ಮೈಸೂರು; ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 11 ವರ್ಷ ಕಳೆದಿದೆ. ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಡಾ.ವಿಷ್ಣು ಪ್ರತಿಷ್ಠಾನದಲ್ಲಿ ನಟ ವಿಷ್ಣುವರ್ಧನ್ ಅವರ 11 ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಹಾಲಾಳು ಗ್ರಾಮದಲ್ಲಿರುವ ವಿಷ್ಣು ಸ್ಮಾರಕ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ, ಸ್ಮಾರಕ ಸ್ಥಳದಲ್ಲಿದ್ದ ವಿಷ್ಣು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಪುಣ್ಯಸ್ಮರಣೆ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಭಾಗಿಯಾದ ಅಪಾರ ಸಂಖ್ಯೆ ಅಭಿಮಾನಿಗಳು, ವಿಷ್ಣುವರ್ಧನ್ ನೆನಪಿನೊಂದಿಗೆ ಸ್ಮಾರಕದ ಬಳಿ ತಮ್ಮ ಅಭಿಮಾನ ಪ್ರದರ್ಶಿಸಿದರು.
ಇದೇ ವೇಳೆ ಮಾತನಾಡಿದ ವಿಷ್ಣುವರ್ಧನ್ ಪುತ್ರಿ ಕೀರ್ತಿ ಅವರು, ಸಿಂಹ ಯಾವತ್ತಿದ್ದರೂ ಸಿಂಹವೇ, ತಂದೆ ಸಿಂಹದಂತೆ ಇದ್ದವರು. ಅವರು ಯಾವಾಗಲೂ ಸಿಂಹದಂತೆ ಇರ್ತಾರೆ. ನಾಯಿಗಳು ಬೊಗಳಿದ ತಕ್ಷಣ ದೇವಲೋಕ ಹಾಳಾಗೋಲ್ಲ ಅನ್ನೋ ಮೂಲಕ ತಂದೆಯ ಪುತ್ಥಳಿ ಧ್ವಂಸಗೊಳಿಸಿದವರಿಗೆ ಖಡಕ್ ತಿರುಗೇಟು ನೀಡಿದರು.
ತಂದೆಯ ಪುತ್ಥಳಿ ಧ್ವಂಸ ಮಾಡಿದವರಿಂದ ತಂದೆಯ ಹೆಸರು ಅಳಿಸಲಾಗೋಲ್ಲ. ಇದರಿಂದ ಅವರ ಅಸ್ತಿತ್ವಕ್ಕೆ , ಅವರ ಹೆಸರಿಗೆ ಯಾವತ್ತು ಧಕ್ಕೆ ಬರೋಲ್ಲ. ತಂದೆಯ ಹೆಸರು ಅವರ ಮೇಲಿನ ಪ್ರೀತಿ ಅಭಿಮಾನಿಗಳ ಮನಸ್ಸಲ್ಲಿ ಇದೆ. ಅದನ್ನ ಯಾರು ಬದಲಾಯಿಸಲು ಸಾಧ್ಯವಿಲ್ಲ, ಕೆಲ ಕೆಟ್ಟ ಮನಸ್ಥಿತಿಯ ಜನರಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ ಅಂತ ಘಟನೆಗೆ ಬೇಸರ ವ್ಯಕ್ತಪಡಿಸಿದರು.
ಇನ್ನು ಮೈಸೂರಿನಲ್ಲಿ ನಡೆಯುತ್ತಿರುವ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ಇನ್ನೊಂದು ವರ್ಷದಲ್ಲಿ ಮುಗಿಯಲಿದೆ. ಒಳ್ಳೆಯ ಕೆಲಸಗಳು ಸ್ವಲ್ಪ ತಡವಾಗಿಯೇ ಆಗೋದು. ಹಾಗಾಗಿ ತಡವಾಗಿಯಾದರೂ ಆಗುತ್ತಿದೆ ಅನ್ನೋದೆ ಸಂತೋಷ ಎಂದು ತಿಳಿಸಿದರು. ತಂದೆ ಎಂದಾಕ್ಷಣ ಅವರ ಪ್ರೀತಿಯೇ ನೆನಪಾಗುತ್ತೆ. ಇಂದು ಅವರ ಸ್ಮರಣೆ ಮಾಡುವ ಎಲ್ಲ ಅಭಿಮಾನಿಗಳಿಗೆ ನಮ್ಮ ಧನ್ಯವಾದ ಹೇಳ್ತಿವಿ ಅಂತ ವಿಷ್ಣುವರ್ಧನ್ ಪುತ್ರಿ ಕೀರ್ತಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.
ಪತಿ ಪುಣ್ಯಸ್ಮರಣೆಯಲ್ಲಿ ಭಾಗಿಯಾದ ನಟಿ ಭಾರತಿ ವಿಷ್ಣುವರ್ಧನ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಚಿತ್ರರಂಗದ ಎಲ್ಲರಿಗು ಧನ್ಯವಾದ ಎಂದು ಹೇಳಿದರು. ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಇರಬೇಕು. ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತೆ ಅಂತ ಹೇಳುವ ಮೂಲಕ ವಿಷ್ಣು ಪುತ್ಥಳಿ ಧ್ವಂಸ ಪ್ರಕರಣಕ್ಕೆ ನಟಿ ಭಾರತಿ ನಯವಾಗಿಯೇ ತಿರುಗೇಟು ನೀಡಿದರು.
ಇದನ್ನು ಓದಿ: ಜನರ ಜೀವನವನ್ನು ಹಿತಕರವಾಗಿಸುವುದೇ ವಿಜ್ಞಾನದ ಅಂತಿಮ ಗುರಿ: ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು
ಮೊನ್ನೆ ಘಟನೆಗೆ ಇಡೀ ಚಿತ್ರರಂಗ ಪ್ರತಿಕ್ರಿಯೆಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಎಲ್ಲರ ಮನದಲ್ಲು ವಿಷ್ಣು ಇದ್ದಾರೆ. ಯಾರೋ ಕೆಲವರು ಅವರ ಬಗ್ಗೆ ಮಾತನಾಡುತ್ತಾರೆ. ಮಾತನಾಡುವವರು ಇದ್ದಾಗಲೇ ನಮ್ಮವರು ಇದ್ದಾರೆ ಅನಿಸೋದು. ಪುತ್ಥಳಿ ಧ್ವಂಸವನ್ನು ಅವಮಾನ ಅಂದುಕೊಳ್ಳಬಾರದು. ಅದನ್ನ ಆಶೀರ್ವಾದ ಅಂದುಕೊಳ್ಳೋಣ. ಅಂತಹವರಿಗೆ ನಾನು ಏನು ಹೇಳೋದು ಇಲ್ಲ. ಅಂತವರ ಬಗ್ಗೆ ಏನು ಹೇಳೋದೆ ಇರೋದೆ ಉತ್ತಮ. ಅವರ ಮನಸ್ಸಿನಲ್ಲಿ ಏನಿದೆ ಅಂತ ಇದರಿಂದಲೇ ಗೊತ್ತಾಗಿದೆ ಅಂತ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ