ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರದಲ್ಲಿ (Gokak) ವೈದ್ಯನೇ (Doctor), ಉದ್ಯಮಿಯನ್ನ ಕೊಲೆ ಮಾಡಿದ ಪ್ರಕರಣದಲ್ಲಿ ಈವರೆಗೂ ಕೊಲೆಯಾಗಿರುವ ಉದ್ಯಮಿ ಶವ ಮಾತ್ರ ಪತ್ತೆಯಾಗಿಲ್ಲ. ಕಳೆದ ಮೂರು ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದ್ದರೂ ಕೂಡ ಇರುವ ಕುರಿತು ಸಣ್ಣ ಸುಳಿವು ಕೂಡ ಸಿಗುತ್ತಿಲ್ಲ. ಅಂದಹಾಗೆ, ಇಲ್ಲಿ ಗೋಕಾಕ್ ತಾಲೂಕಿನ ಘಟಪ್ರಭಾ (Ghataprabha) ಬಲದಂಡೆ ಕಾಲುವೆಯಲ್ಲಿ ಪೊಲೀಸರು (Police) ಹುಡುಕಾಟ ನಡೆಸಿರುವುದು ಗೋಕಾಕ್ ನಗರದ ನಿವಾಸಿಯಾಗಿರುವ ಉದ್ಯಮಿ (Businessman) ರಾಜು ಝಂವರ್ ಎಂಬವರ ಮೃತದೇಹಕ್ಕಾಗಿ. ಕಳೆದ ಮೂರು ದಿನಗಳಿಂದ ಇದೇ ಕಾಲುವೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಈವರೆಗೂ ಮೃತದೇಹ ಮಾತ್ರ ಸಿಕ್ಕಿಲ್ಲ. ಇದರಿಂದ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಇತ್ತ ಕುಟುಂಬಸ್ಥರು ಮನೆಯ ಆಧಾರಸ್ತಂಭ ಹೋಯ್ತು ಅಂತ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಏನಿದು ಪ್ರಕರಣ?
ಫೆಬ್ರವರಿ 10ರ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಉದ್ಯಮಿ ರಾಜು ಝಂವರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಮರುದಿನ ಗೋಕಾಕ್ ಶಹರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು, ಈ ವೇಳೆ ಉದ್ಯಮಿ ತಮ್ಮ ಮೊಬೈಲ್ನಿಂದ ಕೊನೆಯದಾಗಿ ಗೋಕಾಕ್ ಸಿಟಿ ಆಸ್ಪತ್ರೆ ವೈದ್ಯ ಡಾ.ಸಚಿನ್ ಶಿರಗಾವಿ ಅವರೊಂದಿಗೆ ಮಾತನಾಡಿರುವುದು ತಿಳಿದಿತ್ತು.
ಅನುಮಾನದ ಮೇರೆಗೆ ಪೊಲೀಸರು ವೈದ್ಯರನ್ನು ಕರೆಯಿಸಿ ವಿಚಾರಣೆ ನಡೆಸಿದ ವೇಳೆ ಅವರು ಕೊಟ್ಟ ಉತ್ತರಗಳು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಪರಿಣಾಮ ವೈದ್ಯ ಡಾ.ಸಚಿನ್ ಶಿರಗಾವಿ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆ ವೇಳೆ ತಾನು ಹಾಗೂ ಇನ್ನು ಮೂವರು ಸೇರಿ ಉದ್ಯಮಿಯನ್ನು ಕೊಲೆ ಮಾಡಿದ್ದಾಗಿ ವೈದ್ಯ ಒಪ್ಪಿಕೊಂಡಿದ್ದನಂತೆ. ಅಲ್ಲದೆ, ಕೊಲೆ ಮಾಡಿದ್ದ ಸ್ಥಳ ಯೋಗಿ ಕೊಳ್ಳ ಹಾಗೂ ಶವ ಎಸೆದ ಜಾಗಕ್ಕೆ ಆರೋಪಿಯನ್ನು ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೊಲೆ ಕೇಸ್ ದಾಖಲಿಸಿಕೊಂಡಿದ್ದರು.
ಸ್ಥಳ ಪರಿಶೀಲನೆ ವೇಳೆ ಕೊಲೆಯಾದ ಉದ್ಯಮಿಯ ಕನ್ನಡಕ, ಪೆನ್ ಸೇರಿದಂತೆ ರಕ್ತದ ಕಲೆಗಳು, ಬಿಯರ್ ಬಾಟಲ್ಗಳು ಕೃತ್ಯ ನಡೆದಿದೆ ಎನ್ನಲಾಗಿರುವ ಸ್ಥಳದಲ್ಲಿ ಪತ್ತೆಯಾಗಿದೆ. ಉದ್ಯಮಿ, ಆರೋಪಿ ವೈದ್ಯನಿಗೆ ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿ ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.
ವೈದ್ಯ ಹಾಗೂ ಮೂವರು ಸೇರಿ ಕೊಲೆ ಮಾಡಿ ಯೋಗಿ ಕೊಳ್ಳದಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ಗೋಕಾಕ್ ತಾಲೂಕಿನ ಕೊಳವಿ ಗ್ರಾಮದ ಹೊರ ವಲಯದಲ್ಲಿ ಹರಿದು ಹೋಗುವ ಘಟಪ್ರಭಾ ಬಲದಂಡೆ ಕಾಲುವೆಗೆ ಮೃತದೇಹವನ್ನು ಎಸೆದು ಬಂದಿದ್ದರಂತೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಶೋಧ ಕಾರ್ಯ ನಡೆಯುತ್ತಿದ್ದಾರೆ. ಆದರೆ ಈವರೆಗೂ ಮೃತದೇಹದ ಸುಳಿವು ಮಾತ್ರ ಸಿಕ್ಕಿಲ್ಲ.
ಶೋಧ ಕಾರ್ಯಾಚರಣೆಯಲ್ಲಿ ಬೆಳಗಾವಿ ಜಿಲ್ಲೆಯ ಎಂಟು ಜನ ಸಿಪಿಐ, ಮೂರು ಜನ ಡಿವೈಎಸ್ ಗಳು ಒಟ್ಟು 37 ಕಿಲೋ ಮೀಟರ್ ದೂರದವರೆಗೂ ಇರುವ ಕಾಲುವೆಯಲ್ಲಿ ಇಂಚಿಂಚು ಶೋಧ ಮಾಡುತ್ತಿದ್ದಾರೆ. ಇದರ ಜತೆಗೆ ಈ ಕಾಲುವೆ ಬಾಗಲಕೋಟೆ ಜಿಲ್ಲೆಯಲ್ಲೂ ಹರಿಯುವ ಕಾರಣ ಬಾಗಲಕೋಟೆ ಅಡಿಷನಲ್ ಎಸ್.ಪಿ ನೇತೃತ್ವದಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರಿಗೆ ಅಗ್ನಿಶಾಮಕ ಸಿಬ್ಬಂದಿ, ಈಜು ತಜ್ಞರು, ಸ್ಕೂಬಾ ಡೈವ್ ಮಾಡುವವರು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ವೈದ್ಯರನ್ನು ಸಂಚು ಮಾಡಿ ಕೊಲೆ ಮಾಡಿ ಮೃತದೇಹ ಕಾಣದಂತೆ ಮಾಡಿರುವುದು ಪೊಲೀಸರಿಗೆ ತಲೆನೋವು ತಂದಿದೆ. ಸದ್ಯ ಪೊಲೀಸರು ಆರೋಪಿಗಳಿಗೆ ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ಮುಂದಾಗಿದ್ದು, ಇದರಿಂದ ಆರೋಪಿಗಳು ಕೊಲೆಯ ಸಂಚಿನ ಬಗ್ಗೆ ಬಾಯಿ ಬಿಡಿಸುವ ಚಿಂತನೆಯಲ್ಲಿದ್ದಾರೆ. ಇನ್ನೂ ಆರೋಪಿ ಸಚಿನ್ನ್ನು ಗೋಕಾಕ್ ಜೆಎಂಎಫ್ ಸಿ ಕೋರ್ಟ್ ಎದುರು ಹಾಜರು ಪಡೆಸಿದ್ದಾರೆ. ಇತ್ತ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ