ಹುಬ್ಬಳ್ಳಿ: ಆಸ್ತಿಗಾಗಿ ಮಾವನನ್ನು(Father In Law) ಅಳಿಯ (Son In Law) ಇಪ್ಪತ್ತಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದ ಘಟನೆಗೆ ಸಾಕ್ಷಿಯಾಗಿದ್ದ ಸುಳ್ಳ ಗ್ರಾಮ ಮತ್ತೊಂದು ದುಷ್ಕೃತ್ಯ ನಡೆದಿದೆ. ಪಾಪಿ ಪತಿಯೋರ್ವ ಪತ್ನಿ (Husband And Wife) ಮಕ್ಕಳ (Children) ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಬ್ಬಳ್ಳಿ ತಾಲೂಕಿನ (Hubli) ಸುಳ್ಳ ಗ್ರಾಮದಲ್ಲಿ ನಡೆದಿದೆ. ಕುಡಿತ ಮತ್ತಿನಲ್ಲಿ ಹೆಂಡತಿ ಮಕ್ಕಳ ಮೇಲೆ ಮಾರಕಾಸ್ತ್ರ ಬೀಸಿದ ಕಿರಾತಕ , ಕೊನೆಗೆ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಏನಿದು ಪ್ರಕರಣ?
ಕೃತ್ಯ ಎಸಗಿದ ಆರೋಪಿಯನ್ನು ಸುಳ್ಳ ಗ್ರಾಮದ ಫಕೀರಪ್ಪ ಮಾದರ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಫಕೀರಪ್ಪನ ಹೆಂಡತಿ ಮುದಕವ್ವ ಹಾಗೂ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಮೂವರು ಮಕ್ಕಳು ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ. ಶ್ರಾವಣಿ (8), ಶ್ರೇಯಸ್ (6) ಹಾಗೂ ಸೃಷ್ಟಿ (4) ಮೃತ ಮಕ್ಕಳಾಗಿದ್ದಾರೆ. ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಇನ್ನು, ರಾತ್ರಿ ಜಗಳ ಮೃತ ಫಕೀರಪ್ಪ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದನಂತೆ. ಆ ಬಳಿಕ ಎಲ್ಲರೂ ಮಲಗಿದ ಮೇಳೆ ಮಧ್ಯರಾತ್ರಿ ಸುತ್ತಿಗೆ ತೆಗೆದುಕೊಂಡು ಮಕ್ಕಳು ಹಾಗೂ ಪತ್ನಿ ಮೇಲೆ ದಾಳಿ ಮಾಡಿದ್ದಾನೆ. ಕೊನೆಗೆ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬೆಳಗ್ಗೆ ಮನೆಯಲ್ಲಿ ಯಾರು ಬಾಗಿಲು ತೆಗೆಯದೆ ಇದ್ದಾಗ ಅನುಮಾನಗೊಂಡು ಪಕ್ಕದ ಮನೆಯವರು ಒಳಗೆ ಇಣುಕಿದಾಗ ಭೀಕರ ದೃಶ್ಯಗಳು ಕಣ್ಣಿಗೆ ಬಿದ್ದಿದೆ. ಕೂಡಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಪತ್ನಿ ಮತ್ತು ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ದಾಖಲಿಸುವ ವೇಳೆ ಒಂದು ಮಗು ಸಾವನ್ನಪ್ಪಿದ್ದು, ಉಳಿದ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಡಿತದ ಚಟಕ್ಕೆ ದಾಸನಾಗಿದ್ದ ಫಕೀರಪ್ಪ ಕೆಲ ದಿನಗಳ ಹಿಂದೆ ಮದ್ಯ ಸೇವಿಸುವುದನ್ನು ಬಿಟ್ಟಿದ್ದ ಎನ್ನಲಾಗಿದೆ. ಆಗಿನಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಫಕೀರಪ್ಪನ ಸಂಬಂಧಿಗಳು ತಿಳಿಸಿದ್ದಾರೆ. ಆದರೆ ಈ ರೀತಿಯ ದುಷ್ಕೃತ್ಯ ಮಾಡುತ್ತಾನೆ ಅಂತ ನಾವು ಯಾರೂ ಊಹಿಸಿರಲಿಲ್ಲವಂತೆ. ಮದ್ಯ ಸೇವನೆ ಬಿಟ್ಟ ನಂತರ ಹುಚ್ಚನ ರೀತಿಯಲ್ಲಿ ವರ್ತಿಸ್ತಿದ್ದನಂತೆ.
ಇದನ್ನೂ ಓದಿ: Cheating: ಹೆಣ್ಣು ಕೊಟ್ಟ ಮಾವನಿಗೆ 107 ಕೋಟಿಯ ಟೋಪಿ ಹಾಕಿದ ಅಳಿಯ
ಕೊನೆಗೆ ಮತ್ತೆ ಮದ್ಯ ಸೇವಿಸಲು ಆರಂಭಿಸಿದ ಫಕೀರಪ್ಪ, ಇಡೀ ಕುಟುಂಬವನ್ನೂ ಕೊಲೆಗೈಯಲು ಯತ್ನಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಡಿದ ಮತ್ತಿನಲ್ಲಿಯೇ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ವಿಚಿತ್ರವೆಂದರೆ ಒಂದು ವಾರದ ಹಿಂದೆ ಇದೇ ಸುಳ್ಳದಲ್ಲಿ ಭೀಕರ ಕೊಲೆ ನಡೆದಿತ್ತು. ಆಸ್ತಿಗಾಗಿ ಅಳಿಯನ್ನೇ ಮಾವನನ್ನು ಬರ್ಬರವಾಗಿ ಹತ್ಯೆಗೈದಿದ್ದ. ಇಪ್ಪತ್ತಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಅಂದು ಅಳಿಯ, ಹೆಣ್ಣು ಕೊಟ್ಟ ಮಾವನನ್ನು ಕೊಲೆಗೈದು ಪರಾರಿಯಾಗಿದ್ದ. ಇದರ ಬೆನ್ನ ಹಿಂದೆಯೇ ಗ್ರಾಮದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಸಿದೆ. ಹುಬ್ಬಳ್ಳಿ ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಧಾರವಾಡ ಎಸ್‌ಪಿ ಲೋಕೇಶ್ ಅವರು, ಸುಳ್ಳ ಗ್ರಾಮದಲ್ಲಿ ಫಕೀರಪ್ಪ ಎನ್ನುವ ವ್ಯಕ್ತಿಯಿಂದ ಹಲ್ಲೆ ನಡೆದಿದೆ. ಪತ್ನಿ ಮತ್ತು ಮೂವರು ಮಕ್ಕಳ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ, ಪತ್ನಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿ ನಂತರ ಫಕೀರಪ್ಪ ನೇಣಿಗೆ ಶರಣಾಗಿದ್ದಾನೆ. ಇದು ಯಾವ ಕಾರಣಕ್ಕೆ ಆಗಿದೆ ಅದರ ಹಿನ್ನೆಲೆಯಲ್ಲಿ ಮಾಡಿದ್ದಾನೆಂದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮೂವರು ಮಕ್ಕಳಲ್ಲಿ ಒಂದು ಎಂಟು ವರ್ಷ, ಒಂದು ನಾಲ್ಕು ವರ್ಷ, ಇನ್ನೊಂದು ಆರು ವರ್ಷ ವಯಸ್ಸಾಗಿತ್ತು. ಹಲ್ಲೆ ಮಾಡಿದ ಫಕೀರಪ್ಪನ ಮೇಲೆ ಅಪರಾಧ ಚಟುವಟಿಕೆ ಕಂಡುಬಂದಿಲ್ಲ. ಆತ ಒಬ್ಬ ಕಟ್ಟಡ ಕಾರ್ಮಿಕ ಆಗಿದ್ದ, ಯಾವ ಕಾರಣಕ್ಕೆ ಹೀಗಾಗಿದೆ ಎಂಬುದು ತನಿಖೆಯಾಗಬೇಕಿದೆ. ಕೌಟುಂಬಿಕ ಕಲಹವಿತ್ತು ಎಂಬುದು ಸ್ಥಳೀಯರಿಂದ ಮಾಹಿತಿಯಿದೆ ಎಂದು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ