ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಮೆಜೆಸ್ಟಿಕ್ (Majestic) ಎಂದರೆ ಗಿಜಿಗುಡುವ ಜನ, ವ್ಯಾಪಾರ ವಹಿವಾಟು ಮಾಡುವ ವ್ಯಾಪಾರಿಗಳು (Traders), ನಗರದ ಬೇರೆ ಬೇರೆ ಕಡೆಯಿಂದ ಬಂದು ಹೋಗುವ ಬಸ್ಗಳು (Bus) ಇರುತ್ತವೆ. ಆದರೆ ಇವತ್ತು ಮೆಜೆಸ್ಟಿಕ್ನಲ್ಲಿ ಹೆಣಬಿದ್ದಿದೆ. ಆದರೆ ಕಾರಣ ಕೇಳಿದರೆ ನೀವು ಕೂಡ ಖಂಡಿತ ಶಾಕ್ ಅಗುತ್ತೀರಿ. ಹೌದು, ಬೆಂಗಳೂರಿನ ಹಾಟ್ಸ್ಪಾಟ್ ಮೆಜೆಸ್ಟಿಕ್. ಒಂದು ಗಂಟೆ ಅವಧಿಯಲ್ಲಿ ಸಾವಿರಾರು ಜನರು ಮೆಜೆಸ್ಟಿಕ್ ಮೂಲಕ ಹಾದು ಹೋಗುತ್ತಾರೆ. ರಾಜ್ಯದಾದ್ಯಂತ ಸಂಚಾರ ಮಾಡುವ ಬಸ್ಗಳು ಹೋಗಿ ಬರುತ್ತವೆ. ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲು ನಿಲ್ದಾಣ (Sangolli Rayanna Railway Station ), ನಮ್ಮ ಮೆಟ್ರೋ (Namma Metro) ನಿಲ್ದಾಣದಲ್ಲೂ ಜನರು ಗಿಜಿಗುಡ್ತಾರೆ. ಅಂತಹ ಸ್ಥಳದಲ್ಲೇ ಇಂದು ಬರ್ಬರ ಕೊಲೆ ನಡೆದಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಪೇಮೆಂಟ್ ವಿಚಾರಕ್ಕೆ ನಡೆಯಿತು ಭೀಕರ ಕೊಲೆ!
ಅಡುಗೆ ಕೆಲಸ ಮಾಡುತ್ತಿದ್ದ ಮೂವರು ಸ್ನೇಹಿತರು ಮೆಜೆಸ್ಟಿಕ್ ಬಳಿಯ ಗಣಪತಿ ದೇಗುಲದ ಬಳಿ ಪೇಮೆಂಟ್ ಹಂಚಿಕೊಳ್ಳುತ್ತಿದ್ದರು. ಈ ವೇಳೆ ಮೂವರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು, 57 ವರ್ಷದ ಗಣೇಶ್ ಎಂಬಾತ ಕೋಪದಲ್ಲಿ ಚಾಕು ಇರಿದಿದ್ದಾನೆ. ಕಲಬುರಗಿ ಮೂಲದ 33 ವರ್ಷದ ಮಲ್ಲಿನಾಥ್ ಬಿರಾದಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಲಾಟೆ ಬಿಡಿಸಲು ಹೋದ ಮತ್ತೋರ್ವ ವ್ಯಕ್ತಿಗೂ ಚಾಕು ಇರಿಯಲಾಗಿದೆ.
ಇದನ್ನೂ ಓದಿ: Kodagu: ಮಕ್ಕಳಿಗೆ ಉಂಗುರ ಕೊಡುವ ಮುನ್ನ ಹುಷಾರ್; ರಿಂಗ್ ನುಂಗಿ 8 ತಿಂಗಳ ಕಂದಮ್ಮ ಸಾವು
ಗಣೇಶ್ ಬಳಿ ಚಾಕು ಕಿತ್ತುಕೊಂಡು ತಿರುಗಿಸಿ ಚಾಕು ಇರಿಯಲಾಗಿದೆ. ಇಬ್ಬರು ಗಾಯಾಳುಗಳನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜೆ 6:15ರ ಸುಮಾರಿಗೆ ಘಟನೆ ನಡೆದಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಪ್ರತ್ಯಕ್ಷದರ್ಶಿ ಚಂದ್ರಶೇಖರ್ ಹಿರೇಮಠ ಎಂಬವರು, ನಾನು ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಫೋನ್ನಲ್ಲಿ ಮಾತನಾಡಿಕೊಂಡು ನಿಂತಿದ್ದೆ. ಈ ವೇಳೆ ಜಗಳ ನಡೆಯುತ್ತಿದ್ದ ಏನೋ ಮಾತನಾಡಿಕೊಳ್ಳುತ್ತಿದ್ದಾರೆ ಅಂತ ಸುಮ್ಮನಾಗಿದ್ದೆ. ಆದರೆ ಕೆಲ ಸಮಯದ ಬಳಿಕ ನೋಡಿದರೆ ಇಬ್ಬರು ದೇವಸ್ಥಾನದ ಪಕ್ಕ ಬಿದ್ದಿದ್ದರು. ಮಾತನಾಡುವ ಸ್ಥಿತಿಯಲ್ಲಿ ಯಾರು ಇರಲಿಲ್ಲ. ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ರವಾನೆ ಮಾಡಿದರು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ
ಘಟನಾ ಸ್ಥಳಕ್ಕೆ ಎಸಿಪಿ ಗಿರೀಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಬಳಿ ಮಾಹಿತಿ ಪಡೆದಿದ್ದು ಮತ್ತೋರ್ವನ ಸ್ಥಿತಿ ಗಂಭೀರ ಎನ್ನಲಾಗಿದೆ.
ಘಟನೆ ಕುರಿತಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದು, ಜಗಳ ನಡೆದು ಗಣೇಶ್ ಎಂಬಾತ ಇಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಜಗಳಕ್ಕೆ ಕಾರಣವೇನು ಅಂತ ಇನ್ನು ತಿಳಿದು ಬಂದಿಲ್ಲ. ವಿಚಾರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಕುಡಿತದ ಮತ್ತಿನಲ್ಲಿ ಈ ಘಟನೆ ನಡೆದಿರುವ ಬಗ್ಗೆ ಪೊಲೀಸರಿಗೆ ಅನುಮಾನಗಳು ಮೂಡಿದ್ದು, ಚಿಕಿತ್ಸೆ ಬಳಿಕ ವಿಚಾರಣೆ ನಡೆಸಬೇಕಿದೆ. ಕಷ್ಟಪಟ್ಟು ಕೆಲಸ ಮಾಡಿಕೊಂಡು ನೆಮ್ಮದಿಯಲ್ಲಿ ಮನೆಗೆ ಹೋಗಬೇಕಿದ್ದ ಬಾಣಸಿಗರು, ಗಲಾಟೆ ಮಾಡಿಕೊಂಡು ಕೊಲೆಯಲ್ಲಿ ಅಂತ್ಯವಾಗಿರುವುದು ದುರಾದೃಷ್ಟಕರ.
ಇದನ್ನೂ ಓದಿ: Koppala: ಆರ್ಡರ್ ಮಾಡಿದ್ದು ಆ್ಯಪಲ್ ಫೋನ್, ಬಂದಿದ್ದು ನಿರ್ಮಾ ಸೋಪ್! ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಬಂಪರ್
ಕ್ಷುಲಕ ಕಾರಣಕ್ಕೆ ಜಗಳ; ಯುವಕನ ಕೈ ಕಟ್
ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ನಡುವೆ ಗಲಾಟೆ ನಡೆದು ಓರ್ವ ಯುವಕನ ಕೈ ಕಟ್ ಆಗಿರುವ ಘಟನೆ ಬೆಂಗಳೂರಿನ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಲಾಟೆಯಲ್ಲಿ ತರುಣ್ ಎಂಬ ಯುವಕನ ಕೈ ಕಟ್ ಆಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡಿರುವ ಯುವಕನನ್ನು ಸ್ಥಳೀಯ ಕಾಮಧೇನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗೋವಿಂದರಾಜ ನಗರದ ನಚಿಕೇತ ಪಾರ್ಕ್ ಬಳಿ ಗಲಾಟೆ ನಡೆದಿದೆ. ಇನ್ನು ಆಸ್ಪತ್ರೆಗೆ ಭೇಟಿ ನೀಡಿರುವ ಗೋವಿಂದರಾಜ ನಗರ ಠಾಣೆಯ ಇನ್ಸ್ ಪೆಕ್ಟರ್ ಗಾಯಾಳು ಬಳಿ ಮಾಹಿತಿ ಕಲೆ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ