ಅಗ್ರಹಾರ ದಾಸರಹಳ್ಳಿ: ಮನೆ ಕಳೆದುಕೊಂಡವರಿಂದ ಧರಣಿ; ಇಂದು ಕೋರ್ಟ್ ಆದೇಶ

ಸ್ಲಂ ಬೋರ್ಡ್ ವತಿಯಿಂದ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿ ಬಳಿ ನಿರ್ಮಿಸಲಾಗಿದ್ದ 30 ಮನೆಗಳ ಪೈಕಿ 17 ಮನೆಗಳಲ್ಲಿ ಅನಧಿಕೃತವಾಗಿ ವಾಸವಿದ್ದ ಕುಟುಂಬಗಳನ್ನ ನಿನ್ನೆ ತೆರವುಗೊಳಿಸಲಾಗಿತ್ತು. ಏಕಾಏಕಿ ತೆಗೆದುಕೊಂಡ ಈ ಕ್ರಮ ವಿರೋಧಿಸಿ ಈ ಕುಟುಂಬಗಳು ಮನೆಯ ಹೊರಗೆಯೇ ಧರಣಿ ನಡೆಸಿದ್ದಾರೆ.

ಅಗ್ರಹಾರ ದಾಸರಹಳ್ಳಿಯಲ್ಲಿ ಮನೆಯಿಂದ ಹೊರಹಾಕಲ್ಪಟ್ಟ ಕುಟುಂಬಗಳು

ಅಗ್ರಹಾರ ದಾಸರಹಳ್ಳಿಯಲ್ಲಿ ಮನೆಯಿಂದ ಹೊರಹಾಕಲ್ಪಟ್ಟ ಕುಟುಂಬಗಳು

  • Share this:
ಬೆಂಗಳೂರು(ಫೆ. 12): ಅಗ್ರಹಾರ ದಾಸರಹಳ್ಳಿ ಬಳಿ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ನಿರ್ಮಿಸಿರುವ ಮನೆಗಳ ಪೈಕಿ 17 ಮನೆಗಳನ್ನ ಅಧಿಕಾರಿಗಳು ತೆರವುಗೊಳಿಸಿದ್ದರು. ಏಕಾಏಕಿ ಮನೆಗಳಿಂದ ಹೊರಹಾಕಲ್ಪಟ್ಟ 17 ಕುಟುಂಬಗಳು ನಿನ್ನೆ ಇಡೀ ರಾತ್ರಿ ತಮ್ಮ ಮನೆಗಳ ಎದುರು ಧರಣಿ ನಡೆಸಿದರು. ಸಣ್ಣ ಪುಟ್ಟ ಮಕ್ಕಳೂ ಚಳಿಯಲ್ಲೂ ಹೊರಗೆ ಕೂತರು. ಮನೆ ತೆರವು ಕಾರ್ಯಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದ್ದರೂ ಅಧಿಕಾರಿಗಳು ಈ ಜನರಿಗೆ ಒಂದು ದಿನದ ಮಟ್ಟಿಗಾದರೂ ಮನೆಯೊಳಗೆ ಇರಲು ಅವಕಾಶ ಮಾಡಿಕೊಡಲಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಇಂದೂ ಕೂಡ ಈ ಕುಟುಂಬಗಳು ತಮ್ಮ ಮನೆಗಳ ಹೊರಗೆ ಧರಣಿ ಮುಂದುವರಿಸುತ್ತಿವೆ. ಏಕಾಏಕಿ ಮನೆಯಿಂದ ಹೊರಹಾಕಿದರೆ ಎಲ್ಲಿಗೆ ಹೋಗುವುದು? ನ್ಯಾಯ ಸಿಗುವವರೆಗೂ ನಾವು ಸ್ಥಳ ಬಿಟ್ಟು ಹೋಗಲ್ಲ ಎಂದು ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಇಂದು ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಇದ್ದು, ಮಧ್ಯಾಹ್ನದ ವೇಳೆ ತೀರ್ಪು ಬರುವ ಸಾಧ್ಯತೆ ಇದೆ.

ಏನಿದು ಪ್ರಕರಣ?

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಲಂ ಬೋರ್ಡ್ ವತಿಯಿಂದ ನಿರ್ಗತಿಕ ಕುಟುಂಬಗಳಿಗೆ ಅಗ್ರಹಾರ ದಾಸರಹಳ್ಳಿ ಬಳಿ 30 ಮನೆಗಳನ್ನ ನಿರ್ಮಿಸಿಕೊಡಲಾಗಿತ್ತು. ನಿಜವಾದ ಫಲಾನುಭವಿಗಳನ್ನ ವಂಚಿಸಿ ಕೆಲವರು ಅನಧಿಕೃತವಾಗಿ ಬಂದು ಸೇರಿಕೊಂಡಿದ್ದಾರೆ ಎಂಬುದು ಸರ್ಕಾರದ ವಾದ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇಲ್ಲದವರು ಹಾಗೂ ಈಗಾಗಲೇ ಮನೆ ಇದ್ದವರೂ ಬಂದು ಇಲ್ಲಿ ಸೇರಿಕೊಂಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ನ್ಯಾಯಾಲಯ ಕೂಡ ಅನಧಿಕೃತ ಫಲಾನುಭವಿಗಳನ್ನ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆ ಆದೇಶದ ಮೇರೆಗೆ ನಿನ್ನೆ 17 ಮನೆಗಳಿಗೆ ನೋಟೀಸ್ ನೀಡಿ ತತ್​ಕ್ಷಣವೇ ತೆರವುಗೊಳಿಸಲಾಗಿತ್ತು.

ಇದನ್ನೂ ಓದಿ: ದೇಶದಲ್ಲಿ ಲಾಕ್‍ಡೌನ್ ತೆರವಾದರೂ ಕೊಡಗಿನ ಟಿಬೆಟಿಯನ್ ಕ್ಯಾಂಪಿಗೆ ಮಾತ್ರ ಪ್ರವೇಶ ನಿಷಿದ್ಧ

ನೋಟೀಸ್ ನೀಡಿ ಒಂದೇ ದಿನದಲ್ಲಿ ತೆರವುಗೊಳಿಸುವುದು ಎಷ್ಟು ಸರಿ. ನೋಟೀಸ್ ನೀಡಿ 14 ದಿನಗಳವರೆಗಾದರೂ ಕಾಲಾವಕಾಶ ಕೊಡದೇ ಏಕಾಏಕಿ ಮನೆಯಿಂದ ಹೊರಹಾಕಲಾಗಿದೆ. ತಾವೆಲ್ಲಾ ಕಾಂಗ್ರೆಸ್​ಗೆ ಮತ ಹಾಕಿದ್ದರಿಂದ ಆ ದ್ವೇಷದಲ್ಲಿ ಹೀಗೆಲ್ಲಾ ಮಾಡಲಾಗುತ್ತಿದೆ ಎಂಬುದು ಈ 17 ಕುಟುಂಬಗಳ ಅಳಲು. ನಿನ್ನೆ ತೆರವು ಕಾರ್ಯಾಚರಣೆ ನಡೆಯುತ್ತಿರುವ ವೇಳೆ ಒಬ್ಬ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಪೊಲೀಸರು ಅದನ್ನು ತಡೆದ ಬಳಿಕ ಆಕೆ ವಿಷ ಸೇವಿಸಿಯೂ ಸಾಯಲು ಹೊರಟಿದ್ದಳು. ಬಳಿಕ ಪೊಲೀಸರು ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವರದಿ: ಗಂಗಾಧರ ವಾಗಟ
Published by:Vijayasarthy SN
First published: