ಲಕ್ನೋ: ಟೇಬಲ್ ಮೇಲೆ ಇಟ್ಟಿದ್ದ ಬಾಟಲಿಯಿಂದ ನೀರು (Water) ಕುಡಿದ ಕಾರಣಕ್ಕೆ 11 ನೇ ತರಗತಿಯ ವಿದ್ಯಾರ್ಥಿಯನ್ನು (Student) ಥಳಿಸಿದ್ದಲ್ಲದೆ, 12ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ (Farewell Ceremony) ಸಮಾರಂಭದಿಂದ ದಲಿತ ವಿದ್ಯಾರ್ಥಿಯನ್ನ (Dalit Student) ಹೊರಗಟ್ಟಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ ಎಂಬಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಆದರೆ ಈ ಆರೋಪವನ್ನು ಶಾಲೆಯ ಪ್ರಾಂಶುಪಾಲರು ನಿರಾಕರಿಸಿದ್ದು, ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮೊಬೈಲ್ ಬಳಸಬೇಡ ಎಂದರೂ ವಿದ್ಯಾರ್ಥಿ ತಮ್ಮ ಮಾತನ್ನು ಕೇಳದೆ ವಿಡಿಯೋ ಮಾಡುತ್ತಿದ್ದ, ಇದನ್ನು ಪ್ರಶ್ನಿಸಿ ಮೊಬೈಲ್ ತೆಗೆದುಕೊಂಡಿದ್ದಕ್ಕೆ ಆತ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಎಸ್ಸಿ -ಎಸ್ಟಿ ಕಾಯ್ದೆಯಡಿ ಪ್ರಕರಣ
ಭಾನುವಾರ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ದಲಿತ ವಿದ್ಯಾರ್ಥಿ ನನ್ನ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಈ ದೂರಿನನ್ವಯ ಕಾಲೇಜಿನ ಪ್ರಾಂಶುಪಾಲ ಯೋಗೇಂದ್ರ ಕುಮಾರ್ ಹಾಗೂ ಮತ್ತಿಬ್ಬರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಐಪಿಸಿ 323ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಇದುವರೆಗೆ ಯಾರನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀಳ್ಕೊಡುಗೆ ಸಮಾರಂಭದಲ್ಲಿ ಘಟನೆ
ಎಫ್‌ಐಆರ್‌ನ ಪ್ರಕಾರ, 16 ವರ್ಷದ ಸಂತ್ರಸ್ತ ಭಾನುವಾರ ಸಿರ್ವಾಸುಚಂದ್ ಗ್ರಾಮದ ಚಾಮನ್ದೇವಿ ಇಂಟರ್ ಕಾಲೇಜಿನಲ್ಲಿ 12 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಹಾಜರಾಗಿದ್ದ. ವಿದ್ಯಾರ್ಥಿಗಳು ಕೊಠಡಿ ಒಳಗೆ ಹೋದ ನಂತರ ಸಮಾರಂಭ ನಡೆಯುತ್ತಿದ್ದ ಸಭಾಂಗಣದ ಬಾಗಿಲುಗಳಿಗೆ ಬೀಗ ಹಾಕಲಾಗಿತ್ತು, ಅಲ್ಲಿದ್ದ ವಿದ್ಯಾರ್ಥಿಗಳಿಗೆ ನೀರಿನ ಬಾಟಲಿಗಳನ್ನು ಸಹಾ ನೀಡಿರಲಿಲ್ಲ. ಬಾಯಾರಿಕೆಯ ಕಾರಣ ನೀರು ಕುಡಿದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.
ಸಮಾರಂಭದಲ್ಲಿ ಪಾಲ್ಗೊಂಡ ಸುಮಾರು ಒಂದು ಗಂಟೆಯ ನಂತರ ನನಗೆ ಬಾಯಾರಿಕೆಯಾಯಿತು. ಒಂದೆರಡು ಗುಟುಕು ನೀರು ಕುಡಿಯಲು ನನ್ನ ಮುಂದೆ ಇದ್ದ ಬಾಟಲಿಯನ್ನು ತೆಗೆದುಕೊಂಡೆ. ನಾನು ಬಾಟೆಲ್ ತೆಗೆದುಕೊಳ್ಳುತ್ತಿದ್ದಂತೆ, ಪ್ರಾಂಶುಪಾಲರ ಸಹೋದರ ಮತ್ತು ಅವರ ಸ್ನೇಹಿತ, ಇದು ಪ್ರಾಂಶುಪಾಲರ ಬಳಕೆಗೆ ಮೀಸಲಾದ ನೀರಿನ ಬಾಟಲಿ, ನೀನು ಏಕೆ ಮುಟ್ಟಿದೆ ಎಂದು ಜಾತಿ ನಿಂದನೆ ಮಾಡಿ, ನನ್ನನ್ನು ಹೊಡೆದರು ಎಂದು ಸಂತ್ರಸ್ತ ವಿದ್ಯಾರ್ಥಿ ಪೊಲೀಸರ ಮುಂದೆ ಹೇಳಿದ್ದಾನೆ.
ಕಾರ್ಯಕ್ರಮದಿಂದ ಹೊರಕ್ಕೆ
ನೀರು ಕುಡಿದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದರು. ಜಾತಿ ನಿಂದನೆ ಮಾಡಿ ಬಾಟೆಲ್ ಕಸಿದುಕೊಂಡು ನನ್ನನ್ನು ಸಭಾಂಗಣದಿಂದ ಹೊರಹೋಗುವಂತೆ ಒತ್ತಾಯಿಸಿದರು ಎಂದು ಯುವಕ ದೂರಿನಲ್ಲಿ ಹೇಳಿಕೊಂಡಿದ್ದಾನೆ.
ಪ್ರಾಂಶುಪಾಲರಿಗೆ ಸಮನ್ಸ್
ಎಸ್ಸಿ-ಎಸ್ಟಿ ಕಾಯಿದೆ ಪ್ರಕಾರ ಇಂತಹ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ ಐದು ವರ್ಷಗಳು ಮತ್ತು ದಂಡ ವಿಧಿಸಲಾಗುತ್ತದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಪ್ರಾಂಶುಪಾಲರು ಮತ್ತು ಇತರ ಇಬ್ಬರಿಗೆ ನೋಟಿಸ್ ನೀಡಲಾಗುವುದು ಮತ್ತು ಅವರನ್ನು ವಿಚಾರಣೆ ನಡೆಸಲಾಗುವುದು. ಸಮನ್ಸ್ ನೀಡಿದಾಗ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಅಫ್ಜಲ್‌ಗಢ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮೊಬೈಲ್ ಕಸಿಕೊಂಡಿದ್ದಕ್ಕೆ ಸುಳ್ಳು ಆರೋಪ
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದು, ಬೀಳ್ಕೊಡುಗೆ ಕಾರ್ಯಕ್ರಮ ಆರಂಭವಾದಾಗ ಎಲ್ಲಾ ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳನ್ನು ಕಾಲೇಜಿನ ಸ್ಟಾಫ್ಗಳಿಗೆ ಒಪ್ಪಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ 16 ವರ್ಷದ ವಿದ್ಯಾರ್ಥಿ ತನ್ನ ಮೊಬೈಲ್ ಕೊಡಲು ನಿರಾಕರಿಸಿದ್ದಲ್ಲದೆ, ಸಮಾರಂಭದಲ್ಲಿ ವೀಡಿಯೊ ಮಾಡುತ್ತಿದ್ದ. ನಾವು ಆತನಿಗೆ ವಿಡಿಯೋ ಮಾಡಬೇಡ ಎಂದು ಕೇಳಿಕೊಂಡೆವು, ಆದರೂ ನಮ್ಮ ಮಾತು ಕೇಳದಿದ್ದರಿಂದ ಆತನ ಮೊಬೈಲ್ ಫೋನ್ ಕಿತ್ತುಕೊಂಡೆವು ಎಂದಿದ್ದಾರೆ.
ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿಲ್ಲ
ವಿದ್ಯಾರ್ಥಿ ಮೇಲೆ ನಾವು ಯಾರು ಹಲ್ಲೆ ಮಾಡಿಲ್ಲ ಅಥವಾ ಸಮಾರಂಭ ನಡೆಯುತ್ತಿದ್ದ ಸಭಾಂಗಣದಿಂದ ಹೊರಗೆ ಹೋಗುವಂತೆಯೂ ಬಲವಂತ ಮಾಡಿಲ್ಲ. ನಮ್ಮ ವಿರುದ್ಧ ಆತ ಮಾಡಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಯೋಗೇಂದ್ರ ಕುಮಾರ್ ಮಾಹಿತಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ