ಹುಬ್ಬಳ್ಳಿ: ಸಣ್ಣ ಪುಟ್ಟ ವಿಷಯಗಳಿಗೂ ಚಾಕುವಿನಿಂದ ಇರಿಯುವ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವ ಕೃತ್ಯಗಳು ಹುಬ್ಬಳ್ಳಿಯಲ್ಲಿ ಹೆಚ್ಚಾಗುತ್ತಿದೆ. ಇದೀಗ ಚುರುಮುರಿ (Puffed Rice) ವಿಚಾರ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿದ ಘಟನೆಯೊಂದು ವರದಿಯಾಗಿದೆ. ತಿನ್ನಲು ಚುರುಮುರಿ ಕೇಳಿದ ಅಳಿಯನಿಗೆ (Son in law) ಬೀಗರ ಮನೆಯವರಿಂದ ಹಲ್ಲೆ ನಡೆದಿದ್ದು, ಚಾಕು ಇರಿತಕ್ಕೊಳದ ಅಳಿಯ ಆಸ್ಪತ್ರೆ ಸೇರಿದ ಘಟನೆ ಹುಬ್ಬಳ್ಳಿಯ (Hubballi) ಇಂದಿರಾ ನಗರದಲ್ಲಿ (Indira Nagara) ನಡೆದಿದೆ.
ಬೆಂಗಳೂರು ಮೂಲದ ಗುರುಶಾಂತಪ್ಪ ಚಾಕು ಇರಿತಕ್ಕೊಳಗಾದ ಅಳಿಯನಾಗಿದ್ದಾನೆ. ತನ್ನ ಹೆಂಡತಿ ಮನೆಗೆ ಎರಡು ದಿನಗಳ ಹಿಂದೆ ಬಂದಿದ್ದ ಗುರುಶಾಂತಪ್ಪ, ಹೆಂಡತಿಗೆ ಚುರುಮುರಿ ಮಾಡಿಕೊಡು ಅಂತ ಕೇಳಿದ್ದ ಎನ್ನಲಾಗಿದೆ. ಈ ವೇಳೆ ನನಗೆ ಚುರುಮುರಿ ಮಾಡಿ ಕೊಡಲು ಆಗೋದಿಲ್ಲ ಅಂತ ಹೆಂಡತಿ ಹೇಳಿದ್ದಳಂತೆ. ಇದರಿಂದಾಗಿ ಗಂಡ- ಹೆಂಡತಿ ನಡುವೆ ಜಗಳ ಆರಂಭಗೊಂಡಿದೆ. ಇದರಿಂದ ಕುಪಿತಗೊಂಡ ಗುರುಶಾಂತಪ್ಪ ಕೋಪದಲ್ಲಿ ಬೀಗರಿಗೆ ಬೈದಿದ್ದಾನೆ.
ಈ ವೇಳೆ ಮಾವ ಹಾಗೂ ಅಜಯ್ ಎಂಬಾತನಿಂದ ಗುರುಶಾಂತಪ್ಪನ ಮೇಲೆ ಹಲ್ಲೆ ನಡೆದಿದೆ. ಮನಸೋಯಿಚ್ಛೆ ಥಳಿಸಿದ ಬೀಗರ ಮನೆಯವರು, ಅಳಿಯನಿಗೆ ಚಾಕುವಿನಿಂದಲೂ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಅಳಿಯ ಗುರುಶಾಂತಪ್ಪನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Crime News: ಹುಡುಗಿಯ ರೀತಿ ಮೆಸೇಜ್ ಮಾಡಿ ಕರೆಸಿ ಚಾಕುವಿನಿಂದ ಇರಿದ್ರು; ಇತ್ತ ಸ್ನೇಹಿತನಿಂದಲೇ ಅತ್ಯಾಚಾರಕ್ಕೆ ಯತ್ನ
ಕಿಡಿಗೇಡಿಗಳಿಂದ ಕಸದ ರಾಶಿಗೆ ಬೆಂಕಿ
ಕಿಡಿಗೇಡಿಗಳು ಕಸದ ರಾಶಿಗೆ ಬೆಂಕಿ ಹಚ್ಚಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕಿಮ್ಸ್ ಆಸ್ಪತ್ರೆಯ ಶವಾಗಾರದ ಹಿಂಬದಿಯಲ್ಲಿ ಘಟನೆ ನಡೆದಿದೆ. ಕಿಮ್ಸ್ ಸಿಬ್ಬಂದಿ ಕಳೆದ ಕೆಲವು ತಿಂಗಳಿನಿಂದ ಕಸ, ತ್ಯಾಜ್ಯ ವಸ್ತುಗಳನ್ನು ಹಾಕಿತ್ತು. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಬೆಂಕಿಯ ಕೆನ್ನಾಲಿಗೆ ದಿಢೀರಾಗಿ ವ್ಯಾಪಿಸಿದೆ. ಬೆಂಕಿ ವ್ಯಾಪಿಸುತ್ತಿರೋದನ್ನ ಗಮನಿಸಿದ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆ. ತಕ್ಷಣ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಮೀನು ವ್ಯಾಪಾರಿಗಳ ನಡುವೆ ಹೊಡೆದಾಟ
ಮೀನಿನ ವ್ಯಾಪಾರಸ್ಥ ಕುಟುಂಬದ ನಡುವೆ ಪರಸ್ಪರ ಹೊಡೆದಾಟವಾಗಿ, ಓರ್ವನಿಗೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿಯ ಗಣೇಶ್ ಪೇಟೆಯಲ್ಲಿ ನಡೆದಿದೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೀನಿನ ವ್ಯಾಪಾರಸ್ಥ ಯೂಸುಫ್ ಕೈರಾತಿ ಹಾಗೂ ಹನೀಫ್ ಕೈರಾತಿ ಮದ್ಯ ಆಸ್ತಿ ವಿಚಾರಕ್ಕೆ ಜಗಳವಾಗಿದೆ. ಜಗಳ ವಿಪೋಪಕ್ಕೆ ಹೋಗಿ ಹಲ್ಲೆ ಮಾಡಲಾಗಿದ್ದು, ಯೂಸುಫ್ ಕೈರಾತಿ ಎಂಬಾತನಿಗೆ ಗಾಯಗಳಾಗಿವೆ. ಹನೀಫ್ ಕೈರಾತಿ ಎಂಬಾತನಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Crime News: ಸ್ನೇಹಿತನಿಗೆ ಸಾಲ ಕೊಡಿಸಿದ್ದ ಯುವಕ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ; ಓರ್ವ ಪೊಲೀಸ್ ವಶಕ್ಕೆ
ಈ ಹಿಂದೆ ಪಾಲಿಕೆ ಆವರಣದಲ್ಲಿ ಹನೀಫ್ ಕೈರಾತಿ ವಾಹನಗಳಿಗೆ ಕಲ್ಲು ಎಸೆದಿದ್ದ. ಹನೀಫ್ ಮೇಲೆ ಪಾಲಿಕೆಯಿಂದ ದೂರು ದಾಖಲಾಗಿತ್ತು. ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಹನಿಫ್ ತಂದೆ ಅಬ್ದುಲ್ ಹಮೀದ್ ಕೈರಾತಿ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಾಗಿತ್ತು. ಮಾನಸಿಕ ಅಸ್ವಸ್ಥ ಅಂತ ಸರ್ಟಿಫಿಕೇಟ್ ತೊಗೊಂಡಿರೋ ಹನೀಫ್, ಅದೇ ನೆಪದಲ್ಲಿ ಚಾಕು ತಲವಾರಗಳನ್ನು ಇಟ್ಟುಕೊಂಡು ಜನರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಇದೀಗ ಯೂಸುಫ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ