ್ಷ ದಿನೇಶ್ ಮೆದು ಪ್ರಕಾರ ಈ ಘಟಕದಿಂದ ತಿಂಗಳಿಗೆ 40 ಸಾವಿರ ರೂಪಾಯಿಯಷ್ಟು ವಿದ್ಯುತ್ ಬಿಲ್ ಉಳಿಸಬಹುದಾಗಿದೆ. ಒಂದು ಲಕ್ಷದಷ್ಟು ವಿದ್ಯುತ್ ಬಿಲ್ ಪಾವತಿಸಬೇಕಾಗಿದ್ದ ಎಪಿಎಂಸಿ ಮುಂದಿನ ದಿನಗಳಲ್ಲಿ ಸರಿಸುಮಾರು 40 ಸಾವಿರ ಕಡಿಮೆ ಪಾವತಿಸಲಿದೆ. ಘಟಕದ ನಿರ್ವಹಣೆ ಘಟಕವನ್ನು ಅಳವಡಿಸಿದ ಕಂಪನಿಯೇ ನಿರ್ವಹಿಸಲಿದ್ದು, ಐದಾರು ವರ್ಷಕ್ಕೆ ಯಾವುದೇ ತೊಂದರೆಯಿಲ್ಲ‌ ಎನ್ನುತ್ತಾರೆ. ಪ್ರತೀ ಸರಕಾರಿ ಕಚೇರಿ ಹಾಗೂ ವ್ಯವಸ್ಥೆಗಳಲ್ಲಿ ಇಂಥ ಘಟಕಗಳನ್ನು ಅಳವಡಿಸಿ, ತಮಗೆ ಬೇಕಾದಷ್ಟು ಪ್ರಮಾಣದ ವಿದ್ಯುತ್ ಅನ್ನು ಸೌರಶಕ್ತಿಯ‌ ಮೂಲಕ ತಾವೇ ಉತ್ಪಾದಿಸಬಹುದಾಗಿದ್ದು, ಪುತ್ತೂರು ಎಪಿಎಂಸಿಯನ್ನು ಎಲ್ಲರೂ ಅನುಸರಿಸಬೇಕಿದೆ.
Published by: HR Ramesh
First published: April 16, 2021, 1:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories