ಕಲಬುರಗಿ: ಊಟ ಮಾಡುತ್ತಿರುವಾಗಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಆಳಂದ ತಾಲೂಕಿನ (Aland) ಭೂಸನೂರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಲಕ್ಷ್ಮಣ ಚಿಂಚನಸೂರ್ ಎಂದು ಗುರುತಿಸಲಾಗಿದೆ. ಕಬ್ಬು (Sugar Cane) ತುಂಬಿದ ಟ್ರ್ಯಾಕ್ಟರ್ (Tractor) ಮೃತ ಲಕ್ಷ್ಮಣ ಕುಳಿತು ಊಟ ಮಾಡುತ್ತಿದ್ದ ಶೆಡ್ ಮೇಲೆ ಪಲ್ಟಿಯಾದ ವೇಳೆ ದುರ್ಘಟನೆ ಸಂಭವಿಸಿದೆ. ಊಟ ಮಾಡುತ್ತಿದ್ದ ಸ್ಥಳದಲ್ಲೇ ಲಕ್ಷ್ಮಣ ಕೊನೆಯುಸಿರೆಳೆದಿದ್ದಾರೆ.
ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ನಿನ್ನೆ ರಾತ್ರಿ ಮನೆ ಶೆಡ್ನಲ್ಲಿ ಗಂಡ ಹೆಂಡತಿ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಪತಿಗೆ ಕುಡಿಯಲು ನೀರು ತರಲು ಪತ್ನಿ ಹೊರ ಬಂದಿದ್ದರು. ಈ ಸಂದರ್ಭದಲ್ಲಿ ನಿಂಬಾಳದಿಂದ ಭೂಸನೂರು ಸಕ್ಕರೆ ಕಾರ್ಖಾನೆಗೆ ಕಬ್ಬಿನ ಲೋಡ್ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇರುವ ಶೆಡ್ಗೆ ನುಗ್ಗಿ ಪಲ್ಟಿಯಾಗಿದೆ.
ಇದನ್ನೂ ಓದಿ: Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು
ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ
ಕಬ್ಬಿಣದ ಶೀಟ್ಗಳಿಂದ ನಿರ್ಮಾಣ ಮಾಡಲಾಗಿದ್ದ ತಾತ್ಕಾಲಿಕ ಶೆಡ್ ಮೇಲೆ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಲಕ್ಷ್ಮಣ ಚಿಂಚನಸೂರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶೆಡ್ ಹೊರಗಡೆ ನಿಂತಿದ್ದ ಲಕ್ಷ್ಮಣ ಚಿಂಚನಸೂರ್ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಾಯಿಂಟ್ ವೀಲ್ಹ್ನಿಂದ ಬಿದ್ದು ಯುವತಿಗೆ ಗಂಭೀರ ಗಾಯ
ಶ್ರೀರಂಗಪಟ್ಟಣದ (Srirangapatna) ರಂಗನಾಥ ಮೈದಾನದಲ್ಲಿ ರಥ ಸಪ್ತಮಿ ಅಂಗವಾಗಿ ಆಯೋಜಿಸಲಾಗಿದ್ದ ಜಾತ್ರೆಯಲ್ಲಿ (Sri Ranganaathaswaami Temple) ಜಾಯಿಂಟ್ ವೀಲ್ಹ್ನಿಂದ (Joint Wheel) ಬಿದ್ದು ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಡರಾತ್ರಿ ಘಟನೆ ನಡೆದಿದ್ದು, ಜಾಯಿಂಟ್ ವೀಲ್ಹ್ ಆಡುವಾಗ ಆಕಸ್ಮಿಕವಾಗಿ ಯುವತಿ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಯುವತಿಯ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ (Hospital) ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾತ್ರಿ ಮಲಗಿದ್ದ ವೇಳೆ ಮೂವರು ಮಕ್ಕಳನ್ನು ಸಂಪ್ಗೆ ತಳ್ಳಿ ಆತ್ಮಹತ್ಯೆಗೆ ಶರಣಾದ ತಾಯಿ
ಕೌಟುಂಬಿಕ ಕಲಹ ಹಿನ್ನಲೆ, ಮೂರು ಮಕ್ಕಳೊಂದಿಗೆ ನೀರಿನ ಸಂಪ್ ಗೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ನಡೆದಿದೆ. ಮೃತರನ್ನು ಜಾಲಗೇರಿ ಗ್ರಾಮದ ಬಳಿ ವಿಠಲವಾಡಿ ತಾಂಡಾದ ಗೀತಾ ರಾಮು ಚೌವ್ಹಾಣ (32) ಸೃಷ್ಟಿ (6) ಸಮರ್ಥ (4) ಕಿಶನ್ (3) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: HD Kumaraswamy: 'ದೇವೇಗೌಡ್ರು ಸಾಯುವ ಮುನ್ನ ಅವ್ರ ಪಕ್ಷ ಉಳಿತು ಅಂತ ಸಾಬೀತು ಮಾಡ್ಬೇಕು'- ಮಾಜಿ ಸಿಎಂ ಹೆಚ್ಡಿಕೆ ಭಾವುಕ
ನಿನ್ನೆ ರಾತ್ರಿ ಪತಿ ರಾಮು ಜೊತೆಗೆ ಜಗಳ ಮಾಡಿಕೊಂಡಿದ್ದ ಗೀತಾ, ಪತಿ ಮಲಗಿದ್ದ ವೇಳೆ ಮೂವರು ಮಕ್ಕಳನ್ನು ನೀರಿನ ಸಂಪ್ಗೆ ಎಸೆದು ಬಳಿಕ ತಾನೂ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ತಿಕೋಟಾ ಪೊಲೀಸರ ಭೇಟಿ ಪರಿಶೀಲನೆ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಆಟೋ ಪಲ್ಟಿ ಓರ್ವ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ
ಆಟೋ ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕೂಚಗಟ್ಟ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಅಕ್ರಮ್ ಪಾಶ (39) ಎಂದು ಗುರುತಿಸಲಾಗಿದೆ. ಡಾಬಸ್‌ಪೇಟೆ ಪೊಲೀಸ್ ಠಾಣ ವ್ಯಾಪ್ತಿಯ ಕೂಚಗಟ್ಟ ಕ್ರಾಸ್ ಬಳಿ ಘಟನೆ ನಡೆದಿದ್ದು, ವೇಗವಾಗಿ ಬಂದ ಆಟೋ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಆಟೋ ಚಾಲಕ ಸುರೇಶ್, ಸಹ ಪ್ರಯಾಣಿಕ ಇದಾಯತ್ ಉಲ್ಲಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ