ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಂಸಾರದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳಗಳಾಗಿ ಬೇರ್ಪಡುವ ವಿಚಾರ, ಹಲ್ಲೆ, ಕೊಲೆ ಮಾಡುವ ಘಟನೆಗಳು ಹೆಚ್ಚಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ (New Delhi) ಇಂತಹ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿ (Wife) ಹೊಡೆದು ಕೊಂದಿದ್ದಾನೆ. ವಾಯುವ್ಯ ದೆಹಲಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಸೋಮಾರಿ, ಅಡುಗೆ ಮಾಡಿಕೊಡುವುದಿಲ್ಲ ಎಂಬ ಕಾರಣಕ್ಕೆ ಕೋಲಿನಿಂದ ಥಳಿಸಿದ್ದಾನೆ. ಇದರಿಂದ ಗಾಯಗೊಂಡ ಮಹಿಳೆ ಸಾವನ್ನಪ್ಪಿದ್ದಾಳೆ. ಆರೋಪಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಡುಗೆ ಮಾಡದ್ದಕ್ಕೆ ಹೊಡೆದಿದ್ದ ಪತಿ
ಕೊಲೆ ಆರೋಪಿ ಪೊಲೀಸರ ಬಳಿ ತನ್ನ ಪತ್ನಿಯನ್ನು ಕೊಂದಿರುವುದಕ್ಕೆ ಕಾರಣ ಬಹಿರಂಗಪಡಿಸಿದ್ದಾನೆ. ತನಗೆ ಒಳ್ಳೆಯ ಅಡುಗೆ ಮಾಡಿಕೊಡುತ್ತಿರಲಿಲ್ಲ, ಸೋಮಾರಿಯಂತೆ ವರ್ತಿಸುತ್ತಿದ್ದಳು ಎಂದು ಪೊಲೀಸರ ಬಳಿ ಆರೋಪಿ ಪತಿ ಹೇಳಿಕೊಂಡಿದ್ದಾನೆ.
ಆಸ್ಪತ್ರೆ ವೈದ್ಯರಿಂದ ಪೊಲೀಸರಿಗೆ ಮಾಹಿತಿ
ಗಂಡನಿಂದ ಹಲ್ಲೆಗೊಳಗಾಗಿದ್ದ ಪ್ರೀತಿ ಎಂಬ ಮಹಿಳೆಯನ್ನು ಬುರಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಪ್ರೀತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಈ ಕುರಿತು ಆಸ್ಪತ್ರೆ ಸಿಬ್ಬಂದಿ ಭಲ್ಸ್ವಾ ಡೈರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ನಂತರ ವೈದ್ಯರಿಂದ ಮಾಹಿತಿ ಪಡೆದುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ನಿರಂತರವಾಗಿ ಥಳಿಸುತ್ತಿದ್ದ
ಸಂತ್ರಸ್ತೆಗೆ ಮದುವೆಯಾಗಿ ಏಳು ವರ್ಷಗಳಾಗಿತ್ತು ಎಂದು ಆಕೆಯ ತಾಯಿ ಅಹಿಲಾ ದೇವಿ ಹೇಳಿದ್ದು, ಆಕೆಯ ಅಳಿಯ ಬಜರಂಗಿ ಗುಪ್ತಾ ತನ್ನ ಮಗಳನ್ನು ಪ್ರತಿದಿನ ಥಳಿಸುತ್ತಿದ್ದ ಎಂದು ಪೊಲೀಸರಿಗೆ ಹೇಳಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಐಪಿಸಿಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿ ಪರಾರಿಯಾಗಿದ್ದ ಬಜರಂಗಿ ಗುಪ್ತಾನನ್ನು ಬಂಧಿಸಲಾಗಿದೆ. ಆತ ನೀಡಿದ ಮಾಹಿತಿಯ ಮೇಲೆ ಅಪರಾಧದ ಆಯುಧವಾದ ಕೋಲನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪ-ಅಮ್ಮನನ್ನೆ ಕೊಂದ 16ರ ಬಾಲಕಿ
ಫೋನ್ನಲ್ಲಿ ಹುಡುಗರ ಜೊತೆ ನಿರಂತರವಾಗಿ ಮಾತನಾಡುತ್ತಿದ್ದ ಮಗಳನ್ನು ಪ್ರಶ್ನಿಸಿ ಹೊಡೆದಿದ್ದಕ್ಕೆ ಕೋಪಗೊಂಡ ಮಗಳು ತನ್ನ ಪೋಷಕರಿಗೆ 20 ಅಮಲೇರುವ ಮಾತ್ರೆಗಳನ್ನು ಆಹಾರದಲ್ಲಿ ತಿನಿಸಿ, ನಂತರ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 16 ವರ್ಷದ ಬಾಲಕಿ ತನ್ನ ತಂದೆ ಶಬ್ಬೀರ್(45) ಮತ್ತು ತಾಯಿ ರಿಹಾನಾ ಫರೂಖಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ.
ಅಹಾರದಲ್ಲಿ ಅಮಲೇರಿಸುವ ಮಾತ್ರೆ ಬೆರೆಸಿ ಕೊಲೆ
ಆರೋಪಿ ಬಾಲಕಿ ಯಾವಾಗಲೂ ಹುಡುಗರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಪೋಷಕರು ಅಸಮಾಧಾನಗೊಂಡಿದ್ದರು. ಕೋಪದಲ್ಲಿ ಮಗಳಿಗೆ ಬುದ್ದಿವಾದ ಹೇಳಿ ಥಳಿಸಿದ್ದರು. ಇಷ್ಟಕ್ಕೆ ಕೋಪಗೊಂಡ ಬಾಲಕಿ ಹೆತ್ತವರನ್ನೇ ಮುಗಿಸಿದ್ದಾಳೆ.
ತಂದೆ ತಾಯಿಯನ್ನೇ ಕೊಲ್ಲಲು ನಿರ್ಧರಿಸಿದ ಬಾಲಕಿ ತನ್ನ ಹುಡುಗನಿಂದ 20 ಅಮಲೇರುವ ಮಾತ್ರೆಗಳನ್ನು ತರಿಸಿಕೊಂಡಿದ್ದಾಳೆ. ಆ ಮಾತ್ರೆಗಳನ್ನು ಆಹಾರದಲ್ಲಿ ಬೆರೆಸಿದ್ದಾಳೆ. ಅದನ್ನು ತಿಂದಂತಹ ಪೋಷಕರು ಕೆಲ ಸಮಯದ ನಂತರ ಪ್ರಜ್ಞಾಹೀನರಾಗಿದ್ದಾರೆ. ಈ ಸಂದರ್ಭದಲ್ಲಿ ಕೊಡಲಿಯಿಂದ ಇಬ್ಬರೂ ಸಾಯುವವರೆಗೂ ದಾಳಿ ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲ ನ್ಯಾಯ ಮಂಡಳಿ ಮುಂದೆ ಹಾಜರು
ಪೋಷಕರನ್ನೇ ಕೊಂದಿರುವ ಅಪ್ರಾಪ್ತ ಬಾಲಕಿಯನ್ನು ಬಂಧಿಸಲಾಗಿದ್ದು, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಅಪರಾಧ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಕೆಗೆ ಮಾತ್ರೆಗಳನ್ನು ಪೂರೈಸಿದ ಯುವಕನನ್ನೂ ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಎಸ್ಎಸ್ಪಿ ಕುಮಾರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ