ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಎಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತೆ ಅಂತ ಹೇಳುವುದು ಕಷ್ಟ. ಏಕೆಂದರೆ ಪುಂಡರು ಎಲ್ಲಿ ಬೇಕಿದ್ದರೂ ಮೋಜು ಮಸ್ತಿ ಮಾಡುತ್ತಾರೆ. ಸರ್ಕಾರಿ ಶಾಲೆ (Govt School) ಆದರೂ ಆಗಬಹುದು, ಆಟದ ಮೈದಾನ (Playground) ಆದರೂ ಸರಿಯೇ. ಆದರೆ ಇದೀಗ ಜನ ಓಡಾಡುವ ಸ್ಕೈವಾಕ್ ಕೂಡ ಪುಂಡರ ತಾಣ ಆಗಿದೆ. ಹೌದು, ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಣಣೆಯಲ್ಲಿ ರಸ್ತೆದಾಟುವುದು ಅಷ್ಟು ಸುಲಭದ ಮಾತಲ್ಲ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಬೇಕು ಎಂದರೆ ಮೇಲ್ಸೇತುವೆಗಳು ಅನಿವಾರ್ಯ. ಮಹಾನಗರ ಪಾಲಿಕೆ ಹಲವಾರು ಸ್ಕೈವಾಕ್ ನಿರ್ಮಿಸಿದೆ. ಇವುಗಳನ್ನು ಜನರು ಕೂಡ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಗರದ ಹೃದಯ ಭಾಗದ ಸ್ಕೈವಾಕ್ ಪರಿಸ್ಥಿತಿ ಮಾತ್ರ ಕೇಳತೀರಾದಾಗಿದೆ.
ಸ್ಕೈವಾಕ್ ಮೇಲೆ ತರಹೇವಾರಿ ತ್ಯಾಜ್ಯ, ಕಾಂಡೋಮ್!
ಮೆಜೆಸ್ಟಿಕ್ನ ಸಮೀಪದಲ್ಲೇ ಇರುವ ಕೆಜಿ ಸರ್ಕಲ್ ಬಳಿಯ ಸ್ಕೈವಾಕ್ ಸದ್ಯ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಸಂತೋಷ್ ಥಿಯೇಟರ್ ಬಳಿ ಇರುವ ಸ್ಕೈವಾಕ್ ಜನರಿಗೆ ಸದುಪಯೋಗ ಆಗಬೇಕಿತ್ತು, ಆದರೆ ಈಗ ಮೇಲ್ಸೇತುವೆ ಪುಂಡರ ಅಡ್ಡವಾಗಿ ಬದಲಾಗಿದೆ. ಇಲ್ಲಿ ಕಾಂಡೋಮ್, ಮದ್ಯದ ಬಾಟಲಿ, ವೈಟ್ನರ್, ಸಿಗರೇಟ್ ಸೇರಿದಂತೆ ಹಲವು ತ್ಯಾಜ್ಯ ವಸ್ತುಗಳು ಪತ್ತೆಯಾಗಿದೆ. ಇದರೊಂದಿಗೆ ಸ್ಕೈವಾಕ್ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಅನ್ನೋದು ಸಾಬೀತಾಗುತ್ತಿದೆ.
ಇದನ್ನೂ ಓದಿ: Akshatha Kukki Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಚೆಲುವೆ ಅಕ್ಷತಾ ಕುಕಿ!
ಓಡಾಡಲು ಅಸಹ್ಯ ಎನಿಸುತ್ತಿದೆ
ಈ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರುವ ಸಾರ್ವಜನಿಕರು, ರೋಡ್ ದಾಟಲು ಕಷ್ಟ ಅಂತ ಸ್ಕೈವಾಕ್ ನಿರ್ಮಾಣ ಮಾಡಿರುವುದು ಉತ್ತಮ ಕೆಲಸ. ಆದರೆ ಈಗ ಸ್ಕೈವಾಕ್ ತುಂಬಾ ಕೆಟ್ಟದಾಗಿದೆ. ಓಡಾಲು ಕೂಡ ಕಷ್ಟ ಆಗುತ್ತಿದೆ. ನೋಡಲು ಕೂಡ ಅಸಹ್ಯವಾಗುವ ರೀತಿ ಇದೆ. ಬೆಂಗಳೂರು ಹೈಟೆಕ್ ಸಿಟಿ, ನಗರದ ಹೃದಯ ಭಾಗದಲ್ಲೇ ಈ ರೀತಿ ಆದರೆ ಹೇಗೆ? ಬಿಯರ್ ಬಾಟೆಲ್, ಬಟ್ಟೆ ನೋಡಿ ಹೇಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯ ಸಮೀಪವೇ ಸ್ಕೈವಾಕ್
ಪಾಲಿಕೆಯಿಂದ ನಿರ್ಮಾಣವಾಗಿರುವ ಈ ಸ್ಕೈವಾಕ್ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಸ್ಕೈವಾಕ್ ಮೇಲೆ ಗಿಡ ಬಳ್ಳಿಗಳು ಬೆಳೆದುಕೊಂಡಿವೆ. ಗೋಡೆಗಳು ಕಿತ್ತು ಬಂದಿವೆ. ಬಿರುಕು ಬಿಟ್ಟು ಕುಸಿಯುವ ಆತಂಕದಲ್ಲಿದೆ. ಕೇವಲ ಜಾಹೀರಾತು ಪ್ರದರ್ಶನಕ್ಕೆ ಮಾತ್ರ ಈ ಸ್ಕೈ ವಾಕ್ ಬಳಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಅನೈತಿಕ ವಿಚಾರದ ಬಗ್ಗೆ ಪಾಲಿಕೆ ಗಮನ ಸೆಳೆದ ಬಳಿಕ ನಾಳೆಯೇ ಪರಿಶೀಲನೆ ಮಾಡುತ್ತೇವೆ, ಎಲ್ಲಾ ಸಮಸ್ಯೆಗಳಿಗೂ ಕ್ರಮ ಕೈಗೊಳ್ತೇವೆ ಎಂದಿದ್ದಾರೆ ಎಂದು ಬಿಬಿಎಂಪಿ ಸ್ಪೆಷಲ್ ಕಮಿಷನರ್ ರವೀಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.
ಇಂತಹ ದುಸ್ಥಿತಿಯಲ್ಲಿರೋ ಈ ಮೇಲ್ಸೇತುವೆ ಮೇಲೆ ಹತ್ತೋಕೆ ಮಹಿಳೆಯರು, ಮಕ್ಕಳ ಭಯ ಪಡೋ ಸ್ಥಿತಿಯಿದೆ. ಹತ್ತಿರದಲ್ಲೇ ಉಪ್ಪಾರಪೇಟೆ ಪೋಲಿಸ್ ಠಾಣೆ ಇದ್ದರೂ ಇಲ್ಲಿ ಅನೈತಿಕ ಚಟುವಟಿಕೆ ಹೇಗೆ ಸಾಧ್ಯ ಅನ್ನೊದು ಪ್ರಶ್ನೆಯಾಗಿದೆ. ಆದಷ್ಟು ಶೀಘ್ರ ಸಮಸ್ಯೆಗೆ ಮುಕ್ತಿ ಸಿಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ