ಬೆಂಗಳೂರು: ಚೀಟಿ ವ್ಯವಹಾರ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ (Middle Class Family) ಹಣ ಉಳಿತಾಯ ಮಾಡಲು ಅಥವಾ ಸಂಕಷ್ಟದ ಸಂದರ್ಭದಲ್ಲಿ ಹಣವನ್ನು ಹೊಂದಿಸಲು ನೆರವಾಗುವ ಒಂದು ವ್ಯವಸ್ಥೆಯಾಗಿದೆ. ಇಂದಿಗೂ ಅದೆಷ್ಟೋ ಮಂದಿ ತಾವು ದಿನ ದುಡಿದ ಹಣದಲ್ಲಿ ಇಷ್ಟು ಅಂತ ಚೀಟಿಗಳ ರೂಪದಲ್ಲಿ ದುಡಿಮೆಯನ್ನು ಮುಂದಿನ ಭವಿಷ್ಯಕ್ಕಾಗಿ ಸೇವ್ ಮಾಡಲು (Money Saving) ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದಷ್ಟು ಮಂದಿ ಸೇರಿ ಒಂದು ಗ್ರೂಪ್ ಮಾಡಿಕೊಂಡು ವಾರಕ್ಕೆ ಅಥವಾ ತಿಂಗಳಿಗೆ ಇಂತಿಷ್ಟು ಅಂತ ಹಣ ಕಟ್ಟಿ ನಿರ್ದಿಷ್ಟ ಅವಧಿ ಬಳಿಕ ಒಂದು ಸಣ್ಣ ಪ್ರಮಾಣ ಮೊತ್ತವನ್ನು ಪಡೆದುಕೊಳ್ಳುತ್ತಾರೆ. ಆದರೆ ಈ ವ್ಯವಹಾರದಲ್ಲಿ ಅದೆಷ್ಟೋ ಮಂದಿ ಮೋಸ ಹೋಗಿ, ಜೀವನವನ್ನೇ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹದ್ದೇ ಘಟನೆಯೊಂದು ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ (Bannerghatta) ಬೆಳಕಿಗೆ ಬಂದಿದೆ. ನೂರಾರು ಮಂದಿ ಕೈಯಿಂದ ಹಣ ಕಟ್ಟಿಸಿಕೊಂಡು ಚೀಟಿ ನಡೆಸುತ್ತಿದ್ದ ದಂಪತಿ, ವಂಚನೆ ಮಾಡಿ ಕೋಟಿ ಕೋಟಿ ರೂಪಾಯಿಯೊಂದಿಗೆ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಪ್ರಕರಣ?
ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ನಿವಾಸಿಗಳಿರುವ ಪೌಲಿನಾ ಹಾಗೂ ಮಂಜುನಾಥ್ ದಂಪತಿ ಚೀಟಿ ನಡೆಸುವ ಹೆಸರಿನಲ್ಲಿ ನೂರಾರು ಮಂದಿಗೆ ಕೋಟಿ ಕೋಟಿ ವಂಚನೆ ಮಾಡಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದ ದಂಪತಿ ಅಮಾಯಕರಿಗೆ ಮಹಾಮೋಸ ಮಾಡಿದ್ದು, ಜನರ
ಹಣ ನೀಡದೆ ಪರಾರಿಯಾಗಿದ್ದಾರೆ.
ಇದನ್ನೂ ಓದಿ: Crime News: ಸ್ನೇಹಿತನಿಗೆ ಸಾಲ ಕೊಡಿಸಿದ್ದ ಯುವಕ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ; ಓರ್ವ ಪೊಲೀಸ್ ವಶಕ್ಕೆ
ದಂಪತಿಯನ್ನು ನಂಬಿದ್ದ ಸ್ಥಳೀಯ ಹೂ ಮಾರುವವರು, ಅಂಗವಿಕಲರು, ಮನೆಕೆಲಸ ಮಾಡುವವರು, ಬಡ ಜನರು ಹಣ ಉಳಿತಾಯ ಮಾಡಲು ಚೀಟಿ ಹಾಕಿದ್ದರಂತೆ. ಸುಮಾರು 50ಕ್ಕೂ ಹೆಚ್ಚು ಮಂದಿಯಿಂದ ಹಣ ಕಟ್ಟಿಸಿಕೊಂಡಿರುವ ದಂಪತಿ ಒಂದು ಕೋಟಿಗೂ ಅಧಿಕ ಚೀಟಿ ಹಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಚೀಟಿ ಹಣ ಕೇಳಿದರೆ ಧಮ್ಕಿ ಹಾಕುತ್ತಿದ್ದ, ದಂಪತಿ ಸದ್ಯ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಮೋಸ ಹೋದ ಜನರು ಆರೋಪ ಮಾಡಿದ್ದಾರೆ.
ಮಂಜುನಾಥ್ ಹಾಗೂ ಪೌಲಿನಾ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದು, ಆತನ ತಂದೆ-ತಾಯಿಯನ್ನು ಕಳೆದರೆ ಆತನಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದ್ದರಂತೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಒಳಗಾದವರು ದೂರು ನೀಡಿದ್ದು, ಹಣ ಕಳೆದುಕೊಂಡ ಜನರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮಂಜನಾಥ್ ವಿರುದ್ಧ ಈಗಾಗಲೇ ಹಲವು ವಂಚನೆ ಪ್ರಕರಣಗಳು ದಾಖಲಾಗಿರುವ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ: Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್!
ಬಡವರು ದುಡ್ಡನ್ನು ಬಳಿಸಿಕೊಂಡು ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ. ಕೇಳಿದ್ರೆ ನನ್ನ ಶಾಪಿಂಗ್ ಖರ್ಚು ತಿಂಗಳಿಗೆ ಒಂದು ಲಕ್ಷ ಆಗುತ್ತೆ, ನಿಮ್ಮ ದುಡ್ಡು ಬೀಸಾಕ್ತೀನಿ ಎಂದು ಧಮ್ಕಿ ಹಾಕುತ್ತಿದ್ದಳು. ಹಣ ಕೇಳಿದ್ರೆ ಪುಂಡ ಪೋಕರಿಗಳನ್ನು ಕರೆದುಕೊಂಡು ಬಂದು ಬಡವರ ಮೇಲೆ ದರ್ಪ ಮಾಡಲು ಆಗುತ್ತೆ. ಕೊಟ್ಟಿರುವ ದುಡ್ಡು ವಾಪಸ್ ಮಾಡಲು ಆಗ್ತಿಲ್ಲ. ಮನೆ ಕೆಲಸ ಮಾಡಿಕೊಂಡು ಹಣ ಕೊಟ್ಟಿದ್ದೀವಿ ಎಂದು ಹಣ ಕಳೆದುಕೊಂಡರು ತಮ್ಮ ಗೋಳು ತೋಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ