ಪಾಲಕ್ಕಾಡ್: ಆನ್‌ಲೈನ್ ಗೇಮ್ಗಳು (Online Game) ಇತ್ತೀಚಿನ ದಿನಗಳಲ್ಲಿ ಚಟವಾಗಿ ಪರಿಣಮಿಸುತ್ತಿವೆ. ಫ್ಯಾಂಟಿಸಿ ಗೇಮ್, ಆನ್‌ಲೈನ್ ರಮ್ಮಿ(Online Rummy) ಅಂತಹ ಆಟಗಳಲ್ಲಿ ದುಡ್ಡು ಗೆಲ್ಲಬಹುದು ಎಂಬ ಆಸೆಯಿಂದ ಅದೆಷ್ಟೋ ಮಧ್ಯಮ ವರ್ಗದ ಯುವಕರು ಹಣವನ್ನುಕಳೆದುಕೊಳ್ಳುತ್ತಿದ್ದಾರೆ. ಅದನ್ನು ಕೆಲವರು ಚಟವಾಗಿದ್ದು ಸಾಲವನ್ನು ಮಾಡಿ ಆಡುವ ಮಟ್ಟಕ್ಕೆ ಬೆಳಸಿಕೊಳ್ಳುತ್ತಿದ್ದಾರೆ. ಕೇರಳದ ಯುವಕನೊಬ್ಬ ಆನ್‌ಲೈನ್ ರಮ್ಮಿಯನ್ನು ಚಟವಾಗಿಸಿಕೊಂಡು, 18 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದ, ಇದೀಗ ಸಾಲಕ್ಕೆ ಹೆದರಿ ಕೊನೆಗೆ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಈತನಿಗೆ ಇಬ್ಬರು ಮಕ್ಕಳಿದ್ದು, ಆ ಜವಾಬ್ದಾರಿಯ ಹೊರೆಯನ್ನು ಹೆಂಡತಿ ಹೊರುವಂತೆ ಮಾಡಿದ್ದಾನೆ.
ಕೇರಳಾದ ಕೊಲ್ಲಂಗೋಡ್ ನಿವಾಸಿ ಗಿರೀಶ್ ಎಂಬಾತ ಸಾಲ ಮಾಡಿ ಆನ್‌ಲೈನ್ ರಮ್ಮಿ ಆಡಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ಇದೀಗ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್‌ಲೈನ್ ರಮ್ಮಿಯಿಂದ ಗಿರೀಶ್ ಸುಮಾರ 18ರಿಂದ 20 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಜೊತೆಗೆ ತಮ್ಮ 25 ಪವನ್ ಚಿನ್ನವನ್ನು ಮಾರಿ ಬಂದ ಹಣವನ್ನು ರಮ್ಮಿಆಡುವುದಕ್ಕೆ ಬಳಸಿಕೊಂಡಿದರು ಎಂದು ಗಿರೀಶ್ ಪತ್ನಿ ವೈಶಾಖ ಹೇಳಿದ್ದಾರೆ.
ಹಲವು ಬಾರಿ ಬೆದರಿಕೆ
ಸಾಲ ಮಾಡಿಕೊಂಡಿದ್ದ ಗಿರೀಶ್ ಹೆಂಡತಿಯೊಡನೆ ರಮ್ಮಿ ಆಡುವ ವಿಚಾರಕ್ಕೆ ಹಲವು ಜಗಳ ಮಾಡುತ್ತಿದ್ದ. ಜಗಳವಾದಾಗಲೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಿರೀಶ್ ಬೆದರಿಸುತ್ತಿದ್ದನಂತೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಹೀಗೆ ಮಾಡುತ್ತೇನೆ ಎಂದುಕೊಂಡಿರಲಿಲ್ಲ ಎಂದು ವೈಶಾಖ ಹೇಳಿದ್ದಾರೆ. ಇನ್ನೂ ರಮ್ಮಿ ಆಟವಾಡಲು ಹಣಕ್ಕಾಗಿ ತನಗೆ ಥಳಿಸುತ್ತಿದ್ದರು ಎಂದೂ ಆಕೆ ಹೇಳಿಕೊಂಡಿದ್ದಾಳೆ.
ಕೋವಿಡ್ ಸಂದರ್ಭದಲ್ಲಿ ಆರಂಭ
ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ ಏಕಾಂಗಿಯಾದ್ದಾಗ ಗಿರೀಶ್ ಆನ್ಲೈನ್ನಲ್ಲಿ ರಮ್ಮಿ ಆಡಲು ಆರಂಭಿಸಿದ್ದ. ಮೊದಮೊದಲು ಸುಮ್ಮನೇ ಟೈಂಪಾಸ್ ಮಾಡಲು ಆಡುತ್ತಿರುವೆ ಎಂದು ಹೇಳುತ್ತಿದ್ದ. ಆದರೆ ದಿನ ಕಳೆದಂತೆ ಅದನ್ನು ಚಟವಾಗಿ ಬೆಳಸಿಕೊಂಡ. ತನ್ನ ಸಂಪೂರ್ಣ ಸಂಬಳವನ್ನು ರಮ್ಮಿ ಆಡುವುದಕ್ಕೆ ಬಳಸಿಕೊಳ್ಳುತ್ತಿದ್ದ. ಸಂಬಳದ ಹಣ ಸೋತ ಮೇಲೆ ನನ್ನ ಚಿನ್ನವನ್ನು ಕದ್ದು ಮಾರಾಟ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಕುಡಿತದ ಚಟ
ರಮ್ಮಿ ಆಟದಲ್ಲಿ ಹಣ ಕಳೆದುಕೊಳ್ಳುತ್ತಾ ಹೋದಂತೆ ಗಿರೀಶ್ ಮದ್ಯ ಸೇವನೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಇದರಿಂದ ಸಾಲದ ಪ್ರಮಾಣ ಹೆಚ್ಚಾಗಿದೆ. ಈ ಚಟವನ್ನು ಬಿಡಿ ಎಂದು ಹಲವು ಬಾರಿ ಪತ್ನಿ ಮನವಿ ಮಾಡಿಕೊಂಡರೂ, ಆಕೆಯ ಮಾತನ್ನು ಕೇಳದೆ ಥಳಿಸುತ್ತಿದ್ದನಂತೆ. ಮೈತುಂಬ ಸಾಲ ಮಾಡಿಕೊಂಡಿದ್ದ ಆತನ ಕೊನೆಗೆ ಸಾಲಗಾರರ ಕಿರುಕುಳ ಸಹಿಸಲಾರದೇ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ.
ಮನೆಬಿಟ್ಟು ಹೋಗಿದ್ದ ಪತ್ನಿ
ಆನ್‌ಲೈನ್ ರಮ್ಮಿ ಆಟಕ್ಕೆ ಸಂಬಂಧಿಸಿದಂತೆ ಗಿರೀಶ್‌ನೊಂದಿಗೆ ಪತ್ನಿ ವಿಶಾಖ ನಿರಂತರವಾಗಿ ಜಗಳ ನಡೆಯುತ್ತಿತ್ತು. ಜಗಳವಾಡಿದರೂ ಗಿರೀಶ್ ಆಟ ನಿಲ್ಲಿಸದ ಕಾರಣ ಆಕೆ ತ್ರಿಶೂರಿನ ಮಡಕ್ಕತಾರಾದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದಾರೆ. ಎರಡು ದಿನಗಳಿಂದ ಗಿರೀಶ್ ಕಾಣದ ಹಿನ್ನೆಲೆಯಲ್ಲಿ ಆತನ ತಂದೆಯ ಅಣ್ಣನ ಮಗ ಮೋಹನ್ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿದೆ. ಬಾಗಿಲು ಒದ್ದು ತೆರೆದು ನೋಡಿದಾಗ ಗಿರೀಶ್ ರೂಮ್ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಗಿರೀಶ್ ತ್ರಿಶೂರ್‌ನ ಚುರುತುರ್ಥಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಲ್ಯಾಬ್ ಇನ್ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಆನ್‌ಲೈನ್ ಚಟಕ್ಕೆ ಬಲಿಯಾಗಿದ್ದಾರೆ. ಈತನ ಸಾವಿನಿಂದ ಇಬ್ಬರು ಮಕ್ಕಳ ಜವಾಬ್ದಾರಿ ಹೆಣ್ಣುಮಗಳ ಮೇಲೆ ಬಿದ್ದಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಎಳವಂಚೇರಿ ಅನಿಲ ಚಿತಾಗಾರದಲ್ಲಿ ಶವ ಸಂಸ್ಕಾರ ನಡೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ