ಯಾದಗಿರಿ: ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನೇ (Young Woman) ಪಾಗಲ್ ಪ್ರೇಮಿಯೊಬ್ಬ ಕೊಲೆಗೈದು, ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಯಾದಗಿರಿ (Yadagiri) ತಾಲೂಕಿನ ಅರಕೇರಾದ ಪಂಚಶೀಲ ನಗರದ ಜಮೀನಿನಲ್ಲಿ ನಡೆದಿದ್ದು, ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು (Police) ಆರೋಪಿಯನ್ನು ಬಂಧನ ಮಾಡಿದ್ದಾರೆ. ಮೃತ ಯುವತಿಯನ್ನು 25 ವರ್ಷದ ಅಂತಿಮಾ ವರ್ಮಾ ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ಉತ್ತರ ಪ್ರದೇಶದ (Uttar Pradesh) ಮೂಲದ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಮಾರುತಿ ರಾಠೋಡ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ಸಹೋದರನೊಂದಿಗೆ ವಾಸಿಸುತ್ತಿದ್ದ ಯುವತಿಯನ್ನು ಪ್ರೀತಿ ಪ್ರೇಮದ ಕಥೆ ಹೇಳಿ ಯಾದಗಿರಿ (Yadagiri) ತನ್ನ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ತನ್ನದೇ ಜಮೀನಿನಲ್ಲಿ ಮೃತದೇಹವನ್ನು ಸುಟ್ಟು ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
ಮಹಾರಾಷ್ಟ್ರದ ಮುಂಬೈನಲ್ಲಿ ಸಹೋದರನ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶದ ಮೂಲದ ಅಂತಿಮಾ ವರ್ಮಾಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಅಭ್ಯಾಸವಿತ್ತಂತೆ. ಇದೇ ವೇಳೆ ಅಂತಿಮಾ ವರ್ಮಾ ಮನೆ ಪಕ್ಕದಲ್ಲಿ ವಾಸವಾಗಿದ್ದ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರದ ಮೂಲದ ಮಾರುತಿ ರಾಠೋಡ್ ಜೊತೆ ಪ್ರೇಮಾಂಕುರವಾಗಿತ್ತಂತೆ. ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಹಾಗೂ ಅಂತಿಮಾ ವರ್ಮಾ ಇಬ್ಬರೂ ಎರಡು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರಂತೆ.
ಆದರೆ ಅಂತಿಮಾ ವರ್ಮಾ ಬೇರೆ ಬೇರೆ ಸ್ನೇಹಿತರ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಚಾಳಿ ಹೊಂದಿದ್ದಳಂತೆ. ಆದರೆ ಬೇರೆ ಯುವಕರೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವುದು ಪ್ರೇಮಿ ಮಾರುತಿಗೆ ಇಷ್ಟ ಆಗುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.
ಇದರ ನಡುವೆ ತಾನು ಪ್ರೀತಿ ಮಾಡುತ್ತಿರುವ ಯುವತಿ ಕೈ ಕೊಡುತ್ತಾಳೆಂದು ಶಂಕಿಸಿದ ಆರೋಪಿ, ಆಕೆಯನ್ನು ಕರೆದುಕೊಂಡು ತನ್ನ ಊರಿಗೆ ಕರೆದುಕೊಂಡು ಬಂದಿದ್ದಾನೆ. ಊರಿಗೆ ಬರುತ್ತಿದ್ದಂತೆ ಬೇರೆ ಹುಡುಗರ ಜೊತೆ ವಿಡಿಯೋ ಮಾಡುವ ವಿಚಾರ ಕುರಿತಂತೆ ಜಗಳ ಮಾಡಿದ್ದ ಎನ್ನಲಾಗಿದೆ. ಅಲ್ಲದೇ ಕೂಡಲೇ ಇಬ್ಬರು ಮದುವೆ ಆಗೋಣಾ ಅಂತ ಒತ್ತಾಯ ಮಾಡಿದ್ದನಂತೆ. ಇದಕ್ಕೆ ಒಪ್ಪದ ಕಾರಣ ಅಂತಿಮಾ ವರ್ಮಾ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಜಮೀನಿನಲ್ಲಿ ಪೆಟ್ರೋಲ್ ಹಾಕಿ ಮೃತದೇಹ ಸುಟ್ಟು ಹಾಕಿದ್ದಾನೆ.
ಪೊಲೀಸರ ದಿಕ್ಕು ತಪ್ಪಿಸಲು ಆತ್ಮಹತ್ಯೆ ನಾಟಕವಾಡಿದ್ದ ಆರೋಪಿ
ಯಾದಗಿರಿ ತಾಲೂಕಿನ ಅರಕೇರಾ ಕೆ ಗ್ರಾಮದ ಜಮೀನಿನಲ್ಲಿ ಆರೋಪಿ ಯುವತಿಯ ಮೃತದೇಹವನ್ನು ಸುಟ್ಟು ಹಾಕಿದ್ದ. ಏಪ್ರಿಲ್ 2ರಂದು ಘಟನೆ ನಡೆದಿದ್ದು, ಪ್ರಕರಣದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ ಆರೋಪಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ಒಂದು ವಿಡಿಯೋ ಮಾಡಿ ಎಸ್ಕೇಪ್ ಆಗಿದ್ದ. ವಿಡಿಯೋ ಜಾಡು ಹಿಡಿದ ಹೊರಟ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ಘಟನೆ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ