• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • SHOCKING: ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಒಂದೇ ಗ್ರಾಮದ 128 ಮಂದಿಗೆ ಕೊರೋನಾ ಪಾಸಿಟಿವ್

SHOCKING: ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಒಂದೇ ಗ್ರಾಮದ 128 ಮಂದಿಗೆ ಕೊರೋನಾ ಪಾಸಿಟಿವ್

ಇಂದಿರಾನಗರ

ಇಂದಿರಾನಗರ

ಅಂತ್ಯಕ್ರಿಯೆಯಲ್ಲಿ ಹಳ್ಳಿಯ ಜನರೆಲ್ಲಾ ಭಾಗಿಯಾದ ಬಳಿಕ ಮೃತ ವ್ಯಕ್ತಿಗೆ ಕೊರೋನಾ ಇದ್ದಿದ್ದು ತಿಳಿದು ಬಂದಿದೆ. ಗೊತ್ತಿಲ್ಲದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದ 128 ಮಂದಿಯಲ್ಲಿ ಈಗ ಸೋಂಕು ಕಾಣಿಸಿಕೊಂಡಿದೆ.

  • Share this:

ಚಿಕ್ಕಮಗಳೂರು : ಅಂತ್ಯಸಂಸ್ಕಾರಗಳಲ್ಲಿ ಹೆಚ್ಚಿನ ಜನ ಸೇರಬಾರದು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದರೂ, ಇದನ್ನು ಉಲ್ಲಂಘಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಜನ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಒಂದೇ ಗ್ರಾಮದ 128 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. . ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಇಂದಿರಾನಗರದಲ್ಲಿ ಈ ಘಟನೆ ನಡೆದಿದ್ದು, 600 ಜನರುಳ್ಳ ಗ್ರಾಮದಲ್ಲಿ 128 ಜನರಿಗೆ ಪಾಸಿಟಿವ್ ಬಂದಿದೆ. ಇಲ್ಲಿನ ಕೇಸ್ ಗ್ರಾಮವಷ್ಟೆ ಅಲ್ಲ ಜಿಲ್ಲಾಡಳಿತವೇ ಶಾಕ್ ಆಗಿದೆ. ಇಷ್ಟೊಂದು ಕೇಸ್ ಬರಲು ಕಾರಣ ಅದೊಂದು ಅಂತ್ಯಸಂಸ್ಕಾರ.


ಗ್ರಾಮದ 60 ವರ್ಷದ ಸಂಜೀವ್ ಅನ್ನೋರು 3 ದಿನಗಳ ಹಿಂದೆ ಸಾವನ್ನಪ್ಪಿದ್ರು. ಮೇ 11ರಂದು ಕೊರೋನಾ ಪರೀಕ್ಷೆ ಮಾಡಿಸಿದ್ದ ಸಂಜೀವ್ ರಿಪೋರ್ಟ್​​ ಮೇ 14ರಂದು ಬಂದಿತ್ತು. ಅಷ್ಟರಲ್ಲಾಗಲೇ ಆ ವ್ಯಕ್ತಿ ಸಾವನ್ನಪ್ಪಿದ್ರು. ಖಾಸಗಿ ಆಸ್ಪತ್ರೆಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂದಿದ್ರಂತೆ. ಹೀಗಾಗಿ ಆ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನರು ಭಾಗವಹಿಸಿದ್ರು. ಅಂತ್ಯ ಸಂಸ್ಕಾರ ಮಾಡಿ ಮನೆಗೆ ಬಂದಾಗ ರಿರ್ಪೋಟ್ ನೋಡಿ ಎಲ್ಲರಿಗೂ ಶಾಕ್. ಆ ಬಳಿಕ 200ಕ್ಕೂ ಹೆಚ್ಚು ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು, ಅದರಲ್ಲಿ 128 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.


ಹೀಗೆ ಊರಿಗೇ ಊರೇ ಕೊರೋನಾ ಸೋಂಕಿಗೆ ತುತ್ತಾಗಿರೋದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅಷ್ಟಕ್ಕೂ ಕೇವಲ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನರಿಗೆ ಮಾತ್ರ ಸೋಂಕು ತಗುಲಿದ್ಯಾ ಅಥವಾ ಬೇರೆ ಕಡೆಯಿಂದಲೂ ಸೋಂಕು ತಗುಲಿರುವ ಸಾಧ್ಯತೆ ಇದ್ಯಾ ಅನ್ನೋದರ ಕುರಿತು ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಯಾಕಂದ್ರೆ, ಈ ಭಾಗದಲ್ಲಿ ಸಾಕಷ್ಟು ಹೋಂ ಸ್ಟೇ, ರೆಸಾರ್ಟ್‍ಗಳಿವೆ. ಜನ ಅಲ್ಲಿಗೆ ಕೆಲಸಕ್ಕೆ ಹೋಗ್ತಾರೆ. ಅಲ್ಲಿಂದಲೂ ಬಂದಿರಬಹುದು ಎಂಬ ಮಾತುಗಳು ಕೇಳಿ ಬರ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಎಸಿ ನಾಗರಾಜ್, ತಹಶೀಲ್ದಾರ್ ಕಾಂತರಾಜ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.


ಈಗಾಗಲೇ ಗ್ರಾಮಸ್ಥರಿಗೆ ಪಡಿತರ ನೀಡಲಾಗಿದೆ. ಯಾರೂ ಮನೆಯಿಂದ ಹೊರಬರಬೇಡಿ. ನಿಮಗೆ ಬೇಕಾದ ಸೌಲಭ್ಯ ಒದಗಿಸುತ್ತೇವೆಂದು ಮನವಿ ಮಾಡಿದ್ದಾರೆ. ಒಟ್ಟಾರೆ, ಈ ಗ್ರಾಮದಲ್ಲಿ 150 ಕುಟುಂಬಗಳಿದ್ದು 660ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಸದ್ಯ 128 ಮಂದಿಯ ವರದಿಯಷ್ಟೇ ಜಿಲ್ಲಾಡಳಿತದ ಕೈ ತಲುಪಿದ್ದು ಉಳಿದವರ ವರದಿ ಬರಬೇಕಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನಾದರೂ ಜನ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸದೆ ಪಾಲಿಸುವಂತಾಗಬೇಕಿದೆ. ಇಲ್ಲವಾದರೆ ತಮಗೂ ತಮ್ಮ ಮನೆಯವರಿಗೂ ಅದರಿಂದ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

Published by:Kavya V
First published: