ಸಿಲಿಕಾನ್ ಸಿಟಿ ಮಂದಿಯನ್ನು ಬೆಚ್ಚಿಬೀಳಿಸುವ ಘಟನೆಯೊಂದು ಬೆಂಗಳೂರಲ್ಲಿ ವರದಿಯಾಗಿದೆ. ಫೋನ್ ರಿಸೀವ್ ಮಾಡದೇ ಕಡೆಗಣಿಸಿದ್ದಕ್ಕೆ ಕ್ಯಾಬ್ ಚಾಲಕನೋರ್ವ ಕೆಲ ತಿಂಗಳಿಂದ ಪರಿಚಯವಾಗಿದ್ದ ಮಹಿಳೆಯನ್ನು ಕೊಲೆ ಮಾಡಿ, ಶವವನ್ನು ಚರಂಡಿಗೆ ಎಸೆದಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯನ್ನು ಕೊಂದು ಶವವನ್ನು ಚರಂಡಿಗೆ ಎಸೆದ ಕ್ಯಾಬ್ ಚಾಲಕ
27 ವರ್ಷದ ಕ್ಯಾಬ್ ಚಾಲಕ ಭೀಮರಾಯ ಅಲಿಯಾಸ್ ಭೀಮಾ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದು, 48 ವರ್ಷದ ದೀಪಾ ಜಿ ಎಂಬ ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಶವವನ್ನು ಚರಂಡಿಗೆ ಎಸೆದಿದ್ದಾನೆ. ಎಂಸಿಇಸಿಎಚ್‌ಎಸ್ ಲೇಔಟ್ ಬಳಿ ಸಾರ್ವಜನಿಕರು ಕೊಳೆತ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆರೋಪಿ ಮತ್ತು ಘಟನೆಗೆ ಕಾರಣ ಹೊರಬಿದ್ದಿದೆ.
ದೀಪಾ.ಜಿ ಫೋನ್ ಸ್ವಿಚ್‌ಆಫ್ ಆಗಿದ್ದು, ಆಕೆ ಕಾಣಿಸದೇ ಇದ್ದ ವೇಳೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಖಾಕಿ ಪಡೆ ಅಂತೂ ಹಂತಕನನ್ನು ಪತ್ತೆ ಮಾಡಿ ಘಟನೆ ಬಗ್ಗೆ ಬಾಯ್ಬಿಡಿಸಿದೆ.
ಇದನ್ನೂ ಓದಿ:Crime News: 16 ಬಾರಿ ಚುಚ್ಚಿ ಚುಚ್ಚಿ ಯುವತಿಯ ಕೊಲೆ; ಇದು ದಿನಕರ್-ಲೀಲಾ ಪ್ರೇಮ್ ಕಹಾನಿ
ಘಟನೆಯ ಸುತ್ತ ನಡೆದಿದ್ದೇನು?
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿಯ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿದ್ದ ದೀಪಾ ಬೆಂಗಳೂರಿನ, ಇಂದಿರಾನಗರದ ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಆರೋಪಿ ಭೀಮಾ, ದೀಪಾ ಮತ್ತು ಅವರ ಕುಟುಂಬ ಸದಸ್ಯರಿಗೆ ಸುಮಾರು ಒಂದೂವರೆ ವರ್ಷದಿಂದ ಪರಿಚಯವಾಗಿದ್ದರು. ಹೀಗೆ ಇಬ್ಬರೂ ಸ್ನೇಹಿತರಾಗಿದ್ದು, ಫೋನ್‌ನಲ್ಲಿ ಮಾತನಾಡುವುದು, ಭೇಟಿಯಾಗುವುದು ಮಾಡುತ್ತಿದ್ದರು.
ಆದರೆ ಫೆಬ್ರವರಿ 27 ರಂದು ದೀಪಾ ನಾಪತ್ತೆಯಾಗಿದ್ದು, ಸಂಬಂಧಿ ಬಾಲಾಜಿ ಜಗನ್ನಾಥ್ ಫೆಬ್ರವರಿ 28 ರಂದು ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಫೆಬ್ರವರಿ 27 ರಂದು ರಾತ್ರಿ 7.35 ಕ್ಕೆ ದೀಪಾ ಗೇಟ್‌ನಿಂದ ನಿರ್ಗಮಿಸಿ ರಸ್ತೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿ ತೋರಿಸಿದೆ. ಮರುದಿನದವರೆಗೆ ಆನ್ ಆಗಿದ್ದ ಆಕೆಯ ಮೊಬೈಲ್ ಫೋನ್ ನಂತರ ಸ್ವಿಚ್ ಆಫ್ ಆಗಿತ್ತು. ಇದೇ ವೇಳೆ ಕೊಯಮತ್ತೂರಿನ ದೀಪಾ ಅವರ ಚಿಕ್ಕಪ್ಪ ಕೃಷ್ಣಮೂರ್ತಿ ಎನ್‌ವಿ ನಗರಕ್ಕೆ ಆಗಮಿಸಿ ಕುಟುಂಬದೊಂದಿಗೆ ಹುಡುಕಾಟ ನಡೆಸಿದರು.
ಇದನ್ನೂ ಓದಿ: ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ವಾಟರ್ ಟ್ಯಾಂಕ್ಗೆ ಹಾಕಿದ್ದ ಪತಿ; ಶಾಕಿಂಗ್ ಕೃತ್ಯ ಬಯಲಾಗಿದ್ದೆ ರೋಚಕ!
ನಂತರ ಆದಾಗಲೇ ವಿಚಾರಣೆ ಮತ್ತು ಹುಡುಕಾಟ ಆರಂಭಿಸಿದ ಪೋಲಿಸರಿಗೆ ಬಾಗಲೂರು ಪೊಲೀಸರು ಮಹಿಳೆಯ ಶವವೊಂದು ಪತ್ತೆ ಆಗಿರುವುದರ ಬಗ್ಗೆ ಮಾಹಿತಿ ನೀಡಿದ್ದರು. "ಮಾರ್ಚ್ 5 ರಂದು ಬಾಗಲೂರು ಪೊಲೀಸರು ಮೃತದೇಹದ ಬಗ್ಗೆ ನಮಗೆ ಮಾಹಿತಿ ನೀಡಿದರು. ದೀಪಾ ಅವರ ಕೈ ಗಡಿಯಾರ, ಚಿನ್ನದ ಉಂಗುರ ಮತ್ತು ಬಟ್ಟೆಯ ಸಹಾಯದಿಂದ ನಾವು ಅವಳನ್ನು ಗುರುತಿಸಿದೆವು. ಕ್ಯಾಬ್ ಡ್ರೈವರ್ ಭೀಮಾ ಅವಳನ್ನು ಕೊಲೆ ಮಾಡಿರಬಹುದು ಎಂದು ನಾವು ಶಂಕಿಸಿದ್ದೇವೆ" ಎಂದು ಕೃಷ್ಣಮೂರ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೀಪಾ ಕುಟುಂಬಕ್ಕೆ ಪರಿಚಿತನಾಗಿದ್ದ ಆರೋಪಿ ಭೀಮಾ
ಭೀಮಾ ಕುಟುಂಬ ಸದಸ್ಯರಿಗೆ ಪರಿಚಯವಾಗಿದ್ದ, ಏಳು ತಿಂಗಳ ಹಿಂದೆ ಕಾರು ಖರೀದಿಸಿದ ನಂತರ ಮನೆಗೆ ಬಂದು ನಮ್ಮೆಲ್ಲರಿಗೆ ಸಿಹಿ ಹಂಚಿ ಹೋಗಿದ್ದ. ಕೆಲವು ದಿನಗಳ ಹಿಂದೆ ದೀಪಾ ನನಗೆ ಕರೆ ಮಾಡಿ ಭೀಮಾ ನಮ್ಮನ್ನು ನಂದಿ ಬೆಟ್ಟಕ್ಕೆ ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದ್ದಳು, ಆದರೆ ನಾನು ಇದಕ್ಕೆ ಒಪ್ಪಿರಲಿಲ್ಲ ಮತ್ತು ಆತನಿಂದ ದೂರವಿರುವಂತೆ ಹೇಳಿದ್ದೆ ಎಂದು ಕೃಷ್ಣಮೂರ್ತಿ ಪೊಲೀಸರಿಗೆ ತಿಳಿಸಿದ್ದರು.
ಮಹಿಳೆಯನ್ನು ಭೀಮಾ ಹತ್ಯೆಗೈದಿದ್ದೇಕೆ?
ಕೃಷ್ಣಮೂರ್ತಿ ದೂರಿನ ಆಧಾರದ ಮೇಲೆ ಪೊಲೀಸರು ಭೀಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಫೆಬ್ರವರಿ 27 ರಂದು ಇಂದಿರಾನಗರದ ಅಂಗಡಿಯೊಂದಕ್ಕೆ ತನ್ನನ್ನು ಡ್ರಾಪ್ ಮಾಡುವಂತೆ ದೀಪಾ ಭೀಮನನ್ನು ಕೇಳಿದ್ದಳು. ಡ್ರೈವಿಂಗ್ ಮಾಡುವಾಗ ಭೀಮ ದೀಪಾಳನ್ನು ಈ ಹಿಂದಿನಂತೆ ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದ್ದಾನೆ. ಆದಾದ ನಂತರ ಇಬ್ಬರ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆದಿದೆ. ನಂತರ ಆರೋಪಿ ಭೀಮಾ ಕೇಂಬ್ರಿಡ್ಜ್ ರಸ್ತೆಯ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ರಾತ್ರಿ 8.30 ಕ್ಕೆ ಕತ್ತು ಹಿಸುಕಿ ಕೊಂದಿದ್ದಾನೆ. ಮಧ್ಯರಾತ್ರಿಯ ನಂತರ ಶವವನ್ನು ಬಾಗಲೂರು ಬಳಿಯ ಚರಂಡಿಗೆ ಎಸೆದಿರುವುದಾಗಿ ಭೀಮಾ ಪೊಲೀಸರಿಗೆ ತಿಳಿಸಿದ್ದಾರೆ.
ಬೆಂಗಳೂರಿನ ಮುರುಗೇಶಪಾಳ್ಯದಲ್ಲಿ ವಾಸ ಮಾಡುತ್ತಿದ್ದ ಉತ್ತರ ಕರ್ನಾಟಕ ಮೂಲದ ಆರೋಪಿ ಭೀಮನನ್ನು ಮಾರ್ಚ್ 5 ರಂದು ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ