ಪುತ್ತೂರು: ಕೊರೊನಾದ ಸಂಕಷ್ಟದ ಈ ಸಮಯದಲ್ಲಿ ಉದ್ಯೋಗ ದೊರಕಿಸಿಕೊಳ್ಳುವುದು ಯುವಕರ ಪಾಲಿನ ಒಂದು ರೀತಿಯ ಛಾಲೆಂಜ್ ಆಗಿದೆ. ಹೀಗೆ ಪಡೆದ ಉದ್ಯೋಗದಿಂದ ಜೀವನ ನಿರ್ವಹಣೆ ಹೇಗೆ ಎನ್ನುವ ಪ್ರಶ್ನೆಯೂ ಇದರ ಜೊತೆಗೇ ಏಳುತ್ತಿವೆ. ಈ ಎಲ್ಲಾ ಜಂಜಾಟಗಳಿಂದ ಮುಕ್ತವಾಗಬೇಕಾದರೆ ಸ್ವಂತ ಉದ್ಯೋಗದಿಂದಲೇ ಸಾಧ್ಯ ಎನ್ನುವುದನ್ನು ಮನಗಂಡ ದಕ್ಷಿಣ ಕನ್ನಡದ ಯುವಕರಿಬ್ಬರು ಹಳದಿ ಮೊಟ್ಟೆಗಳನ್ನಿಟ್ಟು ಕೋಳಿಗಳನ್ನು ಸಾಕಿ ಮೊಟ್ಟೆ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.
ಕೊರೊನಾ ಲಾಕ್ ಡೌನ್ ಹಾಗೂ ಇತರ ಹಲವು ಸಮಸ್ಯೆಗಳಿಂದಾಗಿ ಇಂದು ಹಲವ ಉದ್ಯೋಗಗಳಿಗೆ ಕುತ್ತು ಬಂದಿದೆ. ಇನ್ನು ವಿದ್ಯಾಭ್ಯಾಸ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಳ್ಳುವುದು ಒಂದು ಛಾಲೆಂಜ್ ಆದರೆ , ಪಡೆದ ಉದ್ಯೋಗದಿಂದ ಜೀವನ ನಿರ್ವಹಣೆ ಸಾಧ್ಯವೇ ಎನ್ನುವ ಗೊಂದಲವೂ ಕಾಡತೊಡಗಿದೆ. ಇನ್ನೊಬ್ಬರ ಕೈ ಕೆಳಗೆ ದುಡಿಯುವ ಬದಲು ತಾವೇ ಏಕೆ ಒಂದು ಸಣ್ಣ ಉದ್ಯಮವನ್ನು ಆರಂಭಿಸಬಾರದು ಎಂದು ಹೊರಟ ಯುವಕರ ಸಾಲಿಗೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಇಬ್ಬರು ಯುವಕರೂ ಸೇರುತ್ತಾರೆ. ಅರಿಯಡ್ಕ ಗ್ರಾಮದ ಚಂದ್ರಕಾಂತ್ ಮತ್ತು ವಿಲ್ಸನ್ ವಿಜಯ್ ಎನ್ನುವ ಸ್ನೇಹಿತರು ವಿಭಿನ್ನ ರೀತಿಯ ಚಿಂತನೆಯ ಮೂಲಕ ಕೋಳಿ ಮೊಟ್ಟೆಗಳ ಸಾಕಾಣಿಕೆಯನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: ಬೆಳಗಾಗೆದ್ದು ಕಾಫಿ ಕುಡೀತೀರಾ? ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ ಏನಾಗುತ್ತೆ ಗೊತ್ತಾ?
ಅಂದಹಾಗೆ ಮಾರುಕಟ್ಟೆಯಲ್ಲಿ ಅನಾಯಾಸವಾಗಿ ಸಿಗುವ ಮೊಟ್ಟೆಗಳಿಗಿಂತ ಕೊಂಚ ಭಿನ್ನ ಮೊಟ್ಟೆಗಳು. ಊರ ಕೋಳಿ ಇಡುವ ಕಂದು ಬಣ್ಣದ ಮೊಟ್ಟೆಗಳನ್ನು ಹೋಲುವ ಈ ಮೊಟ್ಟೆ ಅತ್ಯಂತ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಉದ್ಯಮ ಆರಂಭಿಸುವ ಮೊದಲು ಕೊಂಚ ಭಿನ್ನವಾದುದನ್ನೇ ಮಾಡಬೇಕು ಎಂದು ಫೀಲ್ಡ್ ಗಿಳಿದಿದ್ದ ಈ ಯುವಕರು ಬ್ರೌನ್ ಬಣ್ಣದ ಕೋಳಿ ಮೊಟ್ಟೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದನ್ನು ಮನಗಂಡಿದ್ದಾರೆ. ಕೇರಳದಿಂದ ಈ ಕೋಳಿ ಮರಿಗಳನ್ನು ಪಡೆದು ಪುತ್ತೂರಿನ ಅರಿಯಡ್ಕ ಸಮೀಪದ ಮಡ್ಯಂಗಳ ಎಂಬಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಬ್ರೌನ್ ಕೋಳಿ ಮೊಟ್ಟೆಗಳ ಉತ್ಪಾದನೆಯನ್ನು ಆರಂಭಿಸಿದ್ದಾರೆ. ಮೊದಲಿಗೆ ಇನ್ನೂರು ಕೋಳಿಗಳೊಂದಿಗೆ ಆರಂಭಿಸಿದ ಈ ಯುವಕರು ಇದೀಗ ಕೋಳಿಗಳ ಸಂಖ್ಯೆಯನ್ನು 1200 ರ ವರೆಗೆ ಏರಿಸಿದ್ದಾರೆ.
ಈ ಕೋಳಿಗಳ ವಿಶೇಷವೆಂದರೆ ಈ ಕೋಳಿಗಳು ವರ್ಷವಿಡೀ ಮೊಟ್ಟೆ ಇಡುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ 10 ರೂಪಾಯಿಗಳ ಬೆಲೆಯಿದೆ. ಪ್ರತೀ ಕೋಳಿ ಮರಿಗಳನ್ನು 350 ರೂಪಾಯಿಗಳಂತೆ ಖರೀದಿಸಲಾಗಿದ್ದು, 4 ತಿಂಗಳ ಸಾಕಾಣಿಕೆಯ ಬಳಿಕ ಈ ಕೋಳಿಗಳು ಮೊಟ್ಟೆ ಇಡಲು ಆರಂಭಿಸುತ್ತದೆ. ಕೇವಲ ಕೋಳಿ ಮೊಟ್ಟೆಗಳನ್ನಲ್ಲದೆ, ಇರುವ ಜಾಗದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ. ಥೈವಾನ್ ಪಪ್ಪಾಯ, ಪೈನಾಪಲ್, ವಿಶಿಷ್ಟ ರೀತಿಯಲ್ಲಿ ಚಪ್ಪರ ನಿರ್ಮಿಸಿ ಬೆಳೆಸುತ್ತಿರುವ ತೊಂಡೆ ಕಾಯಿ ಹೀಗೆ ಹಲವು ರೀತಿಯ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೃಷಿ ಚಟುವಟಿಕೆಯತ್ತ ವಾಲುತ್ತಿದ್ದು, ಇದೇ ಹಾದಿಯಲ್ಲಿ ಪುತ್ತೂರಿನ ಈ ಯುವಕರೂ ನಡೆಯುತ್ತಿದ್ದಾರೆ.
ಉದ್ಯೋಗದ ನಿರೀಕ್ಷೆಯಲ್ಲಿ ತಮ್ಮ ಸಮಯವನ್ನು ಹಾಳು ಮಾಡುವ ಬದಲು ಪುತ್ತೂರಿನ ಈ ಯುವಕರಂತೆ ಸ್ವಾವಲಂಭಿ ಜೀವನ ಸಾಗಿಸುವತ್ತ ಯುವಕರು ಚಿತ್ತ ಹರಿಸಬೇಕಿದೆ. ಅತ್ಯಂತ ಕಡಿಮೆ ಬಂಡವಾಳವನ್ನು ತೊಡಗಿಸಿಕೊಂಡು ಈ ಯುವಕರು ಆರಂಭಿಸಿದ ಈ ಕೋಳಿ ಮೊಟ್ಟೆಗಳನ್ನು ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಪರಿಚಯಿಸುವ ಮೂಲಕ ಯಶಸ್ವಿಯ ಮೆಟ್ಟಿಲೇರುತ್ತಿದ್ದಾರೆ.
(ವರದಿ: ಅಜಿತ್, ಪುತ್ತೂರು) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ