ಆಂಧ್ರಪ್ರದೇಶ: ಮಕ್ಕಳಾಗಲಿಲ್ಲ (Children) ಎಂಬ ಕಾರಣಕ್ಕೆ ಪತ್ನಿ ಮನೆಬಿಟ್ಟು ತವರಿಗೆ ಹೋದ ಹಿನ್ನೆಲೆ ಗಂಡ (Husband) ಮತ್ತು ಅತ್ತೆ (Mother in Law) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೇಮುಲವಾಡ (Vemulawada) ಗ್ರಾಮಾಂತರ ಮಂಡಲದ ಚೆಕ್ಪಲ್ಲಿ ಗ್ರಾಮದಲ್ಲಿ ನಡೆದಿದೆ. ಅತ್ತೆ ಕೊಂಡವೇಣಿ ಮಲ್ಲವ್ವ (51) ಮತ್ತು ಪತಿ ಕೊಂಡವೇಣಿ ಕನಕಯ್ಯ (33) ಮೃತ ದುರ್ದೈವಿಗಳು. ಮನೆಯಲ್ಲಿದ್ದ ತೊಲೆಗೆ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಮೃತ ಮಹಿಳೆಯ ಪತಿ ದೇವಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವೇಮುಲವಾಡ ಗ್ರಾಮಾಂತರ ಎಸ್ಐ ನಾಗರಾಜು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ದೇವಯ್ಯ ಕುರಿ ಮೇಯಿಸಲು ಹೋಗಿ, ಸಂಜೆ 6 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗಿದ್ದಾರೆ. ಈ ವೇಳೆ ಮನೆಯ ಮುಂಬಾಗಿಲು ಮುಚ್ಚಿರುವುದನ್ನು ಕಂಡು ಹಿಂಬಾಗಿಲ ಮೂಲಕ ಹೋಗಿ ನೋಡಿದಾಗ ಪತ್ನಿ ಹಾಗೂ ಮಗ ಸೀರೆಯಿಂದ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.
ಜಿಗುಪ್ಸೆಯಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಅಪ್ಪನ ಅಳಲು
ಈ ಮುನ್ನ ಮಗ ಕನಕಯ್ಯನಿಗೆ ಮಕ್ಕಳಾಗಿರಲಿಲ್ಲ ಎಂದು ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ಮಕ್ಕಳಾಗುವ ಸಾಧ್ಯತೆ ಇಲ್ಲದ ಕಾರಣ ಸೊಸೆ ತವರು ಮನೆಗೆ ಹೋಗಿದ್ದಳು. ಇದರಿಂದ ಮನನೊಂದು ನನ್ನ ಪತ್ನಿ ಹಾಗೂ ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೀವನದ ಮೇಲೆ ಜಿಗುಪ್ಸೆಗೊಂಡು ನನ್ನ ಮಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೇವಯ್ಯ ದೂರಿದ್ದಾರೆ.
ಹಬ್ಬದ ದಿನವೇ ತಾಯಿ, ಮಗ ಆತ್ಮಹತ್ಯೆ
ಹಬ್ಬದ ದಿನವೇ ತಾಯಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಗ್ರಾಮದಲ್ಲಿ ದುರಂತ ಸಂಭವಿಸಿದೆ. ಇದೀಗ ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ, ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಕ್ಷಣಾರ್ಧದಲ್ಲಿ ತೆಗೆದುಕೊಳ್ಳುವ ನಿರ್ಧಾರ ಸರಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಎಲ್ಲರೂ ವ್ಯಥೆ ಪಡುತ್ತಿದ್ದಾರೆ ಎಂದೇ ಹೇಳಬಹುದು. ತಾಯಿ ಮತ್ತು ಮಗ ಏಕಕಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ದುಃಖದಲ್ಲಿ ಮುಳುಗಿದ್ದಾರೆ.
ನನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಆರೋಪಿಸಿ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ
ಇತ್ತೀಚೆಗಷ್ಟೇ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಪತ್ನಿ, ಚಿಕ್ಕಮ್ಮ, ಚಿಕ್ಕಪ್ಪ, ಸೋದರ ಮಾವ ಮತ್ತು ಶ್ರವಣ್ ಎಂಬಾತನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮನೆಯ ಗೋಡೆಗಳ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಿಂದ ಕಾಮರೆಡ್ಡಿ ಜಿಲ್ಲೆಯ ಜನರು ತೀವ್ರ ಆಘಾತಕ್ಕೊಳಗಾಗಿದ್ದರು.
ಇದನ್ನೂ ಓದಿ: Crime News: ನನ್ನ ಸಾವಿಗೆ ಪತ್ನಿಯೇ ಕಾರಣ, ನಂಗೆ ನ್ಯಾಯ ಕೊಡಿಸಿ; ಗೋಡೆ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡ ಪತಿ!
ಆತ್ಮಹತ್ಯೆಗೊಳಗಾದ ವ್ಯಕ್ತಿಯನ್ನು ನಕ್ಕಮೂತಿ ಹನ್ಮಂಡ್ಲು (36) ಎಂದು ಗುರುತಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಕಾಮರೆಡ್ಡಿ ಜಿಲ್ಲೆಯ ಬಿಚ್ಕುಂದ ಮಂಡಲ ಕೇಂದ್ರದ ನಕ್ಕಮೂತಿ ಹನ್ಮಂಡ್ಲು (36) ಮತ್ತು ಜ್ಯೋತಿ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತ್ನಿ ಜ್ಯೋತಿ ಹಾಗೂ ನಕ್ಕಮೂತಿ ಹನ್ಮಂಡ್ಲು ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆ ಮೂರು ದಿನಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಮನನೊಂದ ಹನ್ಮಂಡ್ಲು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ