ತುಮಕೂರು : ಇಂದು ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ.. ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ರೆ, ತುಮಕೂರು ಜಿಲ್ಲೆಯಲ್ಲಿ ಮಾತ್ರ ಸೂತಕದ ಆವರಿಸಿದೆ.. ಸ್ವಾತಂತ್ರ್ಯ ದಿನಾಚರಣೆಗೆಂದು ಧ್ವಜಸ್ತಂಭ ನಿಲ್ಲಿಸಲು ಹೋಗಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ..ಶಿಕ್ಷಕರ ಬೇಜವಾಬ್ದಾರಿತನದಿಂದ ಒಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ ಅಂತಾ ಪೋಷಕರು ಆರೋಪಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.. ಇಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಬೆಳಗ್ಗಿನಿಂದಲೂ ಎಲ್ಲೆಡೆ ತ್ರಿವರ್ಣ ಧ್ವಜ ಹಾರಿಸಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿದ್ದರು.. ಈ ನಡುವೇ ತುಮಕೂರಿನಲ್ಲಿ ಮಾತ್ರ ಸ್ವಾತಂತ್ರ್ಯ ದಿನಾಚರಣೆಯ ಖುಷಿಗೆ ವಿದ್ಯಾರ್ಥಿ ಬಲಿಯ ದುಖಃ ತಣ್ಣೀರೆರೆಚಿತ್ತು.. ತ್ರಿವರ್ಣ ಧ್ವಜ ಹಾರಿಸಲು ಧ್ವಜಸ್ತಂಭ ನಿಲ್ಲಿಸಲು ಹೋಗಿದ್ದ ಮೂವರಿಗೆ ವಿದ್ಯುತ್ ತಗುಲಿರೋ ಅವಘಡ ನಡೆದಿದೆ.. ತುಮಕೂರು ತಾಲ್ಲೂಕಿನ ಕರಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಬಾಗ ಘಟನೆ ನಡೆದಿದ್ದು, ಕಬ್ಬಿಣದ ಧ್ವಜಸ್ತಂಭ ವನ್ನ ನಿಲ್ಲಿಸಲು ಹೋಗಿದ್ದ ವೇಳೆ ವಿದ್ಯುತ್ ತಗುಲಿದೆ..
ಚಂದನ್, ಶಶಾಂಕ್ ಹಾಗು ಪವನ್ ಮೂವರು ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದು,16 ವರ್ಷದ ಚಂದನ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.. ಉಳಿದ ಇಬ್ಬರೂ ಗಾಯಗೊಂಡಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದನ್, ತಾತನ ಮನೆಯಾದ ಕರಿಕೆರೆ ಗ್ರಾಮದಲ್ಲಿ ವಾಸವಾಗಿದ್ದು, ಚಿಕ್ಕತೊಟ್ಲುಕೆರೆಯ ಅಟವಿ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ.. ಇನ್ನು ಕರಿಕೆರೆ ಶಾಲೆಯಲ್ಲಿ 7ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದ. ಗಾಯಗೊಂಡಿರುವ ಶಶಾಂಕ್, ಕರಿಕೆರೆ ಗ್ರಾಮದ ವಾಸಿಯಾಗಿದ್ದು, ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ..
ಇದನ್ನೂ ಓದಿ: NASA: ಕೊತಕೊತ ಕುದಿಯುತ್ತಿದೆ ಸೂರ್ಯನ ಮೇಲ್ಮೈ, ಬಹಳ ಹತ್ತಿರದಿಂದ ಸೂರ್ಯನ ವಿಡಿಯೋ ತೆಗೆದಿದೆ ನಾಸಾ.. ನೋಡಿ ಹೇಗಿದೆ !
ಈತ ಕೂಡ ಕರಿಕೆರೆ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದ.. ಗಾಯಗೊಂಡಿರುವ ಪವನ್ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದ್ದು, ತುಮಕೂರಿನ ಟ್ರ್ಯಾಕ್ಟರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ. ಈತ ಕೂಡ ಇದೇ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದ.. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನೂ ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಡಿಡಿಪಿಐ ನಂಜಪ್ಪ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮೃತ ವಿದ್ಯಾರ್ಥಿ ಕುಟುಂಬಕ್ಕೆ ಇಲಾಖೆಯಿಂದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ ಅವರು, ಗಾಯಾಳುಗಳ ಚಿಕಿತ್ಸಾ ವೆಚ್ಚ ಇಲಾಖೆ ಭರಿಸುತ್ತದೆ ಎಂದರು.. ಅವಘಡ ಕುರಿತು ಕಲುಬುರ್ಗಿಯಲ್ಲಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಹದಿನಾರು ವರ್ಷದ ಬಾಲಕ ಮೃತ ಪಟ್ಟಿದ್ದು ನನ್ನ ಮನಸಿಗೆ ನೋವು ತಂದಿದೆ, ಅವರ ಕುಟುಂಬದ ಜೊತೆ ನಾನು ಇರ್ತೇನೆ ಎಂದರು.
ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು, ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.. ಶಾಲೆ ಮುಂಭಾಗ 11kv ವಿದ್ಯುತ್ ತಂತಿ ಇದ್ದು, ಧ್ವಜಸ್ತಂಭ ದಿಂದ ಕೇವಲ ನಾಲ್ಕು ಅಡಿ ಅಂತರದಲ್ಲಿ ಧ್ವಜಸ್ತಂಭ ಇಡಲಾಗ್ತಿತ್ತು.. ಇದೇ ವೇಳೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ.. ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದ ಘಟನೆ ಸಂಭವಿಸಿದೆ ಅಂತಾ ಪೋಷಕರು ಗ್ರಾಮಸ್ಥರು ಆರೋಪಿಸಿದ್ದಾರೆ.. ಸಂಭ್ರಮದಿಂದ ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯಂದೇ ಈ ರೀತಿಯ ಅವಘಡ ನಡೆದಿರೋದು ಇಡೀ ಕುಟುಂಬಸ್ಥರಿಗೆ, ಜನರಿಗೆ ಸಾಕಷ್ಟು ನೋವು ತರಿಸಿದೆ..
ವಿದ್ಯಾರ್ಥಿ ಕಳೆದುಕೊಂಡ ಕುಟುಂಬಸ್ಥರ ರೋಧನೆ, ಆಕ್ರಂದನ ಮುಗಿಲುಮುಟ್ಟಿತ್ತು.. ಶಿಕ್ಷಕರ ಎಡವಟ್ಟಿನಿಂದಲೇ ಒಂದು ಜೀವ ಬಲಿಯಾಯ್ತ ಅನ್ನೋ ಅನುಮಾನ ಸಹ ವ್ಯಕ್ತವಾಗಿದೆ.. ಇಡೀ ಪ್ರಕರಣದ ತನಿಖೆ ನಡೆಸಿ ವಿದ್ಯಾರ್ಥಿ ಸಾವಿಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಎಲ್ಲರು ಒತ್ತಾಯಿಸಿದ್ದಾರೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ