ಚಾಮರಾಜನಗರ (ಜುಲೈ 3) ಬೆಳೆ ಹಾಳು ಮಾಡುತ್ತವೆ ಎಂದು ನೀರಿಗೆ ವಿಷ ಬೆರೆಸಿ 12 ಹಸುಗಳನ್ನು ಕೊಂದಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹುತ್ತೂರು ಗ್ರಾಮದಲ್ಲಿ ನಡೆದಿದೆ. ವಿಷ ಬೆರೆಸಿದ ನೀರು ಕುಡಿದು 12 ಹಸುಗಳು ಸತ್ತರೆ, 50ಕ್ಕೂ ಹೆಚ್ಚು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ.
ಹುತ್ತೂರಿನ ಸುತ್ತಮುತ್ತ ಇರುವ ತೋಟಗಳಿಗೆ ಹಸುಗಳು ನುಗ್ಗಿ ಬೆಳೆ ಮೇಯ್ದು ಹಾಳು ಮಾಡುತ್ತವೆ ಎಂದು ಹಸುಗಳನ್ನೇ ಕೊಲ್ಲಲು ಕೆಲವು ತೋಟದ ಮಾಲೀಕರು ಯೋಚಿಸಿ ಗ್ರಾಮದ ಹೊರವಲಯದಲ್ಲಿನ ಹಳ್ಳವೊಂದರಲ್ಲಿ ನಿಂತಿದ್ದ ನೀರಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜಮೀನುಗಳಿಗೆ ಮೇಯಲು ಹೋಗಿದ್ದ ಹಸುಗಳು ಎಂದಿನಂತೆ ಸಂಜೆ ಗ್ರಾಮಕ್ಕೆ ವಾಪಸ್ ಬರುವಾಗ ಹಳ್ಳದಲ್ಲಿನ ನೀರು ಕುಡಿದಿವೆ. ನಂತರ ಮನೆಗಳಿಗೆ ಬರುವಷ್ಟರಲ್ಲಿ ದಾರಿ ಮಧ್ಯದಲ್ಲೇ 12ಕ್ಕೂ ಹೆಚ್ಚು ಹಸುಗಳು ಕುಸಿದುಬಿದ್ದು ಸಾವನ್ನಪ್ಪಿವೆ. ಹಲವಾರು ಹಸುಗಳು ಅಸ್ವಸ್ಥಗೊಂಡಿವೆ. ಸ್ಥಳಕ್ಕೆ ಒಡೆಯರಪಾಳ್ಯದ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡತೊಡಗಿದ್ದಾರೆ. ಆದರೆ ಬಹುತೇಕ ಹಸುಗಳು ಬದುಕುಳಿಯುವುದು ಕಷ್ಟ ಎನ್ನಲಾಗಿದೆ.
ವಿಷ ಬೆರೆಸಿದ ನೀರು ಕುಡಿದಿರುವುದರಿಂದಲೇ ಹಸುಗಳು ಸಾವನ್ನಪ್ಪಿವೆ ಎಂದು ರೈತರು ಆರೋಪಿಸಿದ್ದಾರೆ. ಹಸುಗಳ ಸಾವಿಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನು ಓದಿ: ಬೀದಿಯಲ್ಲೇ ಪ್ರಾಣಬಿಟ್ಟ ಕೊರೋನಾ ಸೋಂಕಿತ; 3 ಗಂಟೆ ರಸ್ತೆಬದಿಯಲ್ಲಿ ಮೃತದೇಹ ಮಳೆಯಲ್ಲಿ ನೆನೆಯುತ್ತಿದ್ದರೂ ತಲೆ ಹಾಕದ ಅಧಿಕಾರಿಗಳು
ಜೀವನೋಪಾಯಕ್ಕಾಗಿ ಹಸುಗಳನ್ನೇ ನಂಬಿಕೊಂಡಿದ್ದ ರೈತರು ಈ ಘಟನೆಯಿಂದ ದಿಕ್ಕು ತೋಚದಂತಾಗಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ