Coronavirus: ಕೋವಿಡ್​ನಿಂದ ಮೃತಪಟ್ಟವರಲ್ಲಿ 105ಜನ ನಾಪತ್ತೆ ? ಕೊಡಗಿನಲ್ಲಿ ಕೊರೊನಾ ಕಗ್ಗಂಟು !

ಕೊಡಗು ಜಿಲ್ಲಾಡಳಿತದ್ದೇ ಒಂದು ಲೆಕ್ಕವಾದರೆ, ಸರ್ಕಾರದ್ದೇ ಒಂದು ಲೆಕ್ಕ, ಎಲ್ಲಿ ಹೋದರು ಆ 105 ಜನ ?

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಕೊಡಗು : ಕೊವಿಡ್ ಮಹಾಮಾರಿ ಕೊಡಗಿನಲ್ಲಿ ಸಾವಿರಾರು ಜನರ ಮೈಯೊಕ್ಕು ಜೂನ್ 7 ರವರೆಗೆ 341 ಜನರ ಪ್ರಾಣ ಪಕ್ಷಿಯನ್ನೇ ಹಾರಿಸಿಕೊಂಡು ಹೋಗಿದೆ. ಆದರೆ ಸರ್ಕಾರ ಅದೇಕೋ ತನ್ನ ಲೆಕ್ಕದಲ್ಲಿ ಕೇವಲ 236 ಜನರು ಮೃತಪಟ್ಟಿದ್ದಾರೆ ಎಂದು ತೋರಿಸುತ್ತಿದೆ. ಇದು ಸರ್ಕಾರ ಕೊಡಗಿನ ಜನರ ಸಾವಿನ ಲೆಕ್ಕವನ್ನು ಮುಚ್ಚಿಡುತ್ತಿದೆಯಾ ಎನ್ನೋ ಅನುಮಾನ ಕಾಡುವಂತೆ ಮಾಡಿದೆ. ಹೌದು ಇದುವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 26 ಸಾವಿರಕ್ಕೂ ಹೆಚ್ಚು ಜನರಿಗೆ ಕೊವಿಡ್ ಸೋಂಕು ಒಕ್ಕರಿಸಿದ್ದು, ಅವರಲ್ಲಿ 23,941 ಜನರು ಗುಣಮುಖರಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 341 ಜನರು ಮೃತಪಟ್ಟಿದ್ದಾರೆ. ಇಷ್ಟು ಜನರು ಮೃತಪಟ್ಟಿದ್ದರೂ ಸರ್ಕಾರ ತೋರಿಸುತ್ತಿರುವ ಲೆಕ್ಕದ ಪ್ರಕಾರ ನೋಡಿದರೆ ಕೊಡಗಿನಲ್ಲಿ ಒಟ್ಟು ಮೃತಪಟ್ಟವರಲ್ಲಿ 105 ಮೃತಪಟ್ಟವರು ನಾಪತ್ತೆಯಾಗಿದ್ದಾರೆ.

ಆರೋಗ್ಯ ಇಲಾಖೆ ಟೆಸ್ಟ್ ಮಾಡಿ ಕೊವಿಡ್ ದೃಢಪಟ್ಟರೂ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇಲ್ಲವೆಂದು ಹೋಂಕ್ವಾರಂಟೈನ್ ಮಾಡಲಾಗುತಿತ್ತು. ಹೀಗೆ ಹೋಂಕ್ವಾರಂಟೈನ್ ನಲ್ಲಿದ್ದು ಮೃತಪಟ್ಟವರ ಲೆಕ್ಕ ಕೊಡಗು ಜಿಲ್ಲಾಡಳಿತಕ್ಕೆ ಸಿಕ್ಕರೂ ಅವರ ವಿವರ ಸಿಗುತ್ತಿಲ್ಲವೇ ಎನ್ನೋ ಪ್ರಶ್ನೆ ಮೂಡಿದೆ. ಹೀಗಾಗಿ ಜಿಲ್ಲಾಡಳಿತ ಪ್ರತೀ ದಿನ ಬಿಡುಗಡೆ ಮಾಡುವ ಅಂಕಿ ಅಂಶದಲ್ಲಿ 341 ಜನರು ಮೃತಪಟ್ಟಿದ್ದಾರೆ ಎಂದು ತೋರಿಸುತ್ತಿದ್ದರೂ, ಸರ್ಕಾರದ ಪೋರ್ಟಲ್ ನಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲವೇ ಎನ್ನೋ ಅನುಮಾನವೂ ಇದೆ. ಅಂದರೆ ಹೋಂಕ್ವಾರಂಟೈನ್ ನಲ್ಲಿದ್ದು ಮೃತಪಟ್ಟರೆ ಅಂತಹವರು ಕೊವಿಡ್ ನಿಂದ ಮೃತಪಟ್ಟರೇ ಅಲ್ಲ ಎನ್ನೋ ರೀತಿ ಆಗುತ್ತಿದೆ. ಆದರೆ ಕೊವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಕೊಡಗಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ನೆರವೇರಿಸುತ್ತಿವೆ.

ಇದನ್ನೂ ಓದಿ: Explained: 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೋನಾ ಲಸಿಕೆ; ಭಾರತದ ಹೊಸ ಲಸಿಕಾ ನೀತಿಯ ಹೈಲೈಟ್ಸ್​ ಇಲ್ಲಿದೆ

ಅವರ ಪ್ರಕಾರದಲ್ಲಿ ನೋಡಿದರೂ ಒಂದೊಂದು ಸಂಘಟನೆಗಳು ನೂರಾರು ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿವೆ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ನೇತೃತ್ವದಲ್ಲೇ ಇದುವರೆಗೆ ಬರೋಬ್ಬರಿ 204 ಮೃತದೇಹಗಳ ಅಂತ್ಯ ಕ್ರಿಯೆ ನಡೆಸಲಾಗಿದೆ. ಇನ್ನು ಎಸ್‍ಡಿಪಿಐ ಸಂಘಟನೆ ಕೂಡ ನೂರಕ್ಕೂ ಹೆಚ್ಚು ಮೃತದೇಹಗಳ ಅಂತ್ಯ ಕ್ರಿಯೆ ನಡೆಸಿದೆ. ಇವುಗಳ ಲೆಕ್ಕದಲ್ಲೇ ಮುನ್ನೂರಕ್ಕೂ ಹೆಚ್ಚು ಮೃತದೇಹಗಳ ಅಂತ್ಯ ಕ್ರಿಯೆ ಮಾಡಲಾಗಿದೆ. ಆದರೆ ಸರ್ಕಾರ ಪ್ರತೀ ದಿನ ಬಿಡುಗಡೆ ಮಾಡುವ ಅಂಕಿ ಅಂಶಗಳ ಪಟ್ಟಿಯಲ್ಲಿ ಕೊಡಗಿನಲ್ಲಿ ಇದುವರೆಗೆ 236 ಜನರು ಮೃತಪಟ್ಟಿದ್ದಾರೆ ಎಂದು ತೋರಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿಯವರನ್ನು ಕೇಳಿದರೆ, ಸರ್ಕಾರದ ಪೋರ್ಟಲ್ ಗೂ ನಾವೇ ಅಪ್ಡೇಟ್ ಮಾಡಲಾಗುತ್ತಿದ್ದೇವೆ. ಅದು ತಾಂತ್ರಿಕ ದೋಷದಿಂದ ಆಗಿರುವ ಸಮಸ್ಯೆ. ಅದನ್ನು ಸರಿಪಡಿಸಲಾಗುವುದು ಎನ್ನೋ ಉತ್ತರ ನೀಡುತ್ತಿದ್ದಾರೆ. ಆದರೆ ಇದೇ ಜಿಲ್ಲಾಡಳಿತ ನಿತ್ಯ ಬಿಡುಗಡೆ ಮಾಡುವ ಕೊವಿಡ್ ಅಂಕಿ ಅಂಶಗಳಲ್ಲಿ 341 ಜನರು ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಅಂಕಿ ಅಂಶಗಳು ಕೊಡಗಿನಲ್ಲಿ ಕೊವಿಡ್ ನಿಂದ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಟ್ಟು ಆಗಿರುವ ಅನಾಹುತವನ್ನು ಮರೆಮಾಚಲು ಪ್ರಯತ್ನಿಸುತ್ತಿದೆಯಾ ಎನ್ನೋ ಅನುಮಾನ ಮೂಡಿದೆ.
Published by:Soumya KN
First published: