ಬೆಂಗಳೂರು: ಈತ ಪೊಲೀಸ್ ಕಾನ್ಸ್‌ಟೇಬಲ್ (Police Constable) ಆಗಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಶಾರ್ಟ್ ಟೈಮ್ನಲ್ಲಿ ಕೈ ತುಂಬ ಹಣ ಮಾಡಬೇಕು ಅನ್ಕೊಂಡ ಈತ ರೈಸ್ ಪುಲ್ಲಿಂಗ್ (Rice Pulling) ಎಂಬ ಅದೃಷ್ಟದ ಆಟಕ್ಕೆ ಕೈ ಹಾಕಿದ್ದ. ಇದ್ದ ಹಣವನ್ನೂ ಕಳೆದುಕೊಂಡಿದ್ದಾನೆ. ಹೌದು, ಈ ಫೋಟೋ ಕಾಣಿಸುತ್ತಿರುವ ವ್ಯಕ್ತಿಯ ಹೆಸರು ನಟೇಶ್. ಸಿಎಆರ್ (CAR) ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ಈತ ಪೊಲೀಸ್ ಇಲಾಖೆಯಲ್ಲಿ (Police Department) ಕೆಲಸ ಮಾಡುತ್ತಿದ್ದ. ಕೆಲಸದ ನಡುವೆಯೂ ಹಣ ಮಾಡುವ ಆಸೆಗೆ ಬಿದ್ದಿದ್ದ ನಟೇಶ್, ರೈಸ್ ಪುಲ್ಲಿಂಗ್ ದಂಧೆಯ ಆಮಿಷಕ್ಕೆ ಬಲಿಯಾಗಿದ್ದ. ಹಣಕಾಸು ಹೊಡೆತಕ್ಕೆ ಸಿಕ್ಕ ನಟೇಶ್, ಪೊಲೀಸ್ ಕೆಲಸ ಬಿಟ್ಟು ತಾನೇ ರೈಸ್ ಪುಲ್ಲಿಂಗ್ ದಂಧೆ ಮಾಡುವುದಕ್ಕೆ ಮುಂದಾಗಿದ್ದ. ಇದೀಗ ಈತನೇ ಪೊಲೀಸರ ಅತಿಥಿಯಾಗಿದ್ದಾನೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೈಸ್ ಪುಲ್ಲಿಂಗ್ ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಅದೃಷ್ಟದ ವಸ್ತು ಕೊಡುವುದಾಗಿ ಆಮಿಷವೊಡ್ಡಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಶ್ರೀಮಂತರಿಗೆ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: SA Ramadas: ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ರಾಮದಾಸ್ ಸಿಡಿಮಿಡಿ, ಮಾತುಕತೆಗೆ ಬಂದ ಪ್ರತಾಪ್ ಸಿಂಹ ಬರಿಗೈಯಲ್ಲಿ ವಾಪಸ್!
ಬಂಧಿತರನ್ನು ಸಿಎಆರ್ ಮಾಜಿ ಕಾನ್ಸ್‌ಟೇಬಲ್ ನಟೇಶ್, ವೆಂಕಟೇಶ್ ಮತ್ತು ಸೋಮಶೇಖರ್ ಎಂದು ಗುರ್ತಿಸಲಾಗಿದೆ. ರೈಸ್ ಪುಲ್ಲಿಂಗ್ ಮೆಷಿನ್ ನೀಡುವುದಾಗಿ ಲಕ್ಷಾಂತರ ಹಣ ಪಡೆಯುತ್ತಿದ್ದರು. ಒಂದು ಮೆಷಿನ್ ಮೂಲಕ ಡೆಮೋ ಕೊಟ್ಟು ಸುಲಭವಾಗಿ ಯಾಮಾರಿಸುತ್ತಿದ್ದರು. ಹೀಗೆ 28 ಲಕ್ಷ ರೂಪಾಯಿ ಹಣ ಪಡೆದಿದ್ದ ಮೂವರು ರೈಸ್ ಪುಲ್ಲಿಂಗ್ ಮೆಷಿನ್ ಕೊಡದೆ ವಂಚಿಸಿದ್ದರು.
ಸದ್ಯ ಬಂಧಿತ ಆರೋಪಿಗಳಿಂದ 28 ಲಕ್ಷ ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಮೂರು ಐಷಾರಾಮಿ ಕಾರುಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
(ವರದಿ: ಮುನಿರಾಜು, ಕ್ರೈಮ್ ಬ್ಯೂರೋ, ನ್ಯೂಸ್ 18)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ