ಬಾಲ್ಯದಿಂದಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ವಿದ್ಯಾರ್ಥಿ, ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಹಾಸನದ ಹುಡುಗ

ನೆಟ್​ವರ್ಕ್​ 18 ಸಂಸ್ಥೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಮತ್ತು ಸಂಸ್ಥೆಗಳನ್ನು ಎಲ್ಲರಿಗೂ ಪರಿಚಯಿಸುವ, ಆ ಮೂಲಕ ಪರಿಸರದ ಉಳಿವಿಗಾಗಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ.

ಗಿಡ ನೆಡುತ್ತಿರುವ ಗಿರೀಶ್​ ಕೆ ಆರ್​

ಗಿಡ ನೆಡುತ್ತಿರುವ ಗಿರೀಶ್​ ಕೆ ಆರ್​

  • Share this:
ಹಾಸನ: ಅದೊಂದು ಕಾಲವಿತ್ತು. ಮಕ್ಕಳು ಬೆಳೆಯುವಾಗಲೇ ಪೋಷಕರು ಪರಿಸರ ಕಾಳಜಿಯನ್ನು ಅವರಲ್ಲಿ ಆಳವಾಗಿ ಬೇರೂರುವಂತೆ ಮಾಡುತ್ತಿದ್ದರು. ಅದರಲ್ಲೂ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಪರಿಸರದ ಬಗೆಗಿನ ಪ್ರೇಮ ದೊಡ್ಡ ಮಟ್ಟದಲ್ಲಿತ್ತು. ಆದರೆ ವರ್ಷಗಳು ಉರುಳಿದಂತೆ, ಪರಿಸರದ ಮೇಲಿನ ಕಾಳಜಿ ದೂರಾಗುತ್ತಲೇ ಬಂದಿದೆ. ಅದಕ್ಕೆ ಮೂಲ ಕಾರಣವೆಂದರೆ ಯುವ ಪೀಳಿಗೆ ಬದುಕು ಕಟ್ಟಿಕೊಳ್ಳಲು ಪಟ್ಟಣ ಸೇರಿರುವುದು. ಇದರಿಂದ ಹಳ್ಳಿಗಳು ವೃದ್ಧಾಶ್ರಮದಂತಾಗಿವೆ. ಮಕ್ಕಳು ಉನ್ನತ ವ್ಯಾಸಂಗಕ್ಕೆ ಊರು ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಆದರೆ ಇವರೆಲ್ಲರ ನಡುವೆ ವಿಶೇಷವೆನಿಸುತ್ತಾರೆ ಹಾಸನದ ಈ ಬಾಲಕ.

ಗಿರೀಶ್​ ಕೆ.ಆರ್​. 20 ವರ್ಷದ ಯುವಕ. ಬಿಎ ಮೊದಲ ವರ್ಷ ಓದುತ್ತಿದ್ದಾನೆ. ಓದಿನ ಜತೆಗೆ ಪರಿಸರ ಉಳಿಸುವ, ಬೆಳೆಸುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಗಿರೀಶ್​ ನಮ್ಮೆಲ್ಲರಿಗೂ ಮಾದರಿ. ಗಿರೀಶ್​ ಗುಡ್ಡೇನಹಳ್ಳಿ ಕೊಪ್ಪಲಿನ ರಮೇಶ್ ಹಾಗೂ ಲತಾ ದಂಪತಿಯ ಮಗ. ತಂದೆ ತಾಯಿ ಕೂಲಿ ಜೊತೆಗೆ, ವ್ಯವಸಾಯ ಮಾಡುತ್ತಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿರುವ ಗಿರೀಶ್ ವಿದ್ಯಾಭ್ಯಾಸದ ಜೊತೆಗೆ ಪರಿಸರ ಉಳಿಸುವ ಕೆಲಸಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದಾನೆ.

ಬಾಲ್ಯದಿಂದಲೂ ಪರಿಸರ ಸಂರಕ್ಷಣೆ ಮಾಡಬೇಕೆಂಬ ಸಂಕಲ್ಪ ಹೊಂದಿದ್ದು, ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾನೆ. ಮಗನ ಕೆಲಸಕ್ಕೆ ಪೋಷಕರು ಬೆನ್ನೆಲುಬಾಗಿ ನಿಂತಿದ್ದಾರೆ. ಕಾಲೇಜಿಗೆ ಬರುತ್ತಿದ್ದಂತೆ ತನ್ನ ಸ್ನೇಹಿತರೊಂದಿಗೆ ಸೇರಿ ಖಾಲಿ ಜಾಗದಲ್ಲಿ ಹೊಂಗೆ, ಬೇವು, ನೇರಳೆ, ಸಂಪಿಗೆ ಸೇರಿ ಉತ್ತಮ ಗಾಳಿ, ನೆರಳು ನೀಡುವ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾನೆ. ಮಳೆ ಕೊರತೆಯಾದರೆ ಬಿಂದಿಗೆಯಲ್ಲಿ ನೀರು ತಂದು ಗಿಡಗಳಿಗೆ ಹಾಕುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದ್ದಾನೆ.

ಹಾಸನ ನಗರದ ಆರ್.ಟಿ.ಓ. ಕಚೇರಿ, ಒಳಾಂಗಣ ಕ್ರೀಡಾಂಗಣ, ಸತ್ಯಮಂಗಲ ಕೆರೆ ಸುತ್ತಮುತ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಅನ್ನಿಬೆಸೆಂಟ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರ, ಹಾಸನದ ತಿರುಮನ ಹಳ್ಳಿಯ ಕೆರೆಯ ಭಾಗ, ಸೀಗೆ ಗುಡ್ಡ ಸೇರಿದಂತೆ ನಾನಾ ಕಡೆ ಗಿಡಗಳನ್ನು ನೆಟ್ಟಿದ್ದಾನೆ. ಇದರ ಜೊತೆ ಕಲ್ಯಾಣಿಗಳ ಸ್ವಚ್ಛತೆ, ಕೆರೆಗಳ ಹೂಳೆತ್ತುವುದು, ಭತ್ತ ಕಟಾವು ಮಾಡುವ ಮೂಲಕ ರೈತರಿಗೆ ಸಹಾಯಹಸ್ತ ಚಾಚಿದ್ದಾನೆ.

ನೆಟ್​ವರ್ಕ್​ 18 ಸಂಸ್ಥೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಮತ್ತು ಸಂಸ್ಥೆಗಳನ್ನು ಎಲ್ಲರಿಗೂ ಪರಿಚಯಿಸುವ, ಆ ಮೂಲಕ ಪರಿಸರದ ಉಳಿವಿಗಾಗಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ.
ಗಿಡ ನೆಡುತ್ತಿರುವ ಗಿರೀಶ್​ ಕೆ. ಆರ್​.


ನಂತರ ಎನ್.ಎಸ್.ಎಸ್. ಸೇರುವ ಮೂಲಕ ಪರಿಸರ ಉಳಿವಿಗಾಗಿ ಶ್ರಮಿಸುತ್ತಿದ್ದಾನೆ. ಈತನ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ಮೈಸೂರು ವಿಶ್ವವಿದ್ಯಾನಿಲಯದಿಂದ 2018 ಮತ್ತು 2019ನೇ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (NSS) ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ‌ ನೀಡಿ ಗೌರವಿಸಿದೆ. 2020 ರಲ್ಲಿ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾಗಿದ್ದ ವಜುಬಾಯಿ ವಾಲಾ ಸನ್ಮಾನಿಸಿ ಗೌರವಿಸಿದ್ದಾರೆ‌. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಏಕಲವ್ಯ ಮುಕ್ತದಳದ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದಡಿ‌ ನೂರಾರು ಗಿಡಗಳನ್ನು ನೆಡುತ್ತಿದ್ದಾನೆ.

ಜೀವ ಜಲ ಉಳಿಸಿ, ಜೀವ ಜಲ ಸಂರಕ್ಷಿಸಿ ಎಂಬ ಧ್ಯೇಯ ವಾಕ್ಯದಡಿಯಲ್ಲಿ  ಹಾಸನ ಜಿಲ್ಲೆಯಾದ್ಯಂತ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಹೂಳೆತ್ತುವ ಕಾರ್ಯ ಇನ್ನೂ ಮುಂದುವರೆಸಿದ್ದಾನೆ. ಸ್ವಾಮಿ ವಿವೇಕಾನಂದರ 156 ನೇ ವರ್ಷದ ಯುವ ಸಪ್ತಾಹದ ಅಂಗವಾಗಿ 450 ಕಿಲೋಮೀಟರ್ ಸೈಕಲ್ ಜಾಥಾ ನಡೆಸಿ ಪರಿಸರ ಸಂರಕ್ಷಣೆ, ಮಳೆ ನೀರಿನ ಕೊಯ್ಲು, ಕೆರೆ ಕಟ್ಟೆಗಳು ಬಲಪಡಿಸುವ ಕುರಿತು ಯುವಜನರೊಂದಿಗೆ ಸಂವಾದ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿದ್ದಾನೆ.ಹಾಸನದ ಅಧಿದೇವತೆ ಹಾಸನಾಂಬ ದೇವಾಲಯ ತೆರೆಯುವ ದಿನಗಳಂದು 24 ಗಂಟೆಗಳ ಕಾಲ ಸೇವೆಯನ್ನು ಸಲ್ಲಿಸುತ್ತಿದ್ದಾನೆ. ಕಡುಬಡತನದ ನಡುವೆಯೂ ಬಾಲ್ಯದಿಂದಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವುದು ನಿಜಕ್ಕೂ ಶ್ಲಾಘನೀಯ. ಒಂದು ಅಂದಾಜಿನ ಪ್ರಕಾರ ಇದುವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಗಿರೀಶ್​ ತನ್ನ ಒಡನಾಡಿಗಳ ಜತೆಗೂಡಿ ನೆಟ್ಟಿದ್ದಾನೆ ಎಂದರೆ ಗಿರೀಶ್​ಗಿರುವ ಪರಿಸರ ಕಾಳಜಿ ಎಷ್ಟೆಂದು ತಿಳಿಯುತ್ತದೆ.

ಗಿರೀಶ್​ ಕೇವಲ ಇಪ್ಪತ್ತು ವರ್ಷಕ್ಕೆ ಈ ಸಾಧನೆ ಮಾಡಿರುವುದು ಅನುಕರಣೀಯ. ಗಿರೀಶ್​ ರೀತಿಯಲ್ಲೇ ಯುವ ಸಮುದಾಯ ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಂಡರೆ ಮುಂದಿನ ಪೀಳಿಗೆ ಧನ್ಯವಾದ ಅರ್ಪಿಸುವುದರಲ್ಲಿ ಅನುಮಾನವಿಲ್ಲ.

ನೆಟ್​ವರ್ಕ್​ 18 ಸಂಸ್ಥೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಮತ್ತು ಸಂಸ್ಥೆಗಳನ್ನು ಎಲ್ಲರಿಗೂ ಪರಿಚಯಿಸುವ, ಆ ಮೂಲಕ ಪರಿಸರದ ಉಳಿವಿಗಾಗಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ. ಪ್ರತಿ ದಿನ ಇಂತಾ ಒಬ್ಬ ಸಾಧಕರನ್ನು ನಿಮ್ಮ ಮುಂದೆ ತರುವ ಪ್ರಯತ್ನ ಇದಾಗಿದೆ.
Published by:Sharath Sharma Kalagaru
First published: