HOME » NEWS » District » 10 GRAMA PANCHAYAT ELECTION BOYCOTT BY THE PEOPLE IN CHIKKAMAGALURU DISTRICT RHHSN VCTV

ಕಸ್ತೂರಿ ರಂಗನ್ ವರದಿ ವಿರೋಧಿಸಿ ಚಿಕ್ಕಮಗಳೂರಿನ 10 ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಬಹಿಷ್ಕರಿಸಿದ ಜನರು

ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿ ನಾಮಪತ್ರ ಸಲ್ಲಿಸಿರುವವರನ್ನ ಮನವೊಲಿಸಿ ನಾಮಿನೇಷನ್ ಹಿಂಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈಗಾಗಲೇ ನಾಮಪತ್ರ ಸಲ್ಲಿಸಿರುವವರು ನಾಮಪತ್ರವನ್ನ ಹಿಂಪಡೆಯುತ್ತಾರೋ ಅಥವ ಚುನಾವಣೆ ನಡೆಯುತ್ತೋ ಗೊತ್ತಿಲ್ಲ. ಆದರೆ, 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬರೂ ನಾಮಪತ್ರ ಸಲ್ಲಿಸದೆ ಬದುಕಿಗಾಗಿ ಚುನಾವಣೆಯನ್ನ ತಿರಸ್ಕರಿಸಿದ್ದಾರೆ.

news18-kannada
Updated:December 13, 2020, 7:22 AM IST
ಕಸ್ತೂರಿ ರಂಗನ್ ವರದಿ ವಿರೋಧಿಸಿ ಚಿಕ್ಕಮಗಳೂರಿನ 10 ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಬಹಿಷ್ಕರಿಸಿದ ಜನರು
ಚಿಕ್ಕಮಗಳೂರು ತಾಲೂಕಿನ ಶಿರವಾಸೆ ಗ್ರಾಮದಲ್ಲಿ ನೂರಾರು ಜನ ಪಂಜಿನ ಮೆರವಣಿಗೆ ನಡೆಸಿದರು.
  • Share this:
ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿಗೆ ವಿರೋಧ, ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಜಿಲ್ಲೆಯ ಮಲೆನಾಡು ಭಾಗದ 10 ಗ್ರಾಮ ಪಂಚಾಯಿತಿ ಜನ ಒಬ್ಬರೂ ನಾಮಪತ್ರ ಸಲ್ಲಿಸದೆ ಬದುಕಿಗಾಗಿ ಚುನಾವಣೆಯನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಬಹಿಷ್ಕಾರ ಅಂತಿದ್ದ ಜನ ಅಂತಿಮವಾಗಿ ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಎಲ್ಲಾ ಪಕ್ಷದ ಬೆಂಬಲಿಗ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ದೇವದಾನ, ಬಿದರೆ, ಕಡವಂತಿ, ಹುಯಿಗೆರೆ, ಶಿರವಾಸೆ, ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿಗಳಲ್ಲಿ ಜನ ಚುನಾವಣೆ ಬಹಿಷ್ಕಾರ ಹಾಕಿದ್ದಾರೆ. ಎನ್.ಆರ್.ಪುರ ತಾಲೂಕಿನ ಆಡುವಳ್ಳಿ, ಬನ್ನೂರು ಹಾಗೂ ಮಾಗುಂಡಿಯ ಜನ ಕೂಡ ಬದುಕಿಗಾಗಿ ಚುನಾವಣೆಯನ್ನ ತಿರಸ್ಕರಿಸಿದ್ದಾರೆ. ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಕೂಡ ಚುನಾವಣೆಯತ್ತ ಬೆನ್ನು ಮಾಡಿದ್ದಾರೆ.

ಕಸ್ತೂರಿ ರಂಗನ್ ವರದಿ, ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಯೋಜನೆ ಜಾರಿಗೆ ಬಂದರೆ ಬಹುತೇಕ ಮಲೆನಾಡು ಭಾಗದ ಜನ ಸಂಕಷ್ಟಕ್ಕೀಡಾಗುತ್ತಿದ್ದರು. ಹಾಗಾಗಿ, ಮಲೆನಾಡು ಭಾಗದ ಜನ ಸರ್ಕಾರದ ಗಮನ ಸೆಳೆಯಲು ಬದುಕಿಗಾಗಿ ಚುನಾವಣೆ ಬಹಿಷ್ಕಾರ ಹೋರಾಟಕ್ಕಿಳಿದಿದ್ದರು. ಹಳ್ಳಿ-ಹಳ್ಳಿಗಳಲ್ಲಿ ಚುನಾವಣೆ ಬಹಿಷ್ಕಾರದ ಬೋರ್ಡ್ ಹಾಕಿ ಯಾರೂ ಮತದಾನದಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿದ್ದರು. ಒಂದು ದಿನ ಎನ್.ಆರ್.ಪುರ ತಾಲೂಕನ್ನು ಬಂದ್ ಮಾಡಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ವರದಿ ನೀಡಿರುವುದರಿಂದ ಇಂದು ಬಹುತೇಕ ಮಲೆನಾಡ ವಿನಾಶದ ಅಂಚಿನಲ್ಲಿದೆ ಎಂದು ಸರ್ಕಾರದ ವರದಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದನ್ನು ಓದಿ: ರಾಜಕೀಯ ಲಾಭಕ್ಕೆ ಯತ್ನಿಸುತ್ತಿರುವವರಿಂದ ರೈತ ಹೋರಾಟಗಾರರು ದೂರ ಇರಿ; ನಿರ್ಮಲಾ ಸೀತಾರಾಮನ್

ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾದ ದಿನದಿಂದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಜನ ಪಕ್ಷಾತೀತವಾಗಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು. ಅಧಿಕಾರಿಗಳ ಮನವೊಲಿಕೆಗೂ ಬಗ್ಗದೆ ಚುನಾವಣೆಗೆ ಬೆನ್ನು ಮಾಡಿದ್ದರು. ಹಳ್ಳಿಗಳಲ್ಲಿ ಜನ ಹಾಕಿದ್ದ ಬ್ಯಾನರ್ ತೆಗೆಯಲು ಬಂದ ಅಧಿಕಾರಿಗಳಿಗೆ ಮೈಚಳಿ ಬಿಡಿಸಿದ್ದರು. ಚುನಾವಣೆಯನ್ನ ಬಹಿಷ್ಕರಿಸಿ ಚಿಕ್ಕಮಗಳೂರು ತಾಲೂಕಿನ ಶಿರವಾಸೆ ಗ್ರಾಮದಲ್ಲಿ ನೂರಾರು ಜನ ಪಂಜಿನ ಮೆರವಣಿಗೆ ನಡೆಸಿದ್ದರು.

ಯಾರಾದ್ರು, ನಾಮಪತ್ರ ಸಲ್ಲಿಸಲು ಬರುತ್ತಾರೆಂದು ಗ್ರಾಮ ಪಂಚಾಯಿತಿಯ ಮುಂದೆ ಕಾವಲು ಕೂತಿದ್ದರು. ಆದರೆ, ಅಂತಿಮವಾಗಿ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಕಾರಣ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿ ನಾಮಪತ್ರ ಸಲ್ಲಿಸಿರುವವರನ್ನ ಮನವೊಲಿಸಿ ನಾಮಿನೇಷನ್ ಹಿಂಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈಗಾಗಲೇ ನಾಮಪತ್ರ ಸಲ್ಲಿಸಿರುವವರು ನಾಮಪತ್ರವನ್ನ ಹಿಂಪಡೆಯುತ್ತಾರೋ ಅಥವ ಚುನಾವಣೆ ನಡೆಯುತ್ತೋ ಗೊತ್ತಿಲ್ಲ. ಆದರೆ, 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬರೂ ನಾಮಪತ್ರ ಸಲ್ಲಿಸದೆ ಬದುಕಿಗಾಗಿ ಚುನಾವಣೆಯನ್ನ ತಿರಸ್ಕರಿಸಿದ್ದಾರೆ.
Published by: HR Ramesh
First published: December 13, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories