Nalin Kumar Kateel: ಕೋವಿಡ್ ಲಸಿಕೆಗಾಗಿ ಕಾಂಗ್ರೆಸ್ ನೀಡುವ 100 ಕೋಟಿ ಯಾರ ಅಪ್ಪನದು?; ನಳಿನ್ ಕುಮಾರ್ ಕಟೀಲ್ ಟೀಕೆ!

ಕಾಂಗ್ರೆಸ್ ಪಕ್ಷ ಸರಕಾರದ ಹಣವನ್ನು ಕೊಡುವ ಬದಲು, ಹಿಂದೆ ಭ್ರಷ್ಟಾಚಾರ ಮಾಡಿ ಕೂಡಿಟ್ಟ ಹಣವನ್ನು ಜನರಿಗಾಗಿ ಖರ್ಚು ಮಾಡಲಿ. ಇಲ್ಲವೇ ಚಂದಾ ಎತ್ತಿಯಾದರೂ, ಹಣ ಕ್ರೋಡೀಕರಿಸಿ ಜನರಿಗೆ ನೀಡಲಿ ಎಂದು ಕಾಂಗ್ರೆಸ್ ವಿರುದ್ಧ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ನಳೀನ್ ಕುಮಾರ್ ಕಟೀಲ್.

ನಳೀನ್ ಕುಮಾರ್ ಕಟೀಲ್.

  • Share this:
ಮಂಗಳೂರು (ಮೇ 19); ಕೊರೋನಾ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಇದೀಗ ಬೀದಿ ಬೀದಿಯಲ್ಲಿ ಬೊಬ್ಬಿಡುತ್ತಿದೆ. ಆದರೆ, ಇದೇ ಕಾಂಗ್ರೇಸ್ ದೇಶದಲ್ಲಿ ಲಸಿಕೆ ತಯಾರಾದ ಸಂದರ್ಭದಲ್ಲಿ ಜನರು ಲಸಿಕೆಯನ್ನು ಹಾಕಿಸಿಕೊಳ್ಳದಂತೆ ಮಾಡಿತ್ತು. ಲಸಿಕೆ ಹಾಕಿಸಿಕೊಂಡವರಿಗೆ ಷಂಡತನ ಸೇರಿದಂತೆ ಹಲವು ರೀತಿಯ ತೊಂದರೆಗಳು ಆಗುತ್ತವೆ ಎಂದು ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡಿದೆ. ರಾಹುಲ್ ಗಾಂಧಿ ಸೇರಿದಂತೆ ಸಿದ್ಧರಾಮಯ್ಯರ ತನಕ ಎಲ್ಲರೂ ಲಸಿಕೆ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಜನ ಸಾಮಾನ್ಯರು ಲಸಿಕೆಯಿಂದ ದೂರ ಉಳಿಯುವಂತೆ ಮಾಡಿದರು. ಇದರಿಂದಾಗಿ ದೇಶದಲ್ಲಿ ಸಾವಿರಾರು ಜನ ಸಾಯುವಂತಾಗಿದ್ದು, ಈ ಸಾವಿಗೆ ಕಾಂಗ್ರೆಸ್ ಪಕ್ಷವೇ ಹೊಣೆ. ಆದರೆ, ಈಗ ಅವರೇ 100 ಕೋಟಿ ಹಣ ಲಸಿಕೆಗೆ ನೀಡುತ್ತಿದ್ದಾರೆ. ಆ ಹಣ ಯಾರ ಅಪ್ಪನ ಮನೆ ದುಡ್ಡು?" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಕೊರೋನಾ ಎರಡನೇ ಅಲೆ ಭಾರೀ ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಹೀಗಾಗಿ ಕಾಂಗ್ರೆಸ್​ ಪಕ್ಷ ಲಸಿಕೆ ನೀಡುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ 100 ಕೋಟಿ ಹಣವನ್ನು ನೀಡಿದೆ. ಈ ಬಗ್ಗೆ ಕಿಡಿಕಾರಿರುವ ನಳೀಣ್ ಕುಮಾರ್ ಕಟೀಲ್, "ಇದೀಗ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು ಲಸಿಕೆ ಖರೀದಿಗೆ 100 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆಗಳನ್ನು ಕೊಡುತ್ತಿದ್ದು, 100 ಕೋಟಿ ನಿಮ್ಮ ಅಪ್ಪನ ಹಣವೇ?" ಎಂದು ಆಕ್ರೋಶ ಹೊರಹಾಕಿದ್ದಾರೆ.

"ಸರ್ಕಾರ ಎಂಎಲ್​ಎ, ಎಂಪಿ ಗಳಿಗೆ ನೀಡುವ ಅನುದಾನವನ್ನು ತಾವೇ ನೀಡುವಂತೆ ಷೋಕಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರ ನಿಜ ಬಣ್ಣ ಜನರ ಮುಂದೆ ಬಯಲಾಗಿದೆ. ಬಿಜೆಪಿ ಪಕ್ಷ ಈ ಹಿಂದೆಯೇ ಪ್ರತಿಯೊಬ್ಬ ಎಂಪಿ ತನ್ನ ಅನುದಾನದಲ್ಲಿ 2.50 ಕೋಟಿಯನ್ನು ಕೊರೋನಾಕ್ಕೆ ಮೀಸಲಿಡಬೇಕು ಹಾಗೂ ಎಲ್ಲಾ ಎಂಎಲ್ಎ ಗಳೂ ತಮ್ಮ ಅನುದಾನವನ್ನು ಕೋವಿಡ್ ಗಾಗಿ ಮೀಸಲಿಡಬೇಕು ಎನ್ನುವ ಆದೇಶವನ್ನು ನೀಡಿದೆ.

ಕಾಂಗ್ರೆಸ್ ಪಕ್ಷ ಸರಕಾರದ ಹಣವನ್ನು ಕೊಡುವ ಬದಲು, ಹಿಂದೆ ಭ್ರಷ್ಟಾಚಾರ ಮಾಡಿ ಕೂಡಿಟ್ಟ ಹಣವನ್ನು ಜನರಿಗಾಗಿ ಖರ್ಚು ಮಾಡಲಿ. ಇಲ್ಲವೇ ಚಂದಾ ಎತ್ತಿಯಾದರೂ, ಹಣ ಕ್ರೋಡೀಕರಿಸಿ ಜನರಿಗೆ ನೀಡಲಿ" ಎಂದು ಕಾಂಗ್ರೆಸ್ ವಿರುದ್ಧ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಾಂಗ್ರೆಸ್ ಟೂಲ್ ಕಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, "ಕಾಂಗ್ರೆಸ್ ಪಕ್ಷ ಈ ಮೂಲಕ ದೇಶದ ಘನತೆಯನ್ನು ವಿಶ್ವದೆಲ್ಲೆಡೆ ಕುಗ್ಗಿಸುವ ಪ್ರಯತ್ನ ನಡೆಸಿದೆ. ವಿವಿಧ ರೀತಿಯ ವಿಚಾರಗಳನ್ನು ಇಟ್ಟುಕೊಂಡು ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆಯನ್ನು ಟೂಲ್ ಕಿಟ್ ಮೂಲಕ ಸಿದ್ಧಪಡಿಸಿರುವ ಕಾಂಗ್ರೆಸ್ ಈ ಟೂಲ್ ಕಿಟ್ ಗಳನ್ನು ಕಾರ್ಯಕರ್ತರಿಗೆ ನೀಡುವ ಕೆಟ್ಟ ಕೆಲಸವನ್ನು ಕಾಂಗ್ರೆಸ್ ಮಾಡಿದೆ" ಎಂದು ಆರೋಪಿಸಿದರು.

ಇದನ್ನೂ ಓದಿ: DK Shivakumar: ರಾಜ್ಯ ಸರ್ಕಾರ ಘೋಷಿಸಿರುವುದು ನೆಪಮಾತ್ರದ, ಬಡವರಿಗೆ ನೆರವಾಗದ ಪ್ಯಾಕೇಜ್; ಡಿ.ಕೆ. ಶಿವಕುಮಾರ್ ಆಕ್ರೋಶ

"ಕಾಂಗ್ರೆಸ್ ಕೊರೋನಾದಿಂದ ಸಾವನ್ನಪ್ಪಿದವರ ಶವಸಂಸ್ಕಾರದ ವಿಡಿಯೋ ತುಣುಕುಗಳನ್ನು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಭಿತ್ತರಿಸುವ, ಕುಂಭಮೇಳವನ್ನು ಕೊರೋನಾ ಸೂಪರ್ ಸ್ಪ್ರೆಡರ್ ಎಂದು ಬಿಂಬಿಸುವ ಯೋಜನೆ ಸೇರಿದಂತೆ ಭಾರತದವನ್ನು ವಿಶ್ವ ಸಮುದಾಯದ ಮುಂದೆ ತಲೆ ತಗ್ಗಿಸುವಂತೆ ಮಾಡುವ ಷಡ್ಯಂತ್ರವನ್ನು ಮಾಡಲಾಗಿದ್ದು, ಇದಕ್ಕೆ ದೇಶದ ಜನ ತಕ್ಕ ಉತ್ತರ ನೀಡಲಿದ್ದಾರೆ" ಎಂದು ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ ಎಂದ ಅವರು ರಾಜ್ಯದಲ್ಲಿ ಬ್ಲಾಕ್ ಫಂಗಸ್ ರೋಗದ ತಡೆಗೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಬೆಂಗಳೂರಿನಲ್ಲಿ ಪ್ರತ್ಯೇಕ ಆಸ್ಪತ್ರೆಯ ವ್ಯವಸ್ಥೆಯನ್ನೂ ಮಾಡಲು ಸರಕಾರ ಮುಂದಾಗಿದೆ ಎಂದು ಅವರು ಮಾಹಿತಿ ನೀಡಿದರು.
Published by:MAshok Kumar
First published: