ಮೈಸೂರು: ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಈಗ ಪಬ್ಲಿಕ್ v/s ಪೊಲೀಸ್ ಎಂಬ ವಾತಾವರಣ ಸೃಷ್ಟಿಯಾಗಿದೆ. ಇಂದು ಬೆಳಗ್ಗೆಯೇ ಪೊಲೀಸರ ವರ್ತನೆಗೆ ಖಂಡಿಸಿ ನಾಗರಿಕರು ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದರು. ಪೊಲೀಸರ ವಿರುದ್ದವೇ ಘೋಷಣೆ ಕೂಗಿ ಧಿಕ್ಕಾರ ಹೇಳಿದ ಸಾರ್ವಜನಿಕರು, ಈ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಟ್ರಾಫಿಕ್ ಪೊಲೀಸರ ನಡೆ ವಿರುದ್ದ ಭುಗಿಲೆದ್ದ ಆಕ್ರೋಶಕ್ಕೆ ಮೈಸೂರು ಹಿನಕಲ್ ಜಂಕ್ಷನ್ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಈ ನಡುವೆ ನಿನ್ನೆ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ ದೇವರಾಜ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಿನಲ್ಲಿ ನೆರವೇರಿತು.
ಮೈಸೂರಿನಲ್ಲಿ ಬೈಕ್ ತಪಾಸಣೆ ವೇಳೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆಗೆ ರಾತ್ರೋರಾತ್ರಿ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರಿಂದ ತಪ್ಪೇ ನಡೆದಿಲ್ಲ ಎಂದು ವಾದಿಸುತ್ತಿರುವ ಪೊಲೀಸ್ ಇಲಾಖೆ, ಸಹಸವಾರನಿಂದ ಸುರೇಶ್ರಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿಸಿದೆ. ಆ ಹೇಳಿಕೆಯಲ್ಲಿ ಪೊಲೀಸರು ನಮ್ಮನ್ನು ತಡೆಯಲಿಲ್ಲ ದೇವರಾಜ್ ಅವರೇ ಪೊಲೀಸರನ್ನು ನೋಡಿ ಬೈಕ್ ಸ್ಲೋ ಮಾಡಿದರು. ಆಗ ಹಿಂಬದಿಯಿಂದ ಬಂದ ಟಿಪ್ಪರ್ ನಮಗೆ ಡಿಕ್ಕಿಯಾಗಿತ್ತು. ನಾನು ಕೆಳಗೆ ಬಿದ್ದಿದ್ದು ಮಾತ್ರ ನೆನಪಿದೆ, ಆಮೇಲೆ ನೋಡಿದ್ರೆ ಅಪಘಾತ ಆಗಿ ಜನ ಸೇರಿದ್ರು. ಘಟನೆಗೆ ಪೊಲೀಸರು ಕಾರಣವಲ್ಲ. ಪೊಲೀಸರು ನಮ್ಮನ್ನ ಸ್ಪರ್ಶಿಸಲೇ ಇಲ್ಲ ಅಂತ ಸುರೇಶ್ ಎಂಬ ಸಹ ಸವಾರ ವಿಡಿಯೋ ಹೇಳಿಕೆ ನೀಡಿದ್ದಾರೆ. ಇದು ಘಟನೆಗೆ ಟ್ವಿಸ್ಟ್ ನೀಡಿದ್ದು ಈ ಹೇಳಿಕೆ ಮೇಲೂ ಒತ್ತಡ ಹೇರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಘಟನೆ ಸಂಬಂಧ 13 ಮಂದಿಯ ಬಂಧನ ಮಾಡಿದ್ದು, ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 15 ಜನರಲ್ಲಿ 13 ಮಂದಿಯ ಬಂಧಿಸಿರುವ ವಿಜಯನಗರ ಪೊಲೀಸರು ಉಳಿದ ಇನ್ನು 2 ಮಂದಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿನ ವಿಡಿಯೋ ದೃಶ್ಯಾವಳಿ ಆಧರಿಸಿ ಕ್ರಮ ಕೈಗೊಳ್ಳಲಾಗಿದ್ದು, ಹಲ್ಲೆ ಮಾಡಿರುವವರ ಗುರುತು ಪತ್ತೆ ಮಾಡುತ್ತಿರುವ ಪೊಲೀಸರು ಘಟನೆ ಸಂಬಂಧ 3 ಕೇಸ್ ದಾಖಲಿಸಿದ್ದಾರೆ. ವಾಹನ ಜಖಂ ಒಂದು ಕೇಸ್, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ದೇವರಾಜ್ ಕುಟುಂಬದಿಂದ ಒಂದು ಕೇಸ್ ದಾಖಲಾಗಿದೆ. ಟಿಪ್ಪರ್ ಚಾಲಕ ಹಾಗೂ ಕ್ಲೀನರ್ ಸಹ ಪೊಲೀಸರ ವಶದಲ್ಲಿದ್ದು, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಮೈಸೂರು ಕಾನೂನು ವಿಭಾಗದ ಡಿಸಿಪಿ ಪ್ರಕಾಶ್ಗೌಡ ಹೇಳಿದ್ದಾರೆ.
ಇದನ್ನು ಓದಿ: ಸಿದ್ದರಾಮಯ್ಯ ಅವರು ರೇಪ್ ಪದ ಬಳಸಬಾರದು: ಬಾಲಚಂದ್ರ ಜಾರಕಿಹೊಳಿ
ನಿನ್ನೆಯ ಘಟನೆಯಲ್ಲಿ ನಮ್ಮ ಇಬ್ಬರು ಪೊಲೀಸರ ಮೇಲೆ ಹಲ್ಲೆಯಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ. ವಾಹನ ತಪಾಸಣೆ ಮಾಡುವ ಜಾಗದಿಂದ ಅವರು ದೂರದಲ್ಲೇ ಇದ್ದರೂ, ಹಿಂಬದಿಯಿಂದ ಬಂದ ಟಿಪ್ಪರ್ನಿಂದ ಘಟನೆ ಜರುಗಿದೆ. ಪೊಲೀಸರು ತಮ್ಮ ಕರ್ತವ್ಯವನ್ನಷ್ಟೆ ನಿರ್ವಹಿಸಿದ್ದಾರೆ ಸರ್ಕಾರ ಸೂಚಿಸಿದ ದಂಡವನ್ನಷ್ಟೆ ನಾವು ವಸೂಲಿ ಮಾಡುತ್ತಿದ್ದೇವೆ. ಜನರಿಗೆ ಇದರಿಂದ ತೊಂದರೆ ಆಗುತ್ತೆ ಅಂದ್ರೆ ಅದನ್ನ ಬದಲಾಯಿಸೋಣ. ಕಾನೂನು ಪಾಲನೆ ಎಲ್ಲರ ಜವಾಬ್ದಾರಿ. ಅದನ್ನ ಜನರಿಗೆ ತೊಂದರೆಯಾಗದಂತೆ ಜಾರಿಗೆ ತರೋದೆ ನಮ್ಮ ಕೆಲಸ. ನಿನ್ನೆ ಘಟನೆ ನಂತರ ಹಲವು ದೂರುಗಳು ಬಂದಿದೆ. ಆ ದೂರುಗಳನ್ನ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಇಂದು ಎಲ್ಲ ಸಿಬ್ಬಂದಿಗಳ ಸಭೆ ಕರೆದು ಮಾಹಿತಿ ಪಡೆಯುತ್ತೇವೆ. ಸಿಬ್ಬಂದಿ ಸಮಸ್ಯೆ ಹಾಗೂ ಜನರ ಸಮಸ್ಯೆ ಎರಡನ್ನು ಆಲಿಸಿ ಪರಿಹಾರ ಹುಡುಕುತ್ತೇವೆ. ಹಾಗಂತ ನಾನು ವಾಹನ ತಪಾಸಣೆ ನಿಲ್ಲಿಸೋಕೆ ಆಗೋಲ್ಲ ಅಂತ ಮೈಸೂರು ಟ್ರಾಫಿಕ್ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.
ಈ ನಡುವೆ ಮೃತ ದೇವರಾಜ್ ಅಂತ್ಯಕ್ರಿಯೆ ನೆರವೇರಿದ್ದು, ಮೃತರ ಕುಟುಂಬದಲ್ಲಿ ನೀರವಮೌನ ಆವರಿಸಿದೆ. ನಿನ್ನೆ ನನ್ನ ಭಾಮೈದ ಅಮಾಯಕನಾಗಿ ಪ್ರಾಣ ಕೊಟ್ಟಿದ್ದಾನೆ. ಮನೆಗೆ ಆಧಾರವಾಗಿದ್ದ ಯಜಮಾನನೆ ಹೋಗಿದ್ದಾನೆ ಅಂತ ಭಾಮೈದುನನ್ನು ನೆನೆದು ಕಣ್ಣೀರಿಟ್ಟ ದೇವರಾಜ್ ಭಾವ ಉಮೇಶ್, ದೇವರಾಜನನ್ನು ನೆನಪಿಸಿಕೊಂಡರೆ ಬೇಜಾರಾಗಿತ್ತೆ. ಅವರ ಜೀವನವೇ ಮಗಿದು ಹೋಯಿತು. ದೇವರಾಜ್ ಹಣಕ್ಕಿಂತ ಜನರನ್ನ ಸಂಪಾದನೆ ಮಾಡಿದ್ದ. ಈಗ ಜನರೆಲ್ಲ ಅವನನ್ನ ಕಳೆದುಕೊಂಡರು. ಕಾನೂನು ಹಿಡಿತದಲ್ಲಿಲ್ಲ. ಅದು ದೊಡ್ಡವರ ಕೈಯಲ್ಲಿದೆ. ಈಗ ಈ ಸಾವಿನ ಹೊಣೆ ಯಾರು ಎಂದು ಘಟನೆ ನೆನೆದು ಭಾವುಕರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ