ಬೆಂಗಳೂರು: ರಾಜಧಾನಿಯಲ್ಲಿ ಶಂಕಿತ ಉಗ್ರನೋರ್ವನನ್ನು (Suspected Terror) ಐಎಸ್ಡಿ ಮತ್ತು ಎನ್ಐಎ ಅಧಿಕಾರಿಗಳು ವಶಕ್ಕೆ (ISD And NIA Team) ಪಡೆದುಕೊಂಡಿದ್ದಾರೆ. ಆರಿಫ್ ಎಂಬಾತನೇ ಶಂಕಿತ ಉಗ್ರನಾಗಿದ್ದು, ಈತ ನಗರದಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಬೆಂಗಳೂರಿನ ಥಣಿಸಂದ್ರದಲ್ಲಿ (Thanisandra, Bengaluru) ವಾಸಾವಾಗಿದ್ದ ಶಂಕಿತ ಉಗ್ರ, ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿ ಆರಿಫ್ ವಾಸವಾಗಿದ್ದನು. ಶಂಕಿತ ಉಗ್ರ ಐಸಿಸ್ ಜೊತೆ ನಿರಂತರ ಸಂಪರ್ಕದಲ್ಲಿ ಇರೋದರ ಬಗ್ಗೆ ಐಎಸ್ಡಿ (Internal Security Department -ISD) ಮಾಹಿತಿ ಕಲೆ ಹಾಕಿತ್ತು. ನಂತರ ಈತನ ಬಗ್ಗೆ ಎನ್ಐಎ (National Investigation Agency) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಐಎಸ್ಡಿ ಹಾಗೂ ಎನ್ಐಎ ಜಂಟಿಯಾಗಿ ಶಂಕಿತ ಉಗ್ರ ಆರೀಫ್ ಮೇಲೆ ಕಣ್ಣಿಟ್ಟಿತ್ತು. ಆರಿಫ್ ಐಸಿಸ್ಗೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಐಎಸ್ಡಿ ಹಾಗೂ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರನನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಆರಿಫ್ ಬಳಿಯ ಲ್ಯಾಪ್ಟ್ಯಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಎರಡು ವರ್ಷದಿಂದ ವರ್ಕ್ ಫ್ರಂ ಹೋಮ್
ಬಂಧಿತ ಆರಿಫ್ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು? ಈತ ಎಲ್ಲಿಯವನು? ಥಣಿಸಂದ್ರದಲ್ಲಿ ಎಷ್ಟು ದಿನಗಳಿಂದ ಕೆಲಸ ಮಾಡುತ್ತಿದ್ದನು ಎಂಬುದರ ಬಗ್ಗೆ ಎನ್ಐಎ ಮತ್ತು ಐಎಸ್ಡಿ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕುತ್ತಿದೆ. ಕಳೆದ ಎರಡು ವರ್ಷಗಳಿಂದ ಆರಿಫ್ ವರ್ಕ್ ಫ್ರಂ ಹೋಮ್ ಕೆಲಸ ಮಾಡಿಕೊಂಡಿದ್ದನು.
ಅಲ್ಖೈದಾ ಜೊತೆ ಸಂಪರ್ಕದ ಶಂಕೆ?
ಇನ್ನು ಶಂಕಿತ ಉಗ್ರ ಒಮ್ಮೆ ಸಿರಿಯಾಗೆ ಸಹ ಭೇಟಿಯಾಗಿದ್ದನು. ಅಲ್ಲದೇ ಅಲ್ಖೈದಾ ಜೊತೆ ಎರಡು ವರ್ಷಗಳಿಂದ ಆರಿಫ್ ಸಂಪರ್ಕದಲ್ಲಿದ್ದನು ಎಂಬ ಮಾಹಿತಿ ಲಭ್ಯವಾಗಲಿದೆ.
ಬಹುಶ ನಗರದಲ್ಲಿ ಇದ್ದುಕೊಂಡು ಟೆರರ್ ಗ್ರೂಪ್ಗೆ ಕೆಲವರನ್ನು ಸೆಳೆಯೋ ಕೆಲಸ ಮಾಡುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇಡೀ ವಾರ ಮನೆಯಲ್ಲಿಯೇ ಇರುತ್ತಿದ್ದ ಆರಿಫ್, ವೀಕೆಂಡ್ನಲ್ಲಿ ಮಾತ್ರ ಕೆಲವರನ್ನು ಭೇಟಿಯಾಗಲು ತೆರಳುತ್ತಿದ್ದ ಎನ್ನಲಾಗಿದೆ.
ಬ್ಯಾಂಕ್ ನೋಟಿಸ್ಗೆ ಹೆದರಿ ರೈತ ಸೂಸೈಡ್!
ಬ್ಯಾಂಕ್ ನೋಟಿಸ್ಗೆ ಹೆದರಿ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಕನಕಪುರ ತಾಲೂಕಿನ ಬೆಂಡಗೋಡು ಗ್ರಾಮದಲ್ಲಿ ನಡೆದಿದೆ.
80 ವರ್ಷದ ರಾಮನಾಯ್ಕ್ ನೇಣಿಗೆ ಶರಣಾದ ರೈತನಾಗಿದ್ದಾನೆ. ಮೃತ ರೈತ ಕಳೆದ 5 ವರ್ಷದ ಹಿಂದೆ ದೊಡ್ಡ ಆಲಹಳ್ಳಿಯ ಯುಕೋ ಬ್ಯಾಂಕ್ನಲ್ಲಿ ಬೆಳೆ ಸಾಲ ಮಾಡಿಕೊಂಡಿದ್ದರು.+
ಬ್ಯಾಂಕ್ನಿಂದ ನೋಟಿಸ್
ಏಕಾಏಕಿ ಬ್ಯಾಂಕ್ನಿಂದ ಸಾಲ ತೀರಿಸುವಂತೆ ನೋಟಿಸ್ ಕಳುಹಿಸಿತ್ತಂತೆ. ಇದರಿಂದ ಕಂಗೆಟ್ಟ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!
ಧಗಧಗಿಸಿದ ಕಾರ್, ಇಬ್ಬರು ಬಚಾವ್
ಚಲಿಸುತ್ತಿದ್ದ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕಾರ್ನಲ್ಲಿದ್ದ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಪೇಟೆಯಿಂದ ಕಿನ್ನಾಳ್ ಗ್ರಾಮಕ್ಕೆ ಹೊರಟಿದ್ದ ಡಸ್ಟರ್ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕ್ಷೀರಭಾಗ್ಯ ಬದಲು ಶೀಲಭಾಗ್ಯ ಎಂದ ಜಮೀರ್
ಕಲಬುರಗಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ನಗರದ ಶ್ರೀ ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯರ ಭಾಗ್ಯಗಳನ್ನ ಸ್ಮರಿಸುವಾಗ ಜಮೀರ್ ಅಹ್ಮದ್ ಕ್ಷೀರಭಾಗ್ಯ ಅನ್ನುವ ಬದಲು ಶೀಲಭಾಗ್ಯ ನೀಡಿದ ಸಿದ್ದರಾಮಯ್ಯ ಎಂದು ಎಡವಟ್ಟು ಮಾಡಿಕೊಂಡಿದ್ದಾರೆ. ಜಮೀರ್ ಎಡವಟ್ಟು ಭಾಷಣಕ್ಕೆ ಮುಖಂಡರು ಹಾಗೂ ಕಾರ್ಯಕರ್ತರ ಕಕ್ಕಾಬಿಕ್ಕಿಯಾಗಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ