ಚೆನ್ನೈ: ಜನರಿಗೆ ತೊಂದರೆ ಕೊಡುವವರಿಗೆ, ಪುಂಡ ಪೋಕರಿಗಳಿಗೆ ಹೊಡೆದು ಕೈಕಾಲು ಮುರಿಯಬೇಕು, ಹಲ್ಲು ಮುರಿಯಬೇಕು ಎಂದು ಬಹಳಷ್ಟು ಜನ ಹೇಳುತ್ತಿರುತ್ತಾರೆ. ಆದರೆ ತಮಿಳುನಾಡಿನಲ್ಲಿ (Tamil Nadu) ಪೊಲೀಸ್ (Police) ಅಧಿಕಾರಿಯೊಬ್ಬರು ನಿಜವಾಗಲೂ ಯುವಕರ ಹಲ್ಲುಗಳನ್ನು ಮುರಿದಿದ್ದಾರೆ. ಅಂಬಾಸಮುದ್ರಂ (Ambasamudram) ವಿಭಾಗದ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಬಲ್ವೀರ್ ಸಿಂಗ್ (Balveer Singh) ಎಂಬುವವರು 10 ಯುವಕರಿಗೆ ಕಲ್ಲಿನಿಂದ ಹೊಡೆದು ಮತ್ತು ಇಕ್ಕಳದಿಂದ ಹಲ್ಲುಗಳನ್ನು ಕಿತ್ತು ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ ಮತ್ತಿಬ್ಬರ ವೃಷಣಗಳನ್ನು ಜಜ್ಜಿ ಹಿಂಸಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಯುವಕರು ಗುಂಪು ಗಲಾಟೆ, ಸಣ್ಣ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುನಲ್ವೇಲಿ ಜಿಲ್ಲಾಧಿಕಾರಿ ಕೆಪಿ ಕಾರ್ತಿಕೇಯನ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕಮ್-ಸಬ್-ಕಲೆಕ್ಟರ್ ಅವರಿಂದ ತನಿಖೆ ನಡೆಸಲು ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
2020 ಬ್ಯಾಚ್ನ ಐಪಿಎಸ್ ಅಧಿಕಾರಿ
ಬಲ್ವೀರ್ ಸಿಂಗ್ ಬಾಂಬೆ ಐಐಟಿಯಲ್ಲಿ ಬಿಇ ಪದವಿ ಪಡೆದುಕೊಂಡಿದ್ದು, 2020ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರನ್ನು ಅಕ್ಟೋಬರ್ 15, 2022 ರಂದು ಅಂಬಾಸಮುದ್ರಕ್ಕೆ ASPಯಾಗಿ ನಿಯೋಜಿಸಲಾಗಿತ್ತು. ಕಸ್ಟಡಿಯಲ್ಲಿ ಚಿತ್ರಹಿಂಸೆಯನ್ನು ಎದುರಿಸಿರುವ 10 ಮಂದಿಯನ್ನು ಪ್ರೇಮ ಪ್ರಕರಣದ ಘರ್ಷಣೆ, ಹಣಕಾಸಿನ ವಿಚಾರ, ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದಿರುವುದು ಮತ್ತು ವೈವಾಹಿಕ ವಿವಾದದಂತಹ ಅಪರಾಧಗಳಿಂದ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.
ಪೊಲೀಸರಿಂದಲೇ ಅಸಮಾಧಾನ
ಘಟನೆ ಬಗ್ಗೆ ಸ್ವತಃ ಪೊಲೀಸ್ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. " ಯುವಕರಿಗೆ ನೀಡಿದ ಚಿತ್ರಹಿಂಸೆಯ ಸಮಯದಲ್ಲಿ ನಾವು ಸ್ಥಳದಲ್ಲಿ ಹಾಜರಿದ್ದೆವು. ಗುಪ್ತಚರ ಘಟಕದ ಪೊಲೀಸ್ ಅಧಿಕಾರಿಗಳಿಗೆ ಸಿಂಗ್ ಅವರ ವರ್ತನೆಯ ಬಗ್ಗೆ ಮೊದಲಿನಿಂದಲೂ ತಿಳಿದಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರೆ ಕೆಲವು ಯುವಕರನ್ನು ರಕ್ಷಿಸಬಹುದಿತ್ತು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೇಮ ಪ್ರಕರಣದ ಜಗಳ
ಏಟು ತಿಂದ ಸಂತ್ರಸ್ತರು ಪ್ರಕರಣ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಚೆಲ್ಲಪ್ಪ ಎಂಬುವವರು, " ನಾನು, ನನ್ನ ಸಹೋದರರು, ಮೂವರು ಸಂಬಂಧಿಕರು ಇನ್ನೊಂದು ಗುಂಪಿನೊಂದಿಗೆ ಪ್ರೇಮ ಪ್ರಕರಣದ ವಿಚಾರದಲ್ಲಿ ಜಗಳ ವಾಡಿದ್ದೆವು. ನಾವು ಆ ಗುಂಪಿನ ಸದಸ್ಯರನ್ನು ಅವರು ತಂದಿದ್ದ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರಿಗೆ ಒಪ್ಪಿಸಿದೆವು.
ಆದರೆ ಪೊಲೀಸರು ಅಂಬಾಸಮುದ್ರಂ ಪೊಲೀಸ್ ಠಾಣೆಗೆ ನಮ್ಮ ಕಡೆತ 6 ಮಂದಿ ಹಾಗೂ ನಮ್ಮ ಎದುರಾಳಿಗಳಾದ ಮೂವರನ್ನು ಕರೆದುಕೊಂಡು ಹೋದರು. ನಾವು ಹೋಗುತ್ತಿದ್ದಂತೆ ಎಎಸ್ಪಿಯ ಗನ್‌ಮ್ಯಾನ್ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಮೊದಲು ನನ್ನನ್ನು ಹಿಡಿದುಕೊಂಡರು. ಈ ವೇಳೆ ಸಿಂಗ್ ಇಕ್ಕಳದಿಂದ ನನ್ನ ಹಲ್ಲುಗಳನ್ನು ಮುರಿದರು. ನನ್ನ ಬಾಯಿಗೆ ಕಲ್ಲುಗಳನ್ನು ತುಂಬಿ ಮುಖಕ್ಕೆ ಹೊಡೆದರು" ಎಂದು ಆರೋಪಿಸಿದ್ದಾರೆ.
ವೃಷಣಕ್ಕೆ ಗುದ್ದಿ ಹಲ್ಲೆ
ನನಗೆ ಹೊಡೆದ ನಂತರ ಎಎಸ್‌ಪಿ ನನ್ನ ಸಹೋದರರು ಮತ್ತು ಸಂಬಂಧಿಕರನ್ನು ಕರೆದು ನನ್ನನ್ನು ಕುಳಿತುಕೊಳ್ಳಲು ಹೇಳಿದರು. ನಂತರ ಅವರನ್ನೂ ಹೊಡೆದು, ಇಕ್ಕಳದಿಂದ ಅವರ ಹಲ್ಲುಗಳನ್ನು ಮುರಿದರು. ನನ್ನ ಸಹೋದರರಲ್ಲಿ ಒಬ್ಬರು ಮೂರು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ನನ್ನ ಸಹೋದರ ಮರಿಯಪ್ಪನ್ನು ಹೊಡೆಯಲು ಶುರು ಮಾಡಿದರು, ನಾವು ಅವನು ಹೊಸದಾಗಿ ಮದುವೆಯಾಗಿರುವ ಕಾರಣ ನಾವು ಅವನನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡೆವು. ಆದರೆ ನಾವು ಹಾಗೆ ಹೇಳುತ್ತಿದ್ದಂತೆ, ಸಿಂಗ್ ತನ್ನ ಎಡಗೈಯಿಂದ ನನ್ನ ಸಹೋದರನ ವೃಷಣಗಳ ಮೇಲೆ ಗುದ್ದಿದರು. ನಂತರ ಅವನ ಎದೆಯ ಮೇಲೆ ಒದ್ದರು. ಈ ದಾಳಿಯಿಂದ ಮರಿಯಪ್ಪನ್ ತುಂಬಾ ಆಘಾತಕ್ಕೊಳಗಾಗಿದ್ದಾರೆ, ಅವರು ಹಾಸಿಗೆಯಿಂದ ಮೇಲೇಳಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಸಂತ್ರಸ್ತತು ನೋಡು ತೋಡಿಕೊಂಡಿದ್ದಾರೆ.
40 ಕ್ಕೂ ಹೆಚ್ಚು ಮಂದಿಗೆ ಇದೇ ಶಿಕ್ಷೆ
ಯುವಕರ ಮೇಲಿನ ದೌರ್ಜನ್ಯವನ್ನು ಖಂಡಿಸಿ ನೇತಾಜಿ ಸುಭಾಷ್ ಸೇನೆ ಮತ್ತು ಪುರಟ್ಚಿ ಭಾರತಮ್ ಸೇರಿದಂತೆ ರಾಜಕೀಯ ಸಂಘಟನೆಗಳು ಎಎಸ್‌ಪಿ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿವೆ.
ನೇತಾಜಿ ಸುಭಾಷ್ ಸೇನೆಯ ವಕೀಲ ಮಹಾರಾಜನ್ ಸಿಂಗ್ ಮಾತನಾಡಿ, ಸಿಂಗ್ ಇದುವರೆಗೆ ಸುಮಾರು 40 ಜನರ ಹಲ್ಲುಗಳನ್ನು ಇದೇ ರೀತಿ ಮುರಿದಿದ್ದಾರೆ. ಎಲ್ಲರ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ನಾನು ಇಲ್ಲಿಯವರೆಗೆ 17 ವ್ಯಕ್ತಿಗಳ ವಿವರಗಳನ್ನು ಸಂಗ್ರಹಿಸಿದ್ದೇವೆ. ಸಿಂಗ್ ಅವರನ್ನು ವಜಾಗೊಳಿಸಿ, ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ