ಮೊದಲೆಲ್ಲಾ ಜನರನ್ನು ದೋಚುವುದಕ್ಕಾಗಿ ಕೆಲ ಕಿಡಿಗೇಡಿಗಳು ಅವರೊಡನೆ ಸುಮ್ಮನೆ ಯಾವುದೋ ಒಂದು ವಿಷಯಕ್ಕೆ ಜಗಳ ಮಾಡಿಕೊಂಡು ನಂತರ ಅದಕ್ಕೆ ಪರಿಹಾರವೆಂಬಂತೆ ಹಣವನ್ನು ಡಿಮ್ಯಾಂಡ್ ಮಾಡುತ್ತಿದ್ದರು. ಆದರೆ ಈಗ ಜನರನ್ನು ದೋಚಲು ಕಿಡಿಗೇಡಿಗಳು ಈ ಬ್ಲ್ಯಾಕ್‌ಮೇಲ್ (Blackmail) ತಂತ್ರವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಅದರಲ್ಲೂ ಈ ಹನಿ ಟ್ರ್ಯಾಪ್ (Honey Trap) ಮಾಡುವುದು ತುಂಬಾನೇ ಜಾಸ್ತಿಯಾಗಿದೆ. ಕಿಡಿಗೇಡಿಗಳು ತಮಗೆ ಆಗದ ವ್ಯಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ಅವರಿಂದ ಲಕ್ಷಾಂತರ ಹಣವನ್ನು ದೋಚಲು ಈ ಹನಿ ಟ್ರ್ಯಾಪ್ ಎಂಬ ಅಸ್ತ್ರವನ್ನು ಬಳಸುತ್ತಿರುವ ಬಗ್ಗೆ ಅನೇಕ ರೀತಿಯ ಸುದ್ದಿಗಳನ್ನು ನಾವು ಮೊಬೈಲ್ನಲ್ಲಿ, ಟಿವಿಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ.
ಇದರ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು, ಇಲ್ಲೊಂದು ಹನಿ ಟ್ರ್ಯಾಪ್ ಘಟನೆ ನಡೆದಿದೆ ನೋಡಿ.
ಹನಿ ಟ್ರ್ಯಾಪ್ ಮೂಲಕ ಅರ್ಚಕನ ಚಿನ್ನಾಭರಣ ದೋಚಿದ ಕಿಡಿಗೇಡಿಗಳ ಗ್ಯಾಂಗ್
ಹನಿ ಟ್ರ್ಯಾಪ್ ಮೂಲಕ ಅರ್ಚಕರೊಬ್ಬರ ಚಿನ್ನಾಭರಣ, ಐಫೋನ್ ಮತ್ತು ಹಣವನ್ನು ದೋಚಿದ್ದ ಐವರ ಗ್ಯಾಂಗ್ ಅನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಬನ್ನೇರುಘಟ್ಟ ಪೊಲೀಸರು ಒಂದು ಐಫೋನ್, 68 ಗ್ರಾಂ ಚಿನ್ನಾಭರಣ, ಒಂದು ಜೋಡಿ ಕಿವಿಯೋಲೆ, ಬೆರಳಿನ ಉಂಗುರ ಮತ್ತು ಚಿನ್ನದ ಸರ, ಬೈಕ್ ಮತ್ತು ಸ್ಕೂಟರ್ ಅನ್ನು ಈ ಕಿಡಿಗೇಡಿಗಳಿಂದ ವಶಪಡಿಸಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಗ್ರಾಮಸ್ಥರಿಂದ ಥಳಿತ
ಬಂಧಿತ ಆರೋಪಿಗಳನ್ನು ಗೊಟ್ಟಿಗೆರೆಯ ಬಿಕಾಂ ವಿದ್ಯಾರ್ಥಿ ರುತೀಕ್ ಅಲಿಯಾಸ್ ವಿಷ್ಣು (23), ಜೆ.ಪಿ.ನಗರದ ಎಸಿ ಟೆಕ್ನೀಷಿಯನ್ ಮೊಹಮ್ಮದ್ ಆಸೀಫ್ (22), ಬೊಮ್ಮನಹಳ್ಳಿಯ ಗೂಡ್ಸ್ ವಾಹನ ಮೆಕ್ಯಾನಿಕ್ ಯಾಸೀನ್ ಪಾಷಾ(20), ಡೆಲಿವರಿ ಬಾಯ್ ಆದ ಸಮೀರ್ ಅಲಿಯಾಸ್ ಇರ್ಫಾನ್ (21) ಮತ್ತು ಸೈನ್ ಬೋರ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಶಾಹಿದ್ ಅಲಿ (23) ಎಂದು ಗುರುತಿಸಲಾಗಿದೆ. ಪಾಷಾನನ್ನು ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಸಹ ಬಂಧಿಸಲಾಗಿತ್ತು.
ತನ್ನ ಸಹಪಾಠಿಯನ್ನೇ ಹನಿ ಟ್ರ್ಯಾಪ್ ಮಾಡಲು ಪ್ಲ್ಯಾನ್ ಮಾಡಿದ್ದ ಯುವಕ
ಮಾಸ್ಟರ್ ಮೈಂಡ್ ಎಂದು ಹೇಳಲಾದ ರುತೀಕ್ ತನ್ನ ಶಾಲಾ ಸಹಪಾಠಿ ಶಶಾಂಕ್ನನ್ನು ಇನ್‌ಸ್ಟಾಗ್ರಾಮ್ ಮೂಲಕ ಬಲೆಗೆ ಬೀಳಿಸಲು ಮಹಿಳಾ ಸ್ನೇಹಿತೆಯನ್ನು ಬಳಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆಪಿ ನಗರದ ನಿವಾಸಿ ಶಶಾಂಕ್ ಈ ಕುರಿತು "ಆ ಹುಡುಗಿ ಆಗಾಗ ನನ್ನೊಂದಿಗೆ ಚಾಟ್ ಮಾಡುತ್ತಿದ್ದಳು ಮತ್ತು ಒಂದೆರಡು ಬಾರಿ ಭೇಟಿ ಸಹ ಆಗಿದ್ದೆ ಎಂದು ಹೇಳಿದ್ದಾನೆ.
ಜನವರಿ 12 ರಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿಯ ಹಕ್ಕಿ-ಪಿಕ್ಕಿ ಕಾಲೋನಿಗೆ ಒಬ್ಬರೇ ಬರುವಂತೆ ಆ ಹುಡುಗಿ ಹೇಳಿದಳಂತೆ. ಪ್ಲ್ಯಾನ್ ಪ್ರಕಾರ, ರುತೀಕ್ ತನ್ನ ನಾಲ್ವರು ಸ್ನೇಹಿತರನ್ನ ಅಲ್ಲಿಗೆ ಕಳುಹಿಸಿದ್ದಾನೆ.
ಅವರು ಶಶಾಂಕ್ ಜೊತೆ ತುಂಬಾನೇ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಮರದ ದಿಮ್ಮಿಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಆ ಹುಡುಗಿಯನ್ನು ಮತ್ತು ಶಶಾಂಕ್ ಅವರ ಮೈ ಮೇಲಿದ್ದ ಚಿನ್ನ ಮತ್ತು ಬಳಿ ಇದ್ದಂತಹ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಪರಾರಿಯಾದರೆಂದು ತಿಳಿದುಬಂದಿದೆ.
ಶಶಾಂಕ್ ಪೊಲೀಸ್ ದೂರು ದಾಖಲಿಸುವುದಿಲ್ಲ ಅಂತ ರುತೀಕ್ ಊಹಿಸಿದ್ದರಂತೆ. ಆದರೆ ಅವನ ಊಹೆ ತಪ್ಪಾಯಿತು. ಶಶಾಂಕ್ ನೀಡಿದ ದೂರಿನ ಮೇರೆಗೆ ಈಗ ಬನ್ನೇರುಘಟ್ಟ ಪೊಲೀಸರು ಐಪಿಸಿ ಸೆಕ್ಷನ್ 397ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಶಾಂಕ್ ಯಾವಾಗಲೂ ಮೈ ಮೇಲೆ ಚಿನ್ನಾಭರಣ ಹಾಕಿಕೊಂಡು ಓಡಾಡುತ್ತಾನೆ ಅಂತ ರುತೀಕ್ ಗೆ ತಿಳಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ