ಬೆಂಗಳೂರು: ತನ್ನೊಂದಿಗೆ ಗೆಳತಿಯಂತೆ (Girlfriend) ಇರಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಕ್ಯಾಬ್ ಚಾಲಕನೋರ್ವ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಇಂದಿರಾನಗರದಲ್ಲಿ (Indiranagar) ಕೊಲೆ ಮಾಡಿ ಮಹಿಳೆಯ ಮೃತದೇಹವನ್ನು ನಗರದ ಹೊರ ವಲಯದಲ್ಲಿ ಬಿಸಾಡಿದ್ದ ಆರೋಪಿಯನ್ನು ಪೊಲೀಸರು (Police) ಬಂಧನ ಮಾಡಿದ್ದಾರೆ. ನಗರದ ಬಾಗಲೂರು ಪೊಲೀಸರು (Bagaluru Police) ಆರೋಪಿ ಭೀಮರಾವ್ ಎಂಬಾತನನ್ನು ಬಂಧನ ಮಾಡಿದ್ದಾರೆ. ಆರೋಪಿ ಭೀಮರಾವ್, ದೀಪಾ ಎಂಬ ಮಹಿಳೆಯನ್ನು (Women) ಕೊಲೆ ಮಾಡಿ ಮೃತದೇಹವನ್ನು ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದ. ಅಪರಿಚಿತ ಮಹಿಳೆ ಮೃತದೇಹ ಪತ್ತೆಯಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಲೆಗೆ ಕೆಡವಿದ್ದಾರೆ.
ಏನಿದು ಪ್ರಕರಣ?
ಮಾರ್ಚ್ 04 ನಗರದ ಹೊರ ವಲಯದ ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಮಹಿಳೆಯ ಹೆಸರು, ಮಾಹಿತಿ ಲಭ್ಯವಾಗಿತ್ತು. ಇದರಂತೆ ತನಿಖೆ ಮುಂದುವರಿಸಿದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: Crime News: ಭೂಮಿ ಅಗೆಯುವಾಗ ಚಿನ್ನದ ಗಟ್ಟಿ ಸಿಕ್ತು ಅಂತ ಉದ್ಯಮಿಗೆ 13 ಲಕ್ಷ ವಂಚನೆ! ಆರೋಪಿ ಅರೆಸ್ಟ್
ಮೃತ ಮಹಿಳೆ ದೀಪಾ ಅವರನ್ನು ಆರೋಪಿ ಭೀಮರಾವ್ ನಿತ್ಯ ಕಚೇರಿಯಿಂದ ಮನೆಗೆ ಪಿಕ್ ಹಾಗೂ ಡ್ರಾಪ್ ಮಾಡುತ್ತಿದ್ದನಂತೆ. ಈ ನಡುವೆ ಇಬ್ಬರ ನಡುವೆ ಪರಿಚಯ ಏರ್ಪಟ್ಟು ಸಲುಗೆ ಬೆಳದಿದೆ. ಆದರೆ ಕಳೆದ ಫೆಬ್ರವರಿ 27 ರಂದು ಆರೋಪಿ ಮಹಿಳೆಯನ್ನು ಪಿಕ್ ಮಾಡಿ ತನ್ನ ಜೊತೆ ಗೆಳತಿಯಂತೆ ಇರುವಂತೆ ಒತ್ತಾಯ ಮಾಡಿದ್ದನಂತೆ.
ಆದರೆ ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದರಂತೆ. ಇದರಿಂದ ಕೋಪಗೊಂಡ ಆರೋಪಿ ಮಹಿಳೆಯನ್ನು ಕಬ್ಬಿಣದ ಜಾಕ್ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆ ಬಳಿಕ ಮೃತದೇಹವನ್ನು ಕಾರಿನಲ್ಲೇ ಇಟ್ಟುಕೊಂಡು ಹೋಗಿ ಬಾಗಲೂರು ಬಳಿ ನಿರ್ಜನ ಪ್ರದೇಶದಲ್ಲಿ ಬಿಸಾಕಿ ತನಗೇನು ಗೊತ್ತಿಲ್ಲ ಎಂಬಂತೆ ಕೆಲಸ ಮುಂದುವರಿಸಿದ್ದಾನೆ.
ಮೃತ ಮಹಿಳೆಯ ಬಟ್ಟೆ ಹಾಗೂ ವಾಚ್ನ ಮೂಲಕ ಆಕೆಯ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದರು. ಇತ್ತ ಆಕೆಯ ಕುಟುಂಬಸ್ಥರು ಕೂಡ ದೀಪಾ ನಾಪತ್ತೆಯಾಗಿದ್ದ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ತನಿಖೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆ ತನ್ನೊಂದಿಗೆ ಸಲುಗೆಯಿಂದ ಇರಲು ಒಪ್ಪಿಗೆ ನೀಡದೆ ಜಗಳ ಮಾಡಿದ್ದೆ ಕೊಲೆಗೆ ಕಾರಣ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Bengaluru: ಗೆಳೆಯನ ಭೇಟಿಗಾಗಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ ಸಾವು; ರಾತ್ರಿ ಇಬ್ಬರ ಮಧ್ಯೆ ನಡೆದಿದ್ದಾದ್ರೂ ಏನು?
ಬಿಲ್ಡಿಂಗ್ ಮೇಲಿಂದ ಬಿದ್ದು ತಲೆಗೆ ಗಾಯ
ಆಟವಾಡುತ್ತಾ ಅಪಾರ್ಟ್‌ಮೆಂಟ್ ಮೇಲಿಂದ ಮಗು ಬಿದ್ದಿರುವ ಘಟನೆ ಬೆಂಗಳೂರಿನ (Bengaluru) ಕೆಂಗೇರಿ ಸಮೀಪದ ಬಿಡಿಎ (BDA) ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಘಟನೆಯಲ್ಲಿ ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟವಾಡುತ್ತಾ ರಾಹುಲ್ ಎಂಬ ಬಾಲಕ ಮೇಲಿಂದ ಬೀಳುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ತಂದೆ ಶಿವಪ್ಪ ಮೇಸ್ತ್ರಿ ಕೆಲಸ ಮಾಡ್ತಿದ್ರು. ತಂದೆ- ತಾಯಿ ಮನೆಯಲ್ಲಿದ್ದಾಗಲೇ ಘಟನೆ ನಡೆದಿದೆ. ತಾಯಿ ಮತ್ತೊಂದು ಮಗುವಿಗೆ ಊಟ ಮಾಡಿಸುತ್ತಿದ್ದಾಗ ಮನೆಯ ಮುಂದೆ ಹಾಕಿದ್ದ ಚೇರ್ ಹತ್ತಿ ಮಗು ಆಯತಪ್ಪಿ ಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ