ಇತ್ತೀಚಿಗೆ ದೆಹಲಿಯಲ್ಲಿ (Delhi) ನಡೆದ ಶ್ರದ್ಧಾ ವಾಕರ್ (Shraddha Walkar ) ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಇದೀಗ ಇಂಥದ್ದೇ ಮತ್ತೆರಡು ಪ್ರಕರಣಗಳು ನಡೆದಿದ್ದು, ಜನಸಾಮಾನ್ಯರಲ್ಲಿ ಆಘಾತ ಮೂಡಿಸಿದೆ. ಶ್ರದ್ಧಾ ಹೊರತುಪಡಿಸಿ ನಿಕ್ಕಿ ಯಾದವ್ (Nikki Yadav) ಹಾಗೂ ಮೇಘಾ ತೋರ್ವಿ (Megha Thorvi ) ಎಂಬಿಬ್ಬರೂ ತಮ್ಮ ಸಂಗಾತಿಗಳಿಂದಲೇ ಕೊಲೆಯಾಗಿದ್ದಾರೆ ಎನ್ನುವುದು ಇನ್ನೂ ಆಘಾತಕಾರಿ. ಹೌದು, ದೆಹಲಿಯಲ್ಲಿ ನಿಕ್ಕಿ ಯಾದವ್ ತನ್ನ ಲಿವ್‌ಇನ್ ಸಂಗಾತಿಯಿಂದಲೇ ಕೊಲೆಯಾಗಿದ್ದಾರೆ. 23 ವರ್ಷದ ನಿಕ್ಕಿ 24 ವರ್ಷದ ಸಾಹಿಲ್ ಗೆಲ್ಹೋಟ್ ಎಂಬುವವನೊಂದಿಗೆ ಲಿವ್‌ಇನ್ ರಿಲೇಶನ್‌ಶಿಪ್ ನಲ್ಲಿದ್ದಳು (Live in Relationship). ನೈಋತ್ಯ ದೆಹಲಿಯ ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್, ನಿಕ್ಕಿಯನ್ನು ಕತ್ತು ಹಿಸುಕಿ ಕೊಂದು ಆಕೆಯ ಮೃತದೇಹವನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಿಕ್ಕಿ ಯಾದವ್ ಮರ್ಡರ್ ಕೇಸ್
ಫೆಬ್ರವರಿ 14 ರಂದು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಸಾಹಿಲ್ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದು, ಈ ವಿಷಯವನ್ನು ನಿಕ್ಕಿಯಿಂದ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಆದರೆ ವಿಷಯ ತಿಳಿದ ನಿಕ್ಕಿ ಸಾಹಿಲ್ ಜೊತೆ ಜಗಳವಾಡಿದ್ದಾಳೆ. ಇದು ಕೊಲೆಗೆ ಕಾರಣವಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಫೆಬ್ರವರಿ 9 ಮತ್ತು 10 ರ ಮಧ್ಯರಾತ್ರಿ ಸಂತ್ರಸ್ತೆ ತನ್ನ ಮದುವೆಯ ಬಗ್ಗೆ ಆರೋಪಿಯನ್ನು ಪ್ರಶ್ನಿಸಿದಾಗ ಕೊಲೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಗಳದ ನಂತರ ಸಾಹಿಲ್ ನಿಕ್ಕಿಯನ್ನು ಕೊಂದು ರೆಸ್ಟೋರೆಂಟ್ನ ಫ್ರಿಡ್ಜ್ ನಲ್ಲಿಟ್ಟಿದ್ದ. ಅಪರಾಧ ನಡೆದ ದಿನದಿಂದ ರೆಸ್ಟೋರೆಂಟ್ಗೆ ಬೀಗ ಹಾಕಿದ್ದರು. ಆರೋಪಿಯ ರೆಸ್ಟೋರೆಂಟ್ನಲ್ಲಿ ಪೊಲೀಸರು ಪರಿಶೀಲನೆ ನಡೆಸಲಾಗಿ ಕೃತ್ಯ ಬೆಳಕಿಗೆ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಸಾಹಿಲ್ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ನಿಕ್ಕಿ ಆತನನ್ನು ಮದುವೆಯಾಗಬೇಕೆಂದು ಬಯಸಿದ್ದರು.
ಇದನ್ನೂ ಓದಿ: Acid Attack: ಅಪ್ರಾಪ್ತೆ ಮೇಲೆ ಆ್ಯಸಿಡ್ ಎರಚಿದ ಪಾಗಲ್ ಪ್ರೇಮಿ, ಪ್ರೀತ್ಸೇ ಅಂತ ಪ್ರಾಣ ತಿನ್ನುತ್ತಿದ್ದವನಿಂದ ಪಾಪದ ಕೃತ್ಯ!
ಮೇಘಾ ತೋರ್ವಿ ಕೊಲೆ ಪ್ರಕರಣ
ಸೋಮವಾರ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾ ಪಟ್ಟಣದ ಫ್ಲಾಟ್‌ನಲ್ಲಿ ಮೇಘಾ ಥೋರ್ವಿ ಎಂದು ಗುರುತಿಸಲಾದ ಮಹಿಳೆಯ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಧ್ಯಪ್ರದೇಶದ ನಗ್ಡಾದಿಂದ ಹರಿದ್ವಾರಕ್ಕೆ ಪರಾರಿಯಾಗುತ್ತಿದ್ದ ಆಕೆಯ ಪತಿ 27 ವರ್ಷದ ಹಾರ್ದಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 11 ರಂದು ಗಂಡ ಹೆಂತಿಯ ನಡುವೆ ಹಣಕ್ಕಾಗಿ ಕಿತ್ತಾಟ ಆರಂಭವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿದೆ. ಶನಿವಾರದಂದು ಜಗಳ ನಡೆದಿದ್ದು, ಹಾರ್ದಿಕ್ ಮೇಘಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಹಾಸಿಗೆಯಲ್ಲಿ ಬಚ್ಚಿಟ್ಟಿದ್ದಾನೆ. ನಂತರ ಪರಾರಿಯಾಗಲು ಹಣದ ಅಗತ್ಯವಿದ್ದಾಗ ಕೆಲವು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಮೃತದೇಹದಿಂದ ಬರುತ್ತಿದ್ದ ವಾಸನೆಯನ್ನು ತಡೆಯಲು ಅಗರಬತ್ತಿ ಹಚ್ಚುತ್ತಿದ್ದ ಎಂದು ಹೇಳಲಾಗಿದೆ.
ಅಂದಹಾಗೆ ಹಾರ್ದಿಕ್ ಹಾಗೂ ಮೇಘಾ ಕಳೆದ ಮೂರು ವರ್ಷಗಳ ಹಿಂದೆ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು. ನಂತರ ಕಳೆದ ಆಗಸ್ಟ್ ನಲ್ಲಿ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿದಿದ್ದಾರೆ. ನಿರುದ್ಯೋಗಿಯಾಗಿದ್ದ ಹಾರ್ದಿಕ್ ಲಾಕ್‌ಡೌನ್ ಸಮಯದಲ್ಲಿ ಕಾಲ್-ಡೇಟಾ-ರೆಕಾರ್ಡ್ ವಿಶ್ಲೇಷಕನಾಗಿ ಕೆಲಸ ಮಾಡಿದ್ದ. ಆದರೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮೇಘಾ ಕೆಲಸವನ್ನು ತೊರೆದಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!
ಶ್ರದ್ಧಾ ವಾಕರ್ ಕೊಲೆ ಪ್ರಕರಣ
ಮೇ 18, 2022 ರಂದು, ಅಫ್ತಾಬ್ ಪೂನಾವಾಲಾ ತನ್ನ ಲಿವ್‌ಇನ್ ಪಾರ್ಟ್‌ನರ್ ಶ್ರದ್ಧಾ ವಾಕರ್‌ನನ್ನು ಕೊಂದಿದ್ದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ವಿಲೇವಾರಿ ಮಾಡಲು ಯತ್ನಿಸಿದ್ದ ಎಂಬುದನ್ನು ಕೇಳಿ ಇಡೀ ದೇಶ ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ.
6,629 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಅಫ್ತಾಬ್ ಸಂತ್ರಸ್ತೆಯನ್ನು ಹೇಗೆ ಕೊಂದಿದ್ದ ಮತ್ತು ಆಕೆಯ ದೇಹವನ್ನು ವಿಲೇವಾರಿ ಮಾಡಲು ಏನು ಮಾಡಿದ ಎಂಬುದನ್ನು ವಿವರಿಸಿದ್ದಾರೆ. ಆರೋಪಿ ಅಫ್ತಾಬ್ ದುಬೈನಲ್ಲಿ ಒಬ್ಬಳು ಸೇರಿದಂತೆ ಹಲವಾರು ಮಹಿಳೆಯರೊಂದಿಗೆ ಸ್ನೇಹ ಹೊಂದಿದ್ದ. ಇದನ್ನು ಶ್ರದ್ಧಾ ವಾಕರ್ ಪ್ರಶ್ನಿಸಿದ ನಂತರ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಕೊನೆಗೆ ಅಫ್ತಾಬ್ ಶ್ರದ್ಧಾಳನ್ನು ಕೊಂದಿದ್ದಾನೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.
ಶ್ರದ್ಧಾಳನ್ನು ಕೊಂದ ಬಳಿಕ ಅಫ್ತಾಬ್ ಗರಗಸ ಹಾಗೂ ಬ್ಲೇಡ್‌ನಿಂದ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದಾನೆ. ನಂತರ ಹಲವು ಮಹಿಳೆಯರೊಂದಿಗೆ ಸ್ನೇಹ ಬೆಳೆಸಿದ ಆತ ಅವರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ಎನ್ನಲಾಗಿದೆ. ಹೀಗೆ ಬೇರೆಯವರನ್ನು ಮನೆಗೆ ಕರೆತಂದಾಗಿ ಶ್ರದ್ಧಾ ದೇಹದ ಭಾಗಗಳನ್ನು ಫ್ರಿಡ್ಜ್ ನಿಂದ ತೆಗೆದು ಕಿಚನ್ ಕ್ಯಾಬಿನೆಟ್‌ನಲ್ಲಿಟ್ಟು ಫ್ರಿಡ್ಜ್ ಕ್ಲೀನ್ ಮಾಡುತ್ತಿದ್ದ. ನಂತರ ಅವರು ಹೊರಟುಹೋದ ಬಳಿಕ ಮತ್ತೆ ಅದನ್ನು ಫ್ರಿಡ್ಜ್ ನಲ್ಲಿಡುತ್ತಿದ್ದ ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಾರೆ, ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಗುರುತು ಪರಿಚಯವಿಲ್ಲದವರ ಜೊತೆ ಲಿವ್‌ಇನ್ ರಿಲೇಶನ್‌ಶಿಪ್ ನಲ್ಲಿದ್ದ ಈ ಮೂವರು ಮಹಿಳೆಯರು ಕ್ರೂರವಾಗಿ ಕೊಲೆಯಾಗಿದ್ದು ಮಾತ್ರ ದುರಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ