ಚೆನ್ನೈ: ಫೆಬ್ರವರಿ 14 ಬರುತ್ತಿದ್ದಂತೆ ಅದೆಷ್ಟೋ ಜನರು ತನ್ನ ಸಂಗಾತಿಗೆ ಪ್ರಪೋಸ್ ಮಾಡಲು, ಗಿಫ್ಟ್ ನೀಡಿ ಪ್ರೀತಿ ನಿವೇದನೆ ಮಾಡುವುದಕ್ಕಾಗಿ ಕಾಯುತ್ತಿರುತ್ತಾರೆ. ತಮಗೆ ಪ್ರಿಯವಾದವರಿಗಾಗಿ ಪ್ರೇಮಿಗಳ ದಿನದಂದು (Valentine's Day) ವಿಶೇಷ ಉಡುಗೊರೆ (Gift) ನೀಡುವ ಮೂಲಕ ಅವರಲ್ಲಿ ಸಂತೋಷವನ್ನುಂಟು ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಪ್ರೇಯಸಿಗೆ ಉಡುಗೊರೆ ನೀಡುವುದಕ್ಕಾಗಿ ಮಾಡಿದ ಕೆಲಸದಿಂದ ಜೈಲು ಸೇರಿದ್ದಾನೆ. ಉಡುಗೊರೆ ಖರೀದಿಸುವ ಸಲುವಾಗಿ ಆತ ಮೇಕೆಯೊಂದನ್ನು ಕಳ್ಳತನ (Goat Steal) ಮಾಡಿದ್ದು, ಅದರಿಂದ ಬಂದ ಹಣದಲ್ಲಿ ಉಡುಗೊರೆ ಖರೀದಿಸುವ ಆಲೋಚನೆಯಲ್ಲಿದ್ದ, ಆದರೆ ತಾನೂ ಮಾಡಿದ ಕೆಲಸದಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದು, ಕಂಬಿ ಎಣಿಸುವಂತಾಗಿದೆ.
ಕಾಲೇಜು ವಿದ್ಯಾರ್ಥಿಗಳಿಂದ ಕೃತ್ಯ
ತಮಿಳುನಾಡಿನ ವಿಲ್ಲುಪುರಂನಲ್ಲಿ ಈ ಘಟನೆ ನಡೆದಿದೆ. ಗಿಣಗಿ ತಾಲೂಕಿನ ಬೀರಂಗಿ ಮೇಡು ಗ್ರಾಮದ ಕಾಲೇಜು ವಿದ್ಯಾರ್ಥಿ ಎಂ.ಅರವಿಂದ್ ರಾಜ್ (20) ಮತ್ತು ಆತನ ಸ್ನೇಹಿತ ಎಂ.ಮೋಹನ್ (20) ಎಂಬುವವರು ಮೇಕೆ ಕದ್ದು ಸಿಕ್ಕಿಬಿದ್ದಿದ್ದಾರೆ. ಅರವಿಂದ್ ಕುಮಾರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಪ್ರೇಮಿಗಳ ದಿನದ ಪ್ರಯುಕ್ತ ತನ್ನ ಪ್ರೇಯಸಿಗೆ ಉಡುಗೊರೆ ನೀಡುವುದಕ್ಕಾಗಿ ಹಣ ಇಲ್ಲದೇ ಕಾರಣ ಸ್ನೇಹಿತನೊಂದಿಗೆ ಸೇರಿ ಮೇಕೆ ಕದಿಯುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಉಡುಗೊರೆಗೆ ಹಣ ಹೊಂದಿಸಲು ಕಳ್ಳತನ
ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಪ್ರಿಯತಮೆಗೆ ಗಿಫ್ಟ್ ಕೊಡುವುದಕ್ಕೆ ಹಣ ಹೊಂದಿಸಲು ಮೇಕೆ ಕದಿಯುವ ಸ್ಕೆಚ್ ಹಾಕಿದ್ದ ಅರವಿಂದ್, ಭಾನುವಾರ ಮುಂಜಾನೆ, ಮಲೈಯರಸನ್ ಕುಪ್ಪಂ ಗ್ರಾಮದ ನಿವಾಸಿ ಎಸ್ ರೇಣುಕಾ ಎಂಬುವವರ ಮೇಕೆ ಹಿಂಡಿನಲ್ಲಿದ್ದ ಒಂದು ಮೇಕೆಯನ್ನು ಕದ್ದಿದ್ದಾರೆ. ಆದರೆ ಮೇಕೆಗಳು ಬೆದರಿ ಕಿರುಚಾಡಲು ಪ್ರಾರಂಭಿಸಿವೆ. ಇದರಿಂದ ರೇಣುಕಾ ಹೊರಬಂದು ನೋಡಿದಾಗ ಯುವಕರು ಮೇಕೆ ಕದ್ದೊಯ್ಯುತ್ತಿರುವುದನ್ನು ಗಮನಿಸಿ ಕಿರುಚಾಡಿದ್ದಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಎದ್ದು ಬಂದು ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಹಿಡಿದಿದ್ದಾರೆ.
ಇದನ್ನೂ ಓದಿ: Valentines Day: ಪ್ರೇಮಿಗಳ ದಿನ ವಿರೋಧಿಸಿ ಬೀದಿ ನಾಯಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ!
ಥಳಿಸಿ ಪೊಲೀಸರಿಗೆ ಒಪ್ಪಿಸಿದ ಯುವಕರು
ಮೇಕೆ ಕಳ್ಳತನ ಮಾಡಿದ ಯುವಕರನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಯುವಕ ತನ್ನ ಸ್ನೇಹಿತನ ನೆರವಿನೊಂದಿಗೆ ತನ್ನ ಪ್ರೇಯಸಿಗೆ ಗಿಫ್ಟ್ ಕೊಡುವುದಕ್ಕಾಗಿ ಮೇಕೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಮೇಕೆ ಕಳ್ಳತನ ಪ್ರಕರಣಗಳ ಬಗ್ಗೆ ತನಿಖೆ
ಈ ಭಾಗದಲ್ಲಿ ಕೆಲವು ದಿನಗಳಿಂದ ಇದೇ ರೀತಿ ಮೇಕೆ ಕಳ್ಳತನವಾಗುತ್ತಿರುವುದು ಬೆಳಕಿಗೆ ಬಂದಿದೆ. ಒಂದು ವೇಳೆ ಬಂಧಿತ ಆರೋಪಿಗಳಾದ ಅರವಿಂದ್ ಕುಮಾರ್ ಹಾಗೂ ಮೋಹನ್ ಇದರಲ್ಲಿ ಶಾಮೀಲಾಗಿರಬಹುದೇ ಎನ್ನುವ ಅನುಮಾನವಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರೇಮಿಗಳ ದಿನದಂದು ನಾಯಿಗಳಿಗೆ ಮದುವೆ
ತಮಿಳುನಾಡಿನ ಶಿವಗಂಗಾ ಎಂಬಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆಯನ್ನು ವಿರೋಧಿಸಿ ಹಿಂದುತ್ವ ಪರ ಸಂಘಟನೆಯೊಂದು ನಾಯಿಗಳಿಗೆ ಮದುವೆ ಮಾಡಿಸುವುದರ ಮೂಲಕ ವಿಚಿತ್ರವಾಗಿ ಪ್ರತಿಭಟನೆಯನ್ನು ಮಾಡಿದೆ. ವ್ಯಾಲೆಂಟೈನ್ಸ್ ಆಚರಣೆ ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು ಎಂದು ಪ್ರತಿಪಾದಿಸಿರುವ ಆ ಸಂಘಟನೆಯ ಸದಸ್ಯರು ಸೋಮವಾರ 2 ಬೀದಿ ನಾಯಿಗಳನ್ನು ಕರೆ ತಂದು, ಅದಕ್ಕೆ ಬಟ್ಟೆ ಹೊದಿಸಿ, ಹಾರ ಹಾಕಿ, ಅಣುಕು ಮದುವೆ ಮಾಡಿಸಿದ್ದಾರೆ.
ಪ್ರೇಮಿಗಳ ದಿನ ಯುವ ಜೋಡಿಗಳು ಪಬ್, ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಅನುಚಿತವಾಗಿ ವರ್ತಿಸುತ್ತಾರೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದುದು. ನಮ್ಮ ಭಾರತೀಯ ಸಂಸ್ಕೃತಿಗೆ ಅದರದ್ದೇ ಆದ ಮೌಲ್ಯವಿದೆ. ಇಂತಹವರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಿಸಿ ನಮ್ಮ ದೇಶಕ್ಕೆ ದ್ರೋಹ ಮಾಡುತ್ತಿದ್ದಾರೆ. ಹಾಗಾಗಿ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಅವಕಾಶ ನೀಡಬಾರದು ಎಂದು ಬೀದಿ ನಾಯಿಗಳಿಗೆ ಅಣಕು ಮದುವೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ