HOME » NEWS » District » 10 YEAR OLD BOY SELLING MASKS TO SUPPORT HIS MOTHER WHO LOST HER JOB DUE TO LOCKDOWN IN GADAG KVD

ಅಯ್ಯೋ ಕಂದ.. ಕೆಲಸ ಕಳೆದುಕೊಂಡ ತಾಯಿಗೆ ಆಸರೆಯಾಗಲು ಮಾಸ್ಕ್ ಮಾರುತ್ತಿರುವ ಬಾಲಕ!

ಕೊರೋನಾ ಸಮಯದಲ್ಲಿ ಪುಟ್ಟ ಬಾಲಕ ಹೀಗೆ ಜನಸಂದಣಿ ಪ್ರದೇಶದಲ್ಲಿ ಇರುವುದು, ಮಾರಾಟದಲ್ಲಿ ತೊಡಗುವುದು ತಪ್ಪು. ಆದರೆ ಈ ಬಾಲಕನ ಹಾಗೂ ಅವನ ತಾಯಿಯ ಹೊಟ್ಟೆ ತುಂಬಿಸುವವರು ಯಾರು? ಕೊರೋನಾ ಭಯ ಇದೆ, ಆದರೆ ಹಸಿವಿನ ಭಯ ಅದಕ್ಕೂ ದೊಡ್ಡದಲ್ಲವೇ?

news18-kannada
Updated:May 1, 2021, 8:52 PM IST
ಅಯ್ಯೋ ಕಂದ.. ಕೆಲಸ ಕಳೆದುಕೊಂಡ ತಾಯಿಗೆ ಆಸರೆಯಾಗಲು ಮಾಸ್ಕ್ ಮಾರುತ್ತಿರುವ ಬಾಲಕ!
ಮಾಸ್ಕ್​​ ಮಾರುತ್ತಿರುವ ಬಾಲಕ
  • Share this:
ಗದಗ: ಕೊರೊನಾ ಇಡೀ ದೇಶಕ್ಕೆ ಕಂಟಕವಾಗಿ ಪರಿಣಮಿಸಿದೆ. ಅದೆಷ್ಟೋ ಕುಟುಂಬಗಳು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಲಾಕ್​​ಡೌನ್​, ಕರ್ಫ್ಯೂ ಸುಳಿಯಲ್ಲಿ ಉದ್ಯೋಗ ಕಳೆದುಕೊಂಡು ಜೀವನ ನಡೆಸುವುದೇ ದುಸ್ತರವಾಗಿದೆ. ನಿತ್ಯ ಹೊಟ್ಟೆ ತುಂಬಿಸಿಕೊಳ್ಳಲು ಬಡವರು ಪರದಾಡುತ್ತಿದ್ದಾರೆ. ಇದೇ ರೀತಿ ಕೆಲಸ ಕಳೆದುಕೊಂಡ ಮಹಿಳೆಯೊಬ್ಬರ 10 ವರ್ಷ ಮಗ ಮಾಸ್ಕ್​ ಮಾರುವ ಮೂಲಕ ತಾಯಿಗೆ ನೆರವಾಗುತ್ತಿದ್ದಾನೆ. ಕೊರೋನಾ ಸೋಂಕಿನ ಭೀತಿ ಮಧ್ಯೆಯೂ ಪುಟ್ಟ ಬಾಲಕ ಮಾಸ್ಕ್​​ ಮಾರಾಟದಲ್ಲಿ ತೊಡಗಿದ್ದಾನೆ.

ಕೊರೋನಾ 2ನೇ ಅಲೆ ಅಬ್ಬರಿಸುತ್ತಿರೋದ್ರಿಂದ ಮನೆಯಿಂದ ಹೊರಗಡೆ ಬರಲು ಜನ ಹೆದರುತ್ತಿದ್ದಾರೆ. ಹೊರಗಡೆ ಬಂದ್ರೆ ಮಾಹಾಮಾರಿ ಎಲ್ಲಿ ಒಕ್ಕರಿಸಿಕೊಳ್ಳುತ್ತೋ ಎನ್ನುವ ಭಯ. ಆದ್ರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪುಟ್ಟ ಬಾಲಕ ಮನೆಯಿಂದ ಹೊರಗಡೆ ಬಂದು ಮಾಸ್ಕ್ ಮಾರಾಟ ಮಾಡಿ, ಬಂದ ಹಣದಲ್ಲಿ ತಾಯಿಯನ್ನು ಸಾಕುತ್ತಿದ್ದಾನೆ.  ಗದಗ ನಗರದ ಮಹೇಂದ್ರಕರ್ ಸರ್ಕಲ್ ನಿವಾಸಿಯಾದ ಮಹಮ್ಮದ್ ರಿಯಾಜ್ ಎನ್ನುವ ಬಾಲಕನ ಆತ್ಮ ಸ್ಥೈರ್ಯ ಹಾಗೂ ಧೈರ್ಯವನ್ನು ಮೆಚ್ಚಲೇ ಬೇಕು. ಕಾನೂನು ಪ್ರಕಾರ ಮಕ್ಕಳು ಇಂತಹ ಕೆಲಸ ಮಾಡಬಾರದು. ಆದ್ರೆ, ಈ ಕಿಲ್ಲರ್ ಕೊರೊನಾ ಆತನ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಹೀಗಾಗಿ ಜನತಾ ಕರ್ಫ್ಯೂ ಸಮಯದಲ್ಲಿ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೆ ಮಾಸ್ಕ್ ಮಾರಾಟ ಮಾಡುತ್ತಾನೆ.

ಗದಗನ ಭೂಮರೆಡ್ಡಿ ಸರ್ಕಲ್ ನಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಮಾರುಕಟ್ಟೆಗೆ ಬರುವ ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಬಾಲಕ ಮಾಸ್ಕ್ ಮಾರಾಟ ಮಾಡಿ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾನೆ. ಗದಗನ ವಿಡಿಎಸ್ ಸ್ಕೂಲ್ ನಲ್ಲಿ ನಾಲ್ಕನೇಯ ತರಗತಿ ಓದುತ್ತಿರುವ ಬಾಲಕ, ಶಾಲೆಯಲ್ಲಿ ಕೂಡಾ ಚೂರುಕಾಗಿಯೇ ಇದ್ದಾನೆ. ಮಹಮ್ಮದ್ ಹಾಗೂ ಅವರ ತಾಯಿಯನ್ನು ಅವರ ತಂದೆ ಹಲವು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದಾನೆ. ಹೀಗಾಗಿ ಮಹಮ್ಮದ್ ರಿಯಾಜ್ ಅವರ ತಾಯಿ ಗದಗನ ಜುವೆಲರ್ಸ್ ನಲ್ಲಿ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದ್ರೆ ಕಳೆದ ಲಾಕ್ ಡೌನ್ ಸಮಯದಲ್ಲಿ ‌ಕೆಲಸವನ್ನು ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾಗಿತ್ತು. ಮತ್ತೆ ಬಟ್ಟೆ ಹೊಲಿಯುವ ಕೆಲಸವನ್ನು ಮಾಡುತ್ತಿದ್ದರು. ಈಗ ಮತ್ತೆ ಜನತಾ ಕರ್ಫ್ಯೂ ಜಾರಿ ಮಾಡಿರುವುದರಿಂದ ಜೀವನ ನಡೆಸುವರು ಕಷ್ಟವಾಗಿದೆ.

ಹೀಗಾಗಿ ಮಹಮ್ಮದ್ ಅವರ ತಾಯಿ ಮನೆಯಲ್ಲಿ ಮಾಸ್ಕ್ ತಯಾರಿಸಿ ಕೊಡುತ್ತಾರೆ. ನಿತ್ಯ ಮಾರ್ಕೆಟ್​​ಗೆ ಬಂದು ಮಾಸ್ಕ್ ಮಾರಾಟ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದಾರೆ. ಕುಟುಂಬಕ್ಕೆ ಆಸರೆಯಾದ ಬಾಲಕನನ್ನು ನೋಡಿ ಸಂತೋಷ ಪಡಬೇಕೋ ಅಥವಾ ಕೊರೊನಾ ಅಟ್ಟಹಾಸ ಇಷ್ಟು ಚಿಕ್ಕ ಪುಟಾಣಿಯನ್ನೂ ಸಹ ದುಡಿಮೆಗೆ ಹಚ್ಚಿತಲ್ಲಾ ಎಂದು ದುಃಖಿಸಬೇಕೋ ತಿಳಿಯದು.
Published by: Kavya V
First published: May 1, 2021, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories